ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕರಣಗಳ ವರ್ಗಾವಣೆ ಕುರಿತ ಪರಮ್‌ ಬೀರ್‌ ಸಿಂಗ್ ಅರ್ಜಿ ವಜಾ

Last Updated 11 ಜೂನ್ 2021, 11:19 IST
ಅಕ್ಷರ ಗಾತ್ರ

ನವದೆಹಲಿ: ಮೂವತ್ತು ವರ್ಷ ರಾಜ್ಯ ಕೇಡರ್‌ನ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಈಗ ಅದೇ ಇಲಾಖೆಯ ಬಗ್ಗೆ ನಂಬಿಕೆ ಇಲ್ಲ ಎಂಬ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್‌ ಬೀರ್ ಸಿಂಗ್ ಹೇಳಿಕೆ ಕುರಿತು ‘ದಿಗ್ಭ್ರಮೆ‘ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌,‘ತಾವು ಗಾಜಿನಮನೆಯಲ್ಲಿದ್ದುಕೊಂಡು, ಬೇರೆಯವರ ಮನೆಗೆ ಕಲ್ಲು ಎಸೆಯುವ ಕೆಲಸ ಮಾಡಬಾರದು‘ ಎಂದು ಹೇಳಿದೆ.

‘ನನಗೆ ರಾಜ್ಯ ಪೊಲೀಸ್ ಇಲಾಖೆ ಮೇಲೆ ವಿಶ್ವಾಸವಿಲ್ಲ. ನನ್ನ ವಿರುದ್ಧವಿರುವ ವಿಚಾರಣೆಗಳನ್ನು ಮಹಾರಾಷ್ಟ್ರದ ಹೊರಗಿರುವ ಸ್ವತಂತ್ರ ಸಂಸ್ಥೆಯಿಂದ, ತನಿಖೆ ನಡೆಸಬೇಕೆಂದು‘ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ‘ಅರ್ಜಿದಾರ ತಾನು ಸೇವೆ ಸಲ್ಲಿಸಿದ ಇಲಾಖೆಯ ಬಗ್ಗೆ ಯಾವತ್ತೂ ಅನುಮಾನ ಹೊಂದಬಾರದು‘ ಎಂದು ಹೇಳಿತು.

ಈ ಸಂದರ್ಭಕ್ಕೆ ಅನುಸಾರವಾಗಿ ‘ಗಾಜಿನ ಮನೆಯಲ್ಲಿ ವಾಸಿಸುವ ವ್ಯಕ್ತಿ ಮತ್ತೊಬ್ಬರ ಮೇಲೆ ಕಲ್ಲು ಎಸೆಯಬಾರದು‘ ಎಂಬುದು ಸಾಮಾನ್ಯವಾಗಿ ಹೇಳುವ ಮಾತು ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ರಜಾಕಾಲದ ಪೀಠ ಅಭಿಪ್ರಾಯಪಟ್ಟಿದೆ.

‘ನಿಮ್ಮ ಪ್ರಭುತ್ವಗಳು ನಾನು (ಸಿಂಗ್) ಗಾಜಿನ ಮನೆಯಲ್ಲಿ ವಾಸಿಸುತ್ತಿದ್ದೇನೆ ಎಂದು ಊಹಿಸುತ್ತಿವೆ‘ ಎಂದು ಸಿಂಗ್ ಪರ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ಮಹೇಶ್ ಜೆಠ್ಮಲಾನಿ ಹೇಳಿದರು. ಹಾಗೆಯೇ, ನನ್ನ ಕಕ್ಷಿದಾರ ಪೊಲೀಸ್ ಅಧಿಕಾರಿಯ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ‘ ಎಂದು ಪೀಠಕ್ಕೆ ತಿಳಿಸಿದರು.

ವಾದ– ಪ್ರತಿವಾದ ಹಾಗೂ ಅರ್ಜಿದಾರರ ಹೇಳಿಕೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಈ ಅರ್ಜಿಯನ್ನು ವಜಾಗೊಳಿಸಿತು. ತಾವು ಸಲ್ಲಿಸಿದ ಅರ್ಜಿಯನ್ನು ಪರಮ್‌ ಬೀರ್ ಸಿಂಗ್ ಪರ ವಕೀಲರು ವಾಪಸ್ ಪಡೆಯುವ ಜತೆಗೆ, ಈ ಪ್ರಕರಣವನ್ನು ಇತ್ಯರ್ಥಗೊಳಿಸಲು ಸೂಕ್ತ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು. ಸಿಂಗ್ ಅವರಿಗೂ ಅರ್ಜಿ ಹಿಂಪಡೆಯಲು ನ್ಯಾಯಪೀಠ ಅವಕಾಶ ಕಲ್ಪಿಸಿತು.

1998ರ ಬ್ಯಾಚ್‌ನ ಐಪಿಎಸ್‌ ಆಫೀಸ್ ಅಧಿಕಾರಿಯಾಗಿದ್ದ ಪರಮ್‌ ಬೀರ್‌ ಸಿಂಗ್‌ ಅವರನ್ನು ಅಂದಿನ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ವಿರುದ್ಧ ಮಾಡಿದ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಕಳೆದ ಮಾ. 17ರಂದು ಮುಂಬೈ ಪೊಲೀಸ್ ಆಯುಕ್ತರ ಹುದ್ದೆಯಿಂದ ತೆಗೆದು ಹಾಕಿ, ಮಹಾರಾಷ್ಟ್ರ ರಾಜ್ಯ ಗೃಹ ರಕ್ಷಕ ದಳದ ಜನರಲ್ ಕಮಾಂಡರ್ ಆಗಿ ನೇಮಿಸಲಾಯಿತು.

ತಮ್ಮ ವಿರುದ್ಧ ಪರಮ್‌ ಬೀರ್‌ ಸಿಂಗ್ ಮಾಡಿದ ಯಾವುದೇ ಆರೋಪದಲ್ಲೂ ಸತ್ಯಾಂಶವಿಲ್ಲ, ಜತೆಗೆ, ಸಾಕ್ಷ್ಯಾಧಾರಗಳಿಲ್ಲ ಎಂದು ದೇಶಮುಖ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT