ಬುಧವಾರ, ಸೆಪ್ಟೆಂಬರ್ 22, 2021
26 °C

ಮೀರತ್‌ನಲ್ಲಿ 30ಕ್ಕೂ ಡೆಂಗ್ಯೂ ಪ್ರಕರಣ: ಜ್ವರ ನಿಯಂತ್ರಣಕ್ಕೆ ಆರೋಗ್ಯ ಅಭಿಯಾನ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಮೀರತ್:‌ ಜಿಲ್ಲೆಯಾದ್ಯಂತ 30ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 18 ಮಂದಿ ಗುಣಮುಖರಾಗಿದ್ದಾರೆ ಎಂದು ಮೀರತ್‌ ಜಿಲ್ಲಾಡಳಿತ ತಿಳಿಸಿದೆ.

ʼಜಿಲ್ಲೆಯಲ್ಲಿ ಇದುವರೆಗೆ 33 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಇನ್ನೂ 15 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಗಳು ಹೆಚ್ಚಾಗುವುದನ್ನು ತಡೆಯಲು ಅಭಿಯಾನ ಆರಂಭಿಸಿದ್ದೇವೆ. ಪ್ರತಿಯೊಂದು ಮನೆಗೂ ಭೇಟಿ ನೀಡಿ, ಜ್ವರ ಅಥವಾ ತಲೆನೋವು ಕಾಣಿಸಿಕೊಂಡ ಬಗ್ಗೆ ಜನರಿಂದ ಮಾಹಿತಿ ಪಡೆಯುತ್ತಿದ್ದೇವೆ. ಜನರು ಲಸಿಕೆ ಪಡೆದುಕೊಂಡಿದ್ದಾರೆಯೇ ಅಥವಾ ಆಯುಷ್ಮಾನ್‌ ಭಾರತ್‌ ಯೋಜನೆ ವ್ಯಾಪ್ತಿಯಲ್ಲಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದೇವೆ. ಒಂದುವೇಳೆ ಜ್ವರದ ಲಕ್ಷಣ ಇರುವ ಯಾವುದೇ ರೋಗಿ ಕಂಡುಬಂದರೆ ಅವರನ್ನು ಪರೀಕ್ಷೆಗೊಳಪಡಿಸಿ, ಸೂಕ್ತ ಚಿಕಿತ್ಸೆ ನೀಡಲಾಗುವುದುʼ ಎಂದು ಜಿಲ್ಲೆಯ ಮುಖ್ಯ ಆರೋಗ್ಯಾಧಿಕಾರಿ (ಸಿಎಂಒ) ಅಖಿಲೇಶ್‌ ಮೋಹನ್‌ ತಿಳಿಸಿದ್ದಾರೆ.

ಅಭಿಯಾನವು ಸೆಪ್ಟೆಂಬರ್‌ 7ರಿಂದ ಸೆಪ್ಟೆಂಬರ್‌ 16ರ ವರೆಗೆ ಮುಂದುವರಿಯಲಿದೆ ಎಂದಿರುವ ಸಿಎಂಒ, ʼನಮ್ಮ ಸಮುದಾಯ ಆರೋಗ್ಯ ಕೇಂದ್ರಗಳಿಗೆ (ಸಿಎಚ್‌ಸಿ) ವೈದ್ಯರು ಮತ್ತು ಅಗತ್ಯ ಔಷಗಳನ್ನು ಪೂರೈಸಲಾಗಿದೆ. ಯಾವುದೇ ರೋಗಿಯ ಸ್ಥಿತಿ ಗಂಭೀರವಾಗಿದ್ದರೆ ಅವರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುವುದುʼ ಎಂದು ಮಾಹಿತಿ ನೀಡಿದ್ದಾರೆ.

ಮುಂದುವರಿದು, ಡೆಂಗ್ಯೂ ಗುಣಲಕ್ಷಣಗಳಿದ್ದರೆ ಜನರು, ವೈದ್ಯರ ಸಲಹೆ ಪಡೆಯದೆಯೇ ಔಷಧ ಪಡೆಯಬಾರದು ಎಂದೂ ಮನವಿ ಮಾಡಿದ್ದಾರೆ.

ಡೆಂಗ್ಯೂ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರವು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಿದೆ ಎಂದು ಉತ್ತರ ಪ್ರದೇಶ ಆರೋಗ್ಯ ಸಚಿವ ಜೈ ಪ್ರತಾಪ್‌ ಸಿಂಗ್‌ ಈಗಾಗಲೇ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು