ಸೋಮವಾರ, ಆಗಸ್ಟ್ 15, 2022
28 °C

ರಾಮ ಮಂದಿರ ದೇಣಿಗೆ ಹಣ ದುರ್ಬಳಕೆ: ವಿಪಕ್ಷಗಳ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆಗೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಬತ್ತಳಿಕೆಯ ಬಹುದೊಡ್ಡ ಅಸ್ತ್ರವಾಗಿದ್ದ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದಲ್ಲಿ ಅಕ್ರಮ ಎಸಗಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. 

‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಮಿ ಖರೀದಿಯಲ್ಲಿ ಭಾರಿ ಅಕ್ರಮ ನಡೆದಿದೆ. ಮಂದಿರ ನಿರ್ಮಾಣಕ್ಕೆ ಜನರು ದೇಣಿಗೆ ನೀಡಿದ್ದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾ
ಗಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ಲೆಕ್ಕಪರಿಶೋಧನೆ ನಡೆಸಬೇಕು’ ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ.

ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ದೇಶದ ಹಲವೆಡೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.

ರಾಮಜನ್ಮಭೂಮಿಯ 70 ಎಕರೆ ನಿವೇಶನಕ್ಕೆ ಹೊಂದಿಕೊಂಡಂತೆ ಇರುವ ಜಮೀನೊಂದನ್ನು
₹2 ಕೋಟಿಗೆ ಖರೀದಿಸಿ, 5 ನಿಮಿಷದಲ್ಲಿ ಅದೇ ಜಮೀನನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ₹18.5 ಕೋಟಿಗೆ ಮಾರಾಟ ಮಾಡಲಾಗಿದೆ ಎಂದು ಎಎಪಿ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಆರೋಪಿಸಿವೆ.

ಜಮೀನು ಮಾರಾಟಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ವಿರೋಧ ಪಕ್ಷಗಳು ಬಿಡುಗಡೆ ಮಾಡಿವೆ. ಎಎಪಿ ಮತ್ತು ಸಮಾಜವಾದಿ ಪಕ್ಷದ ನಾಯಕರು ಈ ಸಂಬಂಧ ಭಾನುವಾರವೇ ಪತ್ರಿಕಾಗೋಷ್ಠಿ ನಡೆಸಿದ್ದರು. ಟ್ರಸ್ಟ್‌ನ ಕಾರ್ಯದರ್ಶಿ ಮತ್ತು ವಿಶ್ವ ಹಿಂದೂ
ಪರಿಷತ್ ನಾಯಕ ಚಂಪತ್ ರಾಯ್ ಅವರು ಈ ಆರೋಪವನ್ನು ನಿರಾಕರಿಸಿದ್ದಾರೆ.

ರಾಮ ಮಂದಿರದ ಹೆಸರಲ್ಲಿ ಜನರ ದುಡ್ಡನ್ನು ಸಂಗ್ರಹಿಸಿದ್ದ ಬಿಜೆಪಿ ಈಗ ಜನರಿಗೆ ದ್ರೋಹ ಬಗೆದಿದೆ ಎಂದು ವಿರೋಧ ಪಕ್ಷಗಳು ಟ್ವೀಟ್‌ ಮಾಡಿವೆ. #BJP_का_श्रीराम_को_धोखा (ಬಿಜೆಪಿಯಿಂದ ಶ್ರೀರಾಮನಿಗೆ ದ್ರೋಹ) ಹ್ಯಾಷ್‌ಟ್ಯಾಗ್‌ನಲ್ಲಿ ವಿರೋಧ ಪಕ್ಷಗಳು ಅಭಿಯಾನ ನಡೆಸುತ್ತಿವೆ. ಸೋಮವಾರ ಮಧ್ಯಾಹ್ನದ ನಂತರ ಹಲವು ಗಂಟೆಗಳ ಕಾಲ ಈ ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿತ್ತು.

ವಿರೋಧ ಪಕ್ಷಗಳ ಈ ಅಭಿಯಾನದ ವಿರುದ್ಧ ಬಿಜೆಪಿ ಕಾರ್ಯಕರ್ತರು ಸಹ ಟ್ವಿಟರ್‌ನಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು #श्रीराम_के_दुश्मन (ಶ್ರೀರಾಮನ ವೈರಿಗಳು) ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡುತ್ತಿದ್ದಾರೆ. ಈ ಹ್ಯಾಷ್‌ಟ್ಯಾಗ್‌ ಸೋಮವಾರ ಸಂಜೆಯ ನಂತರ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿತ್ತು.

‘ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಖರೀದಿಸುವಲ್ಲಿ ಭಾರಿ
ಹಗರಣ ನಡೆದಿದೆ. ಇದನ್ನು ಪತ್ತೆ ಮಾಡಲು ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಿ ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಉತ್ತರ ಪ್ರದೇಶದ ಹಲವೆಡೆ ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಲಖನೌನಲ್ಲಿ ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ನಡೆಸಿದೆ. ಪೊಲೀಸರು ನಡೆಸಿದಲಾಠಿ ಪ್ರಹಾರದಲ್ಲಿ ಕಾಂಗ್ರೆಸ್‌ನ ಹಲವು ಕಾರ್ಯಕರ್ತರಿಗೆ ಗಾಯಗಳಾಗಿವೆ’ ಎಂದು ಉತ್ತರ ಪ್ರದೇಶಕಾಂಗ್ರೆಸ್‌ ಘಟಕವು ಟ್ವೀಟ್ ಮಾಡಿದೆ.

ಶ್ರೀ ರಾಮ ಜನ್ಮಭೂಮಿ ವ್ಯಾಜ್ಯವನ್ನು ದಶಕಗಳ ಕಾಲ ನ್ಯಾಯಾಲಯದಲ್ಲಿ ಇರಿಸಿದ್ದವರೇ ಈಗ ರಾಮ ಮಂದಿರ ನಿರ್ಮಾಣಕ್ಕೆ ಅಡ್ಡಿ ಮಾಡುತ್ತಿದ್ದಾರೆ
ಅಮಿತ್ ಮಾಳವೀಯ, ಬಿಜೆಪಿ ಐಟಿ ಘಟಕದ ಮುಖ್ಯಸ್ಥ

5 ನಿಮಿಷದಲ್ಲಿ ₹ 2 ಕೋಟಿಯಿಂದ ₹ 18.5 ಕೋಟಿಗೆ ಏರಿಕೆ

ಅಯೋಧ್ಯೆಯ ರಾಮ ಜನ್ಮಭೂಮಿಗೆ ಹೊಂದಿಕೊಂಡಿರುವ 12,080 ಚದರ ಅಡಿ ನಿವೇಶನವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ 2021ರ ಮಾರ್ಚ್ 18ರಂದು ಖರೀದಿಸಿದೆ. ಖರೀದಿಗೆ ಸಂಬಂಧಿಸಿದ ಎರಡು ದಾಖಲೆ ಪತ್ರಗಳು ಈಗ ಬಹಿರಂಗವಾಗಿವೆ. ಕುಸುಮ್ ಪಾಠಕ್ ಮತ್ತು ಹರೀಶ್ ಪಾಠಕ್ ಎಂಬುವವರು ತಮ್ಮ ಜಮೀನನ್ನು ಮಾರಾಟ ಮಾಡಿದ ವಿವರ ಮೊದಲ ದಾಖಲೆ ಪತ್ರದಲ್ಲಿದೆ. ಅದೇ ಜಮೀನನ್ನು ರವಿ ಮೋಹನ್ ತಿವಾರಿ ಮತ್ತು ಸುಲ್ತಾನ್ ಅನ್ಸಾರಿ ಅವರು ಟ್ರಸ್ಟ್‌ಗೆ ಮಾರಾಟ ಮಾಡಿರುವ ಮಾಹಿತಿ ಎರಡನೇ ದಾಖಲೆ ಪತ್ರದಲ್ಲಿ ಇದೆ.

ಕುಸುಮ್ ಪಾಠಕ್ ಮತ್ತು ಹರೀಶ್‌ ಪಾಠಕ್ ಅವರು 12,080 ಚದರ ಅಡಿ ನಿವೇಶನವನ್ನು 2021ರ ಮಾರ್ಚ್‌ 18ರ ಸಂಜೆ 7.10ಕ್ಕೆ ರವಿ ಮೋಹನ್ ತಿವಾರಿ ಮತ್ತು ಸುಲ್ತಾನ್ ಅನ್ಸಾರಿ ಅವರಿಗೆ ಮಾರಾಟ ಮಾಡಿದ್ದಾರೆ. ಈ ದಾಖಲೆ ಪತ್ರದಲ್ಲಿ ನಿವೇಶನದ ಮೌಲ್ಯ ₹ 5.79 ಕೋಟಿ ಎಂದು ನಮೂದು ಮಾಡಲಾಗಿದೆ. ಆದರೆ, ನಿವೇಶನವನ್ನು ₹ 2 ಕೋಟಿಗೆ ಮಾರಾಟ ಮಾಡಲಾಗಿದೆ ಎಂದು ದಾಖಲೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಮಾರಾಟ ವಹಿವಾಟಿಗೆ ಅಯೋಧ್ಯೆ ಮೇಯರ್ ಮತ್ತು ಬಿಜೆಪಿ ನಾಯಕ ರಿಷಿಕೇಶ್ ಉಪಾದ್ಯಾಯ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಆರ್‌ಎಸ್‌ಎಸ್‌ನ ಪದಾಧಿಕಾರಿ ಅನಿಲ್ ಮಿಶ್ರಾ ಅವರು ಸಾಕ್ಷಿಗಳಾಗಿ ಸಹಿ ಮಾಡಿದ್ದಾರೆ.

ಇದೇ ಜಮೀನನ್ನು ಅದೇ ದಿನ ಸಂಜೆ 7.15ಕ್ಕೆ ರವಿ ಮೋಹನ್ ತಿವಾರಿ ಮತ್ತು ಸುಲ್ತಾನ್ ಅನ್ಸಾರಿ ಅವರು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ಮಾರಾಟ ಮಾಡಿದ್ದಾರೆ. ಅದೇ 12,080 ಚದರ ಅಡಿ ವಿಸ್ತೀರ್ಣದ ಜಮೀನನ್ನು ₹18.5 ಕೋಟಿ ನೀಡಿ, ಟ್ರಸ್ಟ್‌ ಖರೀದಿಸಿದೆ. ಅದರಲ್ಲಿ ₹17 ಕೋಟಿ ಮೊತ್ತವನ್ನು ಆರ್‌ಟಿಜಿಎಸ್‌ ಮೂಲಕ ಮಾರಾಟಗಾರರಿಗೆ ಪಾವತಿ ಮಾಡಲಾಗಿದೆ. ಈ ಮಾರಾಟ ವಹಿವಾಟಿಗೂ ಅಯೋಧ್ಯೆ ಮೇಯರ್ ಮತ್ತು ಬಿಜೆಪಿ ನಾಯಕ ರಿಷಿಕೇಶ್ ಉಪಾದ್ಯಾಯ ಹಾಗೂ ಮತ್ತು ಆರ್‌ಎಸ್‌ಎಸ್‌ನ ಪದಾಧಿಕಾರಿ ಅನಿಲ್ ಮಿಶ್ರಾ ಅವರು ಸಾಕ್ಷಿಗಳಾಗಿ ಸಹಿ ಮಾಡಿದ್ದಾರೆ.

ಸಂಜೆ 7.10ರಲ್ಲಿ ₹ 2 ಕೋಟಿಗೆ ಖರೀದಿಸಿದ್ದ ಜಮೀನನ್ನು, ನಂತರದ ಐದೇ ನಿಮಿಷದಲ್ಲಿ (ಸಂಜೆ 7.15ಕ್ಕೆ) ₹ 18.5 ಕೋಟಿ ಮೊತ್ತಕ್ಕೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು