ಮಂಗಳವಾರ, ಮಾರ್ಚ್ 28, 2023
23 °C
ಸೆಂಟ್ರಲ್‌ ವಿಸ್ತಾ ಅವೆನ್ಯೂ ಯೋಜನೆಯಡಿ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ ವರೆಗೂ ಅಭಿವೃದ್ಧಿ

ಹಳೆಯ ಸಂಸತ್ತು ಅಸುರಕ್ಷಿತ, ಹೊಸ ಸಂಸತ್ತು ಕಾಲಮಿತಿಯಲ್ಲಿ ಪೂರ್ಣ: ಕೇಂದ್ರ ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ನೂತನ ಸಂಸತ್‌ ಭವನ ನಿರ್ಮಾಣ ಕಾಲಮಿತಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ಶನಿವಾರ ಹೇಳಿದರು.  

ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ ವರೆಗೆ ಪುನಾಭಿವೃದ್ಧಿ ಕಾರ್ಯಗಳೂ ಸರಿಯಾದ ಸಮಯದಲ್ಲಿ ಮುಗಿಯಲಿವೆ ಎಂದೂ ಅವರು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಸೆಂಟ್ರಲ್‌ ವಿಸ್ತಾ ಅವೆನ್ಯೂ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಇವುಗಳ ನಿರ್ಮಾಣ ಮಾಡಲಾಗುತ್ತಿದೆ.  

ಪ್ರಸ್ತುತ ಸಂಸತ್‌ ಭವನ ಅಸುರಕ್ಷಿತವಾಗಿದೆ. ಇದು ನಿರ್ಮಾಣವಾದಾಗ ಭೂಕಂಪ ವಲಯ 2 ರಲ್ಲಿತ್ತು. ಆದರೆ ಈಗ ಆ ಪ್ರದೇಶವು ಭೂಕಂಪ ವಲಯದ ನಾಲ್ಕರಲ್ಲಿದೆ. ಆದ್ದರಿಂದ ಹೊಸ ಸಂಸತ್‌ ಭವನ ಅಗತ್ಯವಿದೆ ಎಂದು ಸಚಿವ ಪುರಿ ಅವರು ಹೊಸ ಸಂಸತ್‌ ಭವನ ನಿರ್ಮಾಣವನ್ನು ಸಮರ್ಥಿಸಿಕೊಂಡರು.  

ಇಂಡಿಯಾ ಟುಡೇ ಸಮಾವೇಶ 2021ರಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಸಚಿವರು, ಈಗ ಅಸ್ತಿತ್ವದಲ್ಲಿರುವ ಕಟ್ಟಡವನ್ನು ಸಂಸತ್‌ಭವನವಾಗಿ ವಿನ್ಯಾಸಗೊಳಿಸಲಾಗಿಲ್ಲ. ಆದ್ದರಿಂದ ಇಲ್ಲಿ ಹೆಚ್ಚಿನ ಸಂಸತ್‌ ಸದಸ್ಯರಿಗೆ ಸ್ಥಳಾವಕಾಶವಿಲ್ಲ. ಇದು ವಸಾಹಾತುಶಾಹಿ ಆಡಳಿತದಲ್ಲಿ ಸಭೆ ನಡೆಸುವ ಕೇಂದ್ರವಾಗಿತ್ತು ಎಂದು ಹೇಳಿದರು. 

‘ದೇಶ ಸ್ವತಂತ್ರವಾದ ನಂತರ ಸಂಸತ್‌ ಸದಸ್ಯರ ಸಂಖ್ಯೆಯೂ ಹೆಚ್ಚುತ್ತಿದೆ. ಆದ್ದರಿಂದ ಆಂತರಿಕವಾಗಿ ಹೊಂದಾಣಿಕೆ ಮಾಡಲಾಗಿದೆ. ರಚನಾತ್ಮಕ ದೃಷ್ಟಿಕೋನದಿಂದ ಇದು ಅಸುರಕ್ಷಿತ ಕಟ್ಟಡವಾಗಿದೆ. ಇದು ಭೂಕಂಪದ ವಲಯದಲ್ಲಿದೆ. ಆದ್ದರಿಂದ ನಾವು ಭಯವನ್ನು ಸೃಷ್ಟಿಸಲು ಬಯಸುವುದಿಲ್ಲ’ ಎಂದು ಪುರಿ ಹೇಳಿದರು.  

ಸೆಂಟ್ರಲ್‌ ವಿಸ್ತಾದ ಪುನರಾಭಿವೃದ್ಧಿ ಯೋಜನೆಯಡಿಯಲ್ಲಿ ಹೊಸ ಸಂಸತ್‌ ಕಟ್ಟಡ, ಒಂದು ಸಾಮಾನ್ಯ ಕೇಂದ್ರ ಕಾರ್ಯಾಲಯ, ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ ವರೆಗೆ ಮೂರು ಕಿ.ಮೀ.ರಾಜಪಥ, ಹೊಸ ಪ್ರಧಾನಮಂತ್ರಿ ನಿವಾಸ ಮತ್ತು ಕಚೇರಿ ಹಾಗೂ ಉಪರಾಷ್ಟ್ರಪತಿಗಳ ನೂತನ ಸಂಕೀರ್ಣ ನಿರ್ಮಾಣ ಮಾಡಲಾಗುತ್ತದೆ. 

ಈಗಿರುವ ಸಂಸತ್‌ ಕಟ್ಟಡದ ಬಳಿ ನೂತನ ಸಂಸತ್‌ ಕಟ್ಟಡವನ್ನು ಸೆಂಟ್ರಲ್‌ ವಿಸ್ತಾ ಯೋಜನೆಯಡಿ ಟಾಟಾ ಪ್ರಾಜೆಕ್ಟ್ಸ್‌ ಲಿಮಿಟೆಡ್‌ ಸಂಸ್ಥೆಯು ನಿರ್ಮಿಸುತ್ತಿದೆ.

ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನವು ಹೊಸ ಕಟ್ಟಡದಲ್ಲಿ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು