ಮಂಗಳವಾರ, ಜೂನ್ 22, 2021
28 °C

65ರ ವೃದ್ಧೆಗೆ 13 ತಿಂಗಳಲ್ಲಿ 8 ಮಕ್ಕಳು...! ಅಸಲಿಗೆ ಕಥೆಯೇ ಬೇರೆ

ಅಭಯ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ಪಟಣ: ಬಿಹಾರದ ಮುಜಪ್ಫರಪುರದ 65 ವರ್ಷದ ಮಹಿಳೆ 13 ತಿಂಗಳಲ್ಲಿ 8 ಮಕ್ಕಳಿಗೆ ಜನ್ಮ ನೀಡಿ, ಪ್ರತಿ ಹೆರಿಗೆಯ ನಂತರ ₹1,400 ಸರ್ಕಾರದ ನೆರವಿನ ಫಲಾನುಭವ ಪಡೆದುಕೊಂಡಿದ್ದಾರೆ!

ಹೀಗೆ ಕಳ್ಳಲೆಕ್ಕ ನೀಡಿ ಹಣ ಲೂಟಿ ಮಾಡಿರುವುದು ಬಿಹಾರದ ಹಗರಣವೊಂದರಲ್ಲಿ ಬಯಲಾಗಿದೆ.

ರಾಷ್ಟ್ರೀಯ ಗ್ರಾಮ ಸ್ವಾಸ್ಥ್ಯ ಯೋಜನೆಯಲ್ಲಿ ಮಹಿಳೆಯ ಹೆಸರಿನಲ್ಲಿ ಹಣ ಲೂಟಿ ಮಾಡಲಾಗಿದೆ. ಅನುಮಾನಾಸ್ಪದವಾಗಿ ಕಂಡು ಬಂದಿರು ಪ್ರಕರಣಗಳಲ್ಲಿ ಮಹಿಳೆಯರನ್ನು ಪತ್ತೆ ಮಾಡಲಾಗಿದ್ದು, ಆಘಾತಕಾರಿ ಸಂಗತಿಗಳು ಬಯಲಾಗಿವೆ. 13 ತಿಂಗಳಲ್ಲಿ 8 ಮಕ್ಕಳಿಗೆ ಜನ್ಮ ನೀಡಿದರು ಎನ್ನಲಾದ ನಿರ್ದಿಷ್ಟ ಮಹಿಳೆಯನ್ನು ಮುಜಪ್ಫರಪುರದಲ್ಲಿ ಪತ್ತೆ ಮಾಡಲಾಗಿದೆ. ಆದರೆ, ಶಾಂತಿ ದೇವಿ ಎಂಬ ಆ ಮಹಿಳೆಯು ದಾಖಲೆಗಳಲ್ಲಿ ನಮೂದಿಸಿರುವ ಅವಧಿಯಲ್ಲಿ ಯಾವುದೇ ಮಗುವಿಗೆ ಜನ್ಮ ನೀಡೇ ಇಲ್ಲ.

‘ಶಾಂತಿ ದೇವಿ ಕಳೆದ 20 ವರ್ಷಗಳಲ್ಲಿ ಯಾವುದೇ ಮಗು ಹಡೆದಿಲ್ಲ. ಅವರ ಕಿರಿಯ ಮಗನಿಗೆ 20 ವರ್ಷ’ ಎಂದು ಆಕೆಯ ಸಂಬಂಧಿಯೊಬ್ಬರು ಸ್ಥಳೀಯ ಪ್ರಮುಖ ದಿನಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.

ಕೌತುಕದ ಸಂಗತಿ ಏನೆಂದರೆ, ಮುಜಪ್ಫರಪುರದ ಮುಷಾರಿ ಬ್ಲಾಕ್‌ನಲ್ಲಿ ನೆಲೆಸಿರುವ ವೃದ್ಧೆಗೆ ಜುಲೈ–2019 ಮತ್ತು ಆಗಸ್ಟ್–2020ರ ನಡುವೆ ರಾಷ್ಟ್ರೀಯ ಗ್ರಾಮ ಸ್ವಸ್ಥ್ಯ ಯೋಜನೆಯಡಿ ಎಂಟು ಬಾರಿ ₹1,400 ತಮ್ಮ ಖಾತೆಗೆ ಹಣ ಬಂದಿರುವುದೇ ಗೊತ್ತಿಲ್ಲ. ಪ್ರತಿ ಬಾರಿ ಜಮೆಯಾಗಿರುವ ಸರ್ಕಾರದ ಹಣವನ್ನು ಯಾರೋ ಮರುದಿನವೇ ಡ್ರಾ ಮಾಡಿದ್ದಾರೆ. ಈ ವ್ಯತ್ಯಾಸಗಳ ಬಗ್ಗೆ ಶಾಂತಿ ದೇವಿ ಅವರ ಕುಟುಂಬವು ಬ್ಯಾಂಕ್‌ಗೆ ಮಾಹಿತಿ ನೀಡಿದೆ. ಆತಂಕಕಾರಿ ಸಂಗತಿ ಎಂದರೆ, ಈ ಕಳ್ಳಲೆಕ್ಕ ಶಾಂತಿದೇವಿ ಅವರೊಬ್ಬರ ವಿಚಾರದಲ್ಲಿ ನಡೆದಿರುವುದಲ್ಲ. ಇದರ ಆಳ ಅಗಲ ವಿಸ್ತಾರವಾಗಿರುವುದು ಗೊತ್ತಾಗಿದೆ.

ಶಾಂತಿ ದೇವಿ ಅವರು ವಾಸವಾಗಿರುವ ಬ್ಲಾಕ್‌ನಲ್ಲೇ ನೆಲೆಸಿರುವ ಲೀಲಾ ದೇವಿ ಕೂಡ ಕಳೆದ 13 ತಿಂಗಳಲ್ಲಿ ಎಂಟು ಬಾರಿ ಶಿಶುಗಳನ್ನು ಹೆರಿಗೆ ಮಾಡಿರುವುದಾಗಿ ದಾಖಲೆಗಳನ್ನು ಸೃಷ್ಟಿ ಮಾಡಲಾಗಿದೆ. ವಾಸ್ತವದಲ್ಲಿ, ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆಕೆ ಈ ಹತ್ತು ವರ್ಷಗಳಲ್ಲಿ ಮಕ್ಕಳನ್ನೇ ಹಡೆದಿಲ್ಲ. ಆಕೆಯ ಪ್ರಕರಣದಲ್ಲಿ ಮತ್ತೊಂದು ಕೌತುಕವಿದೆ. ಲೀಲಾ ದೇವಿ ಒಂದೇ ದಿನದಲ್ಲಿ ಎರಡು ಬಾರಿ ಶಿಶುಗಳನ್ನು ಹೆತ್ತಿರುವುದಾಗಿ ದಾಖಲೆಗಳನ್ನು ತಯಾರಿಸಿ ಹಣ ಹೊಡೆಯಲಾಗಿದೆ. ಶಾಂತಿ ದೇವಿ ಅವರ ಪ್ರಕರಣದಂತೆಯೇ ಇವರ ಖಾತೆಗೂ 8 ಬಾರಿ ಹಣ ಸಂದಾಯವಾಗಿದ್ದು, ಮರುದಿನ ಯಾರೋ ಡ್ರಾ ಮಾಡಿಕೊಂಡಿದ್ದಾರೆ.

ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಾಗರಿಕ ಶಸ್ತ್ರಚಿಕಿತ್ಸಕ ಡಾ ಎಸ್ಪಿ ಸಿಂಗ್ ಭರವಸೆ ನೀಡಿದ್ದಾರೆ. ‘ಪ್ರಕರಣದ ಅಮೂಲಾಗ್ರ ನಡೆಸುತ್ತೇವೆ. ಅಪರಾಧಿಗಳಿಗೆ ಶಿಕ್ಷೆ ಕೊಡಿಸುತ್ತೇವೆ,’ ಎಂದು ಸಿಂಗ್ ಹೇಳಿದ್ದಾರೆ.

‘ಹಗರಣದ ತನಿಖೆ ನಡೆಸಲು ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಈ ಪ್ರಕರಣದಲ್ಲಿ ಯಾವುದೇ ತಪ್ಪಿತಸ್ಥರನ್ನು ಬಿಡುವುದಿಲ್ಲ’ ಎಂದು ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ಗುರುವಾರ ಇಲ್ಲಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು