ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿಗೆ ಡಾ.ಜಿ.ಪರಮೇಶ್ವರ

ಹಿರಿಯ ಮುಖಂಡರರಾದ ಆಜಾದ್, ಶಿಂಧೆಗೆ ಕೊಕ್‌
Last Updated 18 ನವೆಂಬರ್ 2021, 16:43 IST
ಅಕ್ಷರ ಗಾತ್ರ

ನವದೆಹಲಿ: ಪಕ್ಷದ ಶಿಸ್ತು ಪಾಲನಾ ಸಮಿತಿಯನ್ನು ಗುರುವಾರ ಪುನರ್‌ ರಚಿಸಿರುವ ಕಾಂಗ್ರೆಸ್‌, ಇದುವರೆಗೆ ಸಮಿತಿಯ ಭಾಗವಾಗಿದ್ದ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಹಾಗೂ ಸುಶೀಲ್‌ಕುಮಾರ್ ಶಿಂಧೆ ಅವರನ್ನು ಕೈಬಿಟ್ಟಿದೆ.

ಇನ್ನೊಬ್ಬ ಹಿರಿಯ ಮುಖಂಡ, ಕೇರಳದ ಎ.ಕೆ. ಆಂಟನಿ ಅವರನ್ನು ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದ್ದು, ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸೇರಿದಂತೆ ನಾಲ್ವರು ಹೊಸ ಸದಸ್ಯರನ್ನು ಸೇರ್ಪಡೆ ಮಾಡಲಾಗಿದೆ.

ಪಕ್ಷದಲ್ಲಿ ಬದಲಾವಣೆ ಬಯಸಿ ಬಂಡೆದ್ದಿದ್ದ ಜಿ–23 ತಂಡದ ಸದಸ್ಯರಾಗಿರುವ ಆಜಾದ್ ಅವರ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಘಟಕದ ಅಧ್ಯಕ್ಷ ಗುಲಾಮ್ ಅಹಮದ್ ಮಿರ್ ಅವರು ದನಿ ಎತ್ತಿದ ಮಾರನೇ ದಿನವೇ ಈ ಬದಲಾವಣೆ ತಂದಿರುವುದು ವಿಶೇಷವಾಗಿದೆ.

ಶಿಸ್ತು ಪಾಲನಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದ ಮೋತಿಲಾಲ್ ವೋಹ್ರಾ ಅವರ ನಿಧನದ ಹಿನ್ನೆಲೆಯಲ್ಲಿ, ಸಮಿತಿಯ ಪುನರ್‌ರಚನೆ ಸಾಧ್ಯತೆ ಕುರಿತು ಚಿಂತನೆ ನಡೆಸಿದ್ದ ಪಕ್ಷ, ಇದೀಗ ಆಜಾದ್, ಶಿಂಧೆ ಅವರಲ್ಲದೆ, ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಕುಟ್‌ ಮಿಥಿ ಅವರನ್ನೂ ಕೈಬಿಟ್ಟಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಅವರು ಹೊಸ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದು, ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯೆ ಅಂಬಿಕಾ ಸೋನಿ, ದೆಹಲಿಯ ಹಿರಿಯ ಮುಖಂಡ ಜೈಪ್ರಕಾಶ್ ಅಗರ್‌ವಾಲ್ ಅವರು ಪರಮೇಶ್ವರ ಅವರೊಂದಿಗೆ ಸಮಿತಿಗೆ ಸೇರ್ಪಡೆಯಾಗಿರುವ ಇತರ ಸದಸ್ಯರಾಗಿದ್ದಾರೆ.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಪಕ್ಷದ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ)ಯ ಸದಸ್ಯರಾಗಿರುವ ರಾಜ್ಯದ ಪ್ರಮುಖ ನಾಯಕರಾಗಿದ್ದಾರೆ. ಪಕ್ಷದ ತಮಿಳುನಾಡು, ಪುದುಚೇರಿ ಮತ್ತು ಗೋವಾದ ಉಸ್ತುವಾರಿ ಹುದ್ದೆಯಲ್ಲಿರುವ ದಿನೇಶ್ ಗುಂಡೂರಾವ್, ಮಹಾರಾಷ್ಟ್ರ ಉಸ್ತುವಾರಿಯಾಗಿರುವ ಎಚ್‌.ಕೆ. ಪಾಟೀಲ್ ಹಾಗೂ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಅವರು ಸಿಡಬ್ಲ್ಯೂಸಿಯ ಖಾಯಂ ಆಹ್ವಾನಿತರಾಗಿರುವ ರಾಜ್ಯದಇತರ ಮುಖಂಡರಾಗಿದ್ದಾರೆ.

ಇದೀಗ ಪಕ್ಷದ ಶಿಸ್ತು ಪಾಲನಾ ಸಮಿತಿ ಸದಸ್ಯರನ್ನಾಗಿ ಪರಮೇಶ್ವರ ಅವರನ್ನು ನೇಮಿಸುವ ಮೂಲಕ ಪಕ್ಷದ ಕೇಂದ್ರ ಸಂಘಟನೆಗೆ ರಾಜ್ಯದ ಮತ್ತೊಬ್ಬ ಹಿರಿಯ ಮುಖಂಡರನ್ನು ನಿಯೋಜಿಸಿದಂತಾಗಿದೆ.

ಪಕ್ಷದ ನಾಯಕತ್ವದ ಕುರಿತು ಸ್ಪಷ್ಟನೆ ನೀಡುವಂತೆ ಆಗ್ರಹಿಸಿ ಆಜಾದ್ ಅವರು ಪಕ್ಷದ ಇತರ 22 ಜನ ಹಿರಿಯ ನಾಯಕರೊಂದಿಗೆ ಸೋನಿಯಾ ಗಾಂಧಿ ಅವರಿಗೆ 2020ರ ಆಗಸ್ಟ್‌ನಲ್ಲಿ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT