ಬುಧವಾರ, ಮಾರ್ಚ್ 29, 2023
23 °C

ಆಸಿಡ್‌ ದಾಳಿ ಪ್ರಕರಣ: ಫ್ಲಿಪ್‌ಕಾರ್ಟ್, ಅಮೆಜಾನ್‌ಗೆ ದೆಹಲಿ ಪೊಲೀಸರಿಂದ ನೋಟಿಸ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿಯಲ್ಲಿ ನಡೆದ 17 ವರ್ಷದ ಬಾಲಕಿಯ ಮೇಲಿನ ಆಸಿಡ್‌ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಇ–ಕಾಮರ್ಸ್ ವೇದಿಕೆಗಳಾದ ಫ್ಲಿಪ್‌ಕಾರ್ಟ್, ಅಮೆಜಾನ್‌ಗೆ ದೆಹಲಿ ಪೊಲೀಸರು ಮತ್ತು ದೆಹಲಿ ಮಹಿಳಾ ಆಯೋಗವು ಗುರುವಾರ ನೋಟಿಸ್ ನೀಡಿದೆ.

ಪಶ್ಚಿಮ ದೆಹಲಿಯ ಉತ್ತಮ್‌ ನಗರದ ಮೋಹನ್‌ ಗಾರ್ಡನ್‌ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಬಾಲಕಿ ಮೇಲೆ ಆಸಿಡ್‌ ಮಾದರಿಯ ರಾಸಾಯನಿಕ ದ್ರವ ಎರಚಿ ಪರಾರಿಯಾಗಿದ್ದರು. 

ಸದ್ಯ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳು ಆಸಿಡ್‌ ಮಾದರಿಯ ರಾಸಾಯನಿಕ ದ್ರವವನ್ನು ಆನ್‌ಲೈನ್‌ನಲ್ಲಿ ಖರೀದಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. 

ಆರೋಪಿಗಳ ಹೇಳಿಕೆಗಳನ್ನು ಆಧರಿಸಿ ಫ್ಲಿಪ್‌ಕಾರ್ಟ್, ಅಮೆಜಾನ್‌ಗೆ ನೋಟಿಸ್ ನೀಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. 

ಸುಪ್ರೀಂ ಕೋರ್ಟ್ ನಿಷೇಧದ ಹೊರತಾಗಿಯೂ, ಆನ್‌ಲೈನ್ ವೇದಿಕೆಯಲ್ಲಿ ಆಸಿಡ್‌ ಮಾರಾಟ ಮಾಡುತ್ತಿರುವ ಬಗ್ಗೆ ಸ್ಪಷ್ಟನೆ ನೀಡುವಂತೆ ದೆಹಲಿ ಮಹಿಳಾ ಆಯೋಗವು  ನೋಟಿಸ್‌ ಜಾರಿ ಮಾಡಿದೆ.

ಬಾಲಕಿಯೊಂದಿಗೆ ವೈಷಮ್ಯ ಹೊಂದಿದ್ದ 20 ವರ್ಷದ ಸಚಿನ್ ಅರೋರಾ ಈ ದಾಳಿಯನ್ನು ಯೋಜಿಸಿದ್ದ. ಆತನಿಗೆ 19 ವರ್ಷದ ಹರ್ಷಿತ್ ಅಗರ್ವಾಲ್ ಮತ್ತು 22 ವರ್ಷದ ವೀರೇಂದ್ರ ಸಿಂಗ್ ಸಹಾಯ ಮಾಡಿದ್ದರು.

ಸಚಿನ್ ಮತ್ತು ಹರ್ಷಿತ್ ಶಾಲಾ ಬಾಲಕಿಯ ಮೇಲೆ ಆಸಿಡ್ ಎರಚಿದ್ದರು. ಇತ್ತ ವೀರೇಂದ್ರ ಸ್ಕೂಟರ್ ಮತ್ತು ಮೊಬೈಲ್ ಫೋನ್ ಅನ್ನು ಮತ್ತೊಂದು ಸ್ಥಳದಲ್ಲಿ ಬಚ್ಚಿಟ್ಟಿದ್ದು, ಪೊಲೀಸರನ್ನು ದಾರಿ ತಪ್ಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. 

ನೋಟಿಸ್‌ಗೆ ಸಂಬಂಧಿಸಿ ಇ-ಕಾಮರ್ಸ್ ಪೋರ್ಟಲ್ಸ್ ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ.

ಇವನ್ನೂ ಓದಿ...

ದೆಹಲಿ: ಬೈಕ್‌ನಲ್ಲಿ ಬಂದು ಬಾಲಕಿ ಮೇಲೆ ಆಸಿಡ್‌ ದಾಳಿ 

ದೆಹಲಿ: ಬಾಲಕಿ ಮೇಲೆ ಆಸಿಡ್‌ ದಾಳಿ ಪ್ರಕರಣ, ಮೂವರು ಆರೋಪಿಗಳ ಬಂಧನ

ದೆಹಲಿ ಆಸಿಡ್‌ ದಾಳಿ ಪ್ರಕರಣ: ಪೊಲೀಸ್ ಕಮಿಷನರ್‌ಗೆ ರೇಖಾ ಶರ್ಮಾ ಪತ್ರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು