ಶುಕ್ರವಾರ, ಡಿಸೆಂಬರ್ 4, 2020
21 °C
ಬಿಹಾರ ಚುನಾವಣೆ: ಕಾಂಗ್ರೆಸ್‌ ಸಮಾವೇಶದಲ್ಲಿ ವಾಗ್ದಾಳಿ l ನಿತೀಶ್‌ ಭರವಸೆ ಸುಳ್ಳು

ಮೋದಿ ಮತಯಂತ್ರಗಳಿಗೆ ಹೆದರಲ್ಲ: ರಾಹುಲ್ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅರಾರಿಯಾ (ಬಿಹಾರ): ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ‘ಮೋದಿ ಮತ ಯಂತ್ರ’ (ಎಂವಿಎಂ) ಎಂದು ಕರೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಂವಿಎಂ ಅಥವಾ ‘ಮೋದಿ ಅವರ ಮಾಧ್ಯಮ’ಗಳಿಗೆ ಹೆದರುವುದಿಲ್ಲ ಎಂದು ಹೇಳಿದರು. 

ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು. 

‘ಸತ್ಯ ಎಂದರೆ ಸತ್ಯ. ನ್ಯಾಯ ಎಂದರೆ ನ್ಯಾಯ. ಆ ವ್ಯಕ್ತಿಯ ಸಿದ್ಧಾಂತ ವಿರುದ್ಧ ನಾನು ಹೋರಾಡುತ್ತಿದ್ದೇನೆ. ಅವರ ಸಿದ್ಧಾಂತಗಳ ವಿರುದ್ಧ ನಾವೆಲ್ಲರೂ ಹೋರಾಡುತ್ತಿದ್ದೇವೆ. ಅವರ ಚಿಂತನೆ ಗಳನ್ನು ನಾವು ಸೋಲಿಸುತ್ತೇವೆ’ ಎಂದರು.

ಮಾಧೇಪುರದ ಬಿಹಾರಿಗಂಜ್‌ನಲ್ಲಿ ಮಾತನಾಡಿದ ಅವರು, ಮೋದಿ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ‘ಬಿಹಾರದಲ್ಲಿ ಬದಲಾವಣೆ ತರುತ್ತೇನೆ, ಯುವಕರಿಗೆ ಉದ್ಯೋಗ ಕೊಡುತ್ತೇನೆ ಎಂದು ಭರವಸೆ ನೀಡಿದ್ದ ನಿತೀಶ್, ತಮ್ಮ ಮಾತು ಮರೆತಿದ್ದಾರೆ. ಉದ್ಯೋಗದ ಕತೆ ಏನಾಯಿತು ಎಂದು ಸಾರ್ವಜನಿಕ ಸಭೆಗಳಲ್ಲಿ ‍ಪ್ರಶ್ನಿಸುವ ಯುವರಕನ್ನು ಬೆದರಿಸಿ ಓಡಿಸಲಾಗುತ್ತಿದೆ’ ಎಂದು ಆರೋಪಿಸಿದರು. ಇದೇ ವೇಳೆ ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನನ್ನೂ ಟೀಕಿಸಿದರು.

‘ಎಲ್‌ಜೆಪಿಯಿಂದ ಪಕ್ಷಕ್ಕೆ ಹಾನಿ’

ಪಟ್ನಾ: ಬಿಹಾರ ವಿಧಾನಸಭೆಯ ಮೊದಲೆರಡು ಹಂತಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಗಳ ಭವಿಷ್ಯವನ್ನು ಲೋಕಜನಶಕ್ತಿ ಪಕ್ಷ (ಎಲ್‌ಜೆಪಿ) ಹಾನಿಗೊಳಿಸಿದೆ ಎಂಬ ವರದಿಯಿಂದ ಕಂಗೆಟ್ಟಿರುವ ಜೆಡಿಯು, ಚಿರಾಗ್ ಪಾಸ್ವಾನ್ ವಿರುದ್ಧ ಹರಿಹಾಯ್ದಿದೆ.

ಟ್ವೀಟ್ ಮಾಡಿರುವ ಜೆಡಿಯು ವಕ್ತಾರ ಅಜಯ್ ಅಲೋಕ್, ‘ಭ್ರಷ್ಟಾಚಾರದಲ್ಲಿ ಜೈಲು ಸೇರಿರುವ ಲಾಲು ಪುತ್ರ ತೇಜಸ್ವಿ ಜತೆ ಗುರುತಿಸಿಕೊಳ್ಳುವ ಚಿರಾಗ್ ಅವರು ಮತ್ತೊಂದು ಕಡೆ ತಾನು ಪ್ರಧಾನಿ ನರೇಂದ್ರ ಮೋದಿ ಅವರ ಬಂಟ ಹನುಮ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಜೆಡಿಯು ಶಾಸಕ ಉಚ್ಚಾಟನೆ: ಎಲ್‌ಜೆಪಿ ಟಿಕೆಟ್‌ನಡಿ ಗಾಯ್‌ಘಾಟ್‌ ಕ್ಷೇತ್ರದಿಂದ ಸ್ಪರ್ಧಿಸಿರುವ ತಮ್ಮ ಪುತ್ರಿ ಪರವಾಗಿ ಪ್ರಚಾರ ನಡೆಸಿದ ಜೆಡಿಯು ಶಾಸಕ ದಿನೇಶ್ ಕುಮಾರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದ್ದು, ಕಾರಣ ಕೇಳಿ ನೋಟಿಸ್ ನೀಡಲಾಗಿದೆ.

ಎನ್‌ಡಿಎ ಜತೆ ಬಿಹಾರದ ಜನ ಇದ್ದಾರೆ: ಮೋದಿ

ನವದೆಹಲಿ: ಬಿಹಾರದ ಜನರು ಉತ್ತಮ ಆಡಳಿತದ ರಾಜಕಾರಣವನ್ನೇ ಆಯ್ಕೆ ಮಾಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು, ಭದ್ರತೆ, ಉದ್ಯೋಗ ಹಾಗೂ ಸ್ವ ಉದ್ಯೋಗಿಗಳಿಗೆ ಹೊಸ ಅವಕಾಶಗಳನ್ನು ಎನ್‌ಡಿಎ ಮಾತ್ರ ನೀಡಬಲ್ಲದು ಎಂದಿದ್ದಾರೆ.

ಕೆಲವು ದಿನಗಳ ಹಿಂದೆ ಬಿಹಾರದ ಸಸಾರಾಮ್‌ನಿಂದ ಸಹರ್ಸಾವರೆಗೆ ಚುನಾವಣೆ ಪ್ರಚಾರ ನಿಮಿತ್ತ ಸುತ್ತಾಡುವಾಗ, ಸೋದರ–ಸೋದರಿಯರ ಆಶೀರ್ವಾದ ಪಡೆಯುವ ಅವಕಾಶ ಲಭಿಸಿತ್ತು ಎಂದು ಮೋದಿ ಹೇಳಿದ್ದಾರೆ.

ಎನ್‌ಡಿಎ ಚುನಾವಣಾ ರ‍್ಯಾಲಿಗಳಲ್ಲಿ ಯುವಕರು ಹಾಗೂ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿತ್ತು ಎಂದು ಸ್ಮರಿಸಿರುವ ಅವರು, ‘ಯುವಕರು ಹಾಗೂ ಮಹಿಳೆಯರು ಮೈತ್ರಿಕೂಟದ ಮೇಲೆ ಭರವಸೆ ಇಟ್ಟಿದ್ದಾರೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು