ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಜನ್ಮದಿನ: 3 ವಾರ ಸಂಭ್ರಮಾಚರಣೆಗೆ ವಿರೋಧ ಪಕ್ಷಗಳ ಆಕ್ಷೇಪ

Last Updated 9 ಸೆಪ್ಟೆಂಬರ್ 2021, 22:10 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹುಟ್ಟಿದ ದಿನ ಮತ್ತು ಆಡಳಿತಗಾರನಾಗಿ 20 ವರ್ಷ ಪೂರ್ಣಗೊಂಡ ಬಗ್ಗೆ ಮೂರು ವಾರಗಳ ಸಂಭ್ರಮಾಚರಣೆಗೆ ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೋದಿ ಅವರ ಚಿತ್ರ ಇರುವ ಪಡಿತರ ತುಂಬಿದ ಕೋಟ್ಯಂತರ ಚೀಲಗಳು, ಐದು ಕೋಟಿ ಪೋಸ್ಟ್‌ ಕಾರ್ಡ್‌ ಹಂಚಿಕೆ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ.

ಆದರೆ, ಬಿಜೆಪಿಯ ಈ ನಡೆಯನ್ನು ವಿರೋಧ ಪಕ್ಷಗಳು ಖಂಡಿಸಿವೆ. ಜನರು ಸಂಕಷ್ಟದಲ್ಲಿರುವಾಗ ಬಿಜೆಪಿ ಸಂಭ್ರಮ ಪಡುವುದು ದುರಂತ ಎಂದು ಹೇಳಿವೆ.

ಸೆಪ್ಟೆಂಬರ್‌ 17 ಮೋದಿ ಅವರು ಹುಟ್ಟಿದ ದಿನ. 20 ವರ್ಷಗಳ ಹಿಂದೆ ಅಕ್ಟೋಬರ್‌ 7ರಂದು ಅವರು ಗುಜರಾತ್‌ ಮುಖ್ಯಮಂತ್ರಿಯಾದರು. ಹಾಗಾಗಿ, ಸೆಪ್ಟೆಂಬರ್‌ 17ರಿಂದ ಅಕ್ಟೋಬರ್ 7ರ ನಡುವೆ ವಿವಿಧ ಕಾರ್ಯಕ್ರಮ ನಡೆಸಲು ಬಿಜೆಪಿ ಸಜ್ಜಾಗಿದೆ. ರಾಜಕೀಯವಾಗಿ ಮಹತ್ವದ್ದಾದ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆಗಳಿಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಮೂರು ವಾರಗಳ ಕಾರ್ಯಕ್ರಮಗಳು ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ತುಂಬುವುದಕ್ಕೂ ನೆರವಾಗಬಹುದು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿ ಇದೆ. ಮೋದಿ ಅವರಿಗೆ ಮುಂದಿನ ವಾರ 71 ವರ್ಷ ಆಗಲಿದೆ.

ಕೋವಿಡ್ ಎರಡನೇ ಅಲೆ ನಿರ್ವಹಣೆ, ಮೊದಲ ಅಲೆ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಬಿಕ್ಕಟ್ಟು, ಆರ್ಥಿಕ ಸಮಸ್ಯೆಗಳು, ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಮುಂತಾದವುಗಳಿಂದಾಗಿ ಕೇಂದ್ರ ಸರ್ಕಾರ ಮತ್ತು ಮೋದಿ ಅವರ ವರ್ಚಸ್ಸು ಕುಗ್ಗಿದೆ ಎಂಬ ಮಾತು ಬಿಜೆಪಿ ಒಳಗೇ ಕೇಳಿಬರುತ್ತಿದೆ. ಅಂತಹ ಸಂದರ್ಭದಲ್ಲಿಯೇ ‘ಸೇವೆ ಮತ್ತು ಸಮರ್ಪಣೆ ಅಭಿಯಾನ’ ನಡೆಸಲು ಬಿಜೆಪಿ ಮುಂದಾಗಿದೆ.

‘ಬಡ ಜನರ ದೇವದೂತ’ ಎಂದು ಮೋದಿ ಅವರನ್ನು ಬಿಂಬಿಸುವ ಉದ್ದೇಶವನ್ನು ಬಿಜೆಪಿ ಹೊಂದಿದೆ. ಆದರೆ, ಅವರ ಜನಪ್ರಿಯತೆಯು ಶೇ 66ರಿಂದ ಶೇ24ಕ್ಕೆ ಕುಸಿದಿದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT