ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಆಂತರಿಕ ವಿಚಾರಗಳು ನಿಮ್ಮ ರಾಜಕೀಯದ ಮೇವಲ್ಲ: ಕೆನಡಾ ಪ್ರಧಾನಿ ಹೇಳಿಕೆಗೆ ಕಿಡಿ

Last Updated 1 ಡಿಸೆಂಬರ್ 2020, 11:16 IST
ಅಕ್ಷರ ಗಾತ್ರ

ಮುಂಬೈ: ದೆಹಲಿ ಬಳಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು 'ಭಾರತದ ಆಂತರಿಕ ಸಮಸ್ಯೆಯನ್ನು ಮೇವನ್ನಾಗಿ' ಬಳಸಿಕೊಂಡು ರಾಜಕೀಯ ಮಾಡಬೇಡಿ ಎಂದು ಮಂಗಳವಾರ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಆತ್ಮೀಯ ಜಸ್ಟಿನ್ ಟ್ರುಡೊ, ನಿಮ್ಮ ಕಾಳಜಿಯು ನಮಗೆ ತಿಳಿದಿದೆ ಆದರೆ ಭಾರತದ ಆಂತರಿಕ ವಿಷಯವು ಬೇರೆ ರಾಷ್ಟ್ರಗಳ ರಾಜಕೀಯಕ್ಕೆ ಮೇವು ಅಲ್ಲ. ನಾವು ಯಾವಾಗಲೂ ಇತರ ರಾಷ್ಟ್ರಗಳನ್ನು ಗೌರವಿಸುವ ಹಾಗೆ ನೀವು ಗೌರವಿಸಿ. ಇತರ ದೇಶಗಳು ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯೆಂದು ಕಂಡುಕೊಳ್ಳುವ ಮೊದಲು ಈ ಬಿಕ್ಕಟ್ಟನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ಜಿ ಅವರನ್ನು ವಿನಂತಿಸುತ್ತೇನೆ ಎಂದು ರಾಜ್ಯಸಭಾ ಸದಸ್ಯೆ ಚತುರ್ವೇದಿ ತಿಳಿಸಿದ್ದಾರೆ.

ಗುರುಪುರಬ್ ಅಥವಾ ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಅವರ 551ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಫೇಸ್‌ಬುಕ್ ವಿಡಿಯೊ ಸಂವಾದದಲ್ಲಿ ಟ್ರುಡೊ ಅವರು ಮಂಗಳವಾರ ಮಾತನಾಡಿ, 'ರೈತರ ಪ್ರತಿಭಟನೆಯ ಬಗ್ಗೆ ಭಾರತದಿಂದ ಬರುವ ಸುದ್ದಿಗಳನ್ನು ಉಲ್ಲೇಖಿಸದೆ ನಾನು ಮಾತು ಪ್ರಾರಂಭಿಸುವುದು ಸರಿಯಾಗುವುದಿಲ್ಲ, ಪರಿಸ್ಥಿತಿ ತುಂಬ ಕಳವಳಕಾರಿಯಾಗಿದೆ. ನಾವೆಲ್ಲರೂ ಕುಟುಂಬ ಮತ್ತು ನಮ್ಮ ಸ್ನೇಹಿತರ ಬಗ್ಗೆ ಚಿಂತಿತರಾಗಿದ್ದೇವೆ' ಎಂದು ಟ್ರುಡೊ ಹೇಳಿದ್ದಾರೆ.

'ನಿಮ್ಮಲ್ಲಿ ಅನೇಕರಿಗೆ ವಾಸ್ತವದ ಬಗ್ಗೆ ತಿಳಿದಿದೆ ಎಂಬುದು ನನಗೆ ತಿಳಿದಿದೆ. ಆದರೂ ನಾನು ನಿಮಗೆ ನೆನಪಿಸುತ್ತೇನೆ, ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ರಕ್ಷಿಸಲು ಕೆನಡಾ ಯಾವಾಗಲೂ ಇರುತ್ತದೆ. ಮಾತುಕತೆಯ ಪ್ರಕ್ರಿಯೆಯನ್ನು ನಾವು ನಂಬುತ್ತೇವೆ ಮತ್ತು ಅದಕ್ಕಾಗಿಯೇ ನಮ್ಮ ಕಳವಳಗಳನ್ನು ಎತ್ತಿ ಹಿಡಿಯಲು ನಾವು ಅನೇಕ ವಿಧಾನಗಳ ಮೂಲಕ ನೇರವಾಗಿ ಭಾರತೀಯ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ' ಎಂದು ಹೇಳಿದ್ದರು.

ಕಳೆದ ಆರು ದಿನಗಳಿಂದಲೂ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT