ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಧವ್‌ ಪ್ರಕರಣವನ್ನು ಮತ್ತೊಂದು ಪ್ರಕರಣಕ್ಕೆ ತಳಕು ಹಾಕಲು ಪಾಕಿಸ್ತಾನದ ಪ್ರಯತ್ನ

Last Updated 3 ಡಿಸೆಂಬರ್ 2020, 22:09 IST
ಅಕ್ಷರ ಗಾತ್ರ

ನವದೆಹಲಿ: ಗೂಢಚಾರಿಕೆ ಆರೋಪದಲ್ಲಿ ಬಂಧನಕ್ಕೊಳಗಾಗಿ ಪಾಕಿಸ್ತಾನದಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಪ್ರಕರಣವನ್ನು, ಮತ್ತೋರ್ವ ಭಾರತೀಯನ ಪ್ರಕರಣಕ್ಕೆ ತಳಕು ಹಾಕುವ ಪಾಕಿಸ್ತಾನದ ಪ್ರಯತ್ನವನ್ನು ಭಾರತವು ಗುರುವಾರ ಟೀಕಿಸಿದೆ.

‘ಪಾಕಿಸ್ತಾನಲ್ಲಿ ಬಂಧನಕ್ಕೊಳಗಾಗಿರುವ ಭಾರತದ ಮೊಹಮ್ಮದ್‌ ಇಸ್ಮಾಯಿಲ್‌ ಅವರ ಬಿಡುಗಡೆಗೆ ಸಂಬಂಧಿಸಿದಂತೆ ವಾದ ಮಂಡಿಸಲು ಭಾರತೀಯ ಹೈಕಮಿಷನ್‌ ಕಡೆಯಿಂದ ಶಾನವಾಜ್‌ ನೂನ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ಇಸ್ಮಾಯಿಲ್‌ ಅವರ ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದರೂ ಅವರನ್ನು ಪಾಕಿಸ್ತಾನವು ಬಿಡುಗಡೆ ಮಾಡಿರಲಿಲ್ಲ. ವಿಚಾರಣೆ ಸಂದರ್ಭದಲ್ಲಿ ಪಾಕಿಸ್ತಾನದ ಅಟಾರ್ನಿ ಜನರಲ್‌ ಅವರು ಜಾಧವ್‌ ಅವರ ಪ್ರಕರಣದ ಕುರಿತು ಉಲ್ಲೇಖಿಸಿದ್ದಾರೆ. ಈ ಎರಡೂ ಪ್ರಕರಣಗಳಿಗೆ ಸಂಬಂಧವಿಲ್ಲದೇ ಇದ್ದರೂ ಈ ವಿಷಯ ಪ್ರಸ್ತಾಪಿಸಿದ್ದಾರೆ’ ಎಂದು ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್‌ ಶ್ರೀವಾಸ್ತವ ಹೇಳಿದರು.

‘ಜಾಧವ್‌ ಅವರಿಗೆ ವಕೀಲರ ನೇಮಕ ಕುರಿತಂತೆ ಭಾರತದ ನಿಲುವನ್ನು ಹೇಳಲು ಡೆಪ್ಯುಟಿ ಹೈ ಕಮಿಷನರ್‌ ಗೌರವ್‌ ಅಹ್ಲುವಾಲಿಯಾ ಅವರು ಇಚ್ಛಿಸುತ್ತಿದ್ದಾರೆ’ ಎಂದು ಇಸ್ಲಾಮಾಬಾದ್‌ ಹೈಕೋರ್ಟ್‌ಗೆ ನೂನ್‌ ಅವರು ಹೇಳಿದ್ದಾರೆ ಎಂದು ಪಾಕಿಸ್ತಾನದ ದಿನಪತ್ರಿಕೆಗಳು ವರದಿ ಮಾಡಿದ್ದವು.

‘ನೂನ್‌ ಅವರು ನೀಡಿರುವ ಹೇಳಿಕೆಗಳು ಸತ್ಯವಲ್ಲ. ಜಾಧವ್‌ ಅವರ ಪ್ರಕರಣಗಳಲ್ಲಿ ನಾವು ತೆಗೆದುಕೊಂಡ ನಿಲುವಿಗೆ ಈ ಹೇಳಿಕೆ ವಿರುದ್ಧವಾಗಿದೆ. ನೂನ್‌ ಅವರಿಗೆ ಇಂಥ ಹೇಳಿಕೆಗಳನ್ನು ನೀಡಲು ಯಾವ ಅಧಿಕಾರವೂ ಇಲ್ಲ. ಪಾಕಿಸ್ತಾನದ ಒತ್ತಡದ ಮೇರೆಗೆ ನೂನ್‌ ಅವರು ಈ ರೀತಿ ಹೇಳಿಕೆಗಳನ್ನು ನೀಡಿರುವಂತಿದೆ’ ಎಂದು ಶ್ರೀವಾಸ್ತವ ಹೇಳಿದರು.

‘ಅಂತರರಾಷ್ಟ್ರೀಯ ನ್ಯಾಯಾಲಯದ ಆದೇಶದಂತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಕೊಡಲು ಹಾಗೂ ಜಾಧವ್‌ ಅವರಿಗೆ ಯಾವುದೇ ಷರತ್ತು ಇಲ್ಲದೆ ಕಾನ್ಸುಲರ್‌ ಅವರ ಭೇಟಿಗೆ ಅವಕಾಶ ನೀಡುವುದಕ್ಕೆ ಪಾಕಿಸ್ತಾನ ವಿಫಲವಾಗಿದೆ. ಹೀಗಾಗಿ ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT