ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್‌ ಕಲಾಪ: ಚೀನಾ ಕುರಿತು ವೈರುಧ್ಯದ ಹೇಳಿಕೆಗೆ ಕಾಂಗ್ರೆಸ್‌ ತರಾಟೆ

ಕೇಂದ್ರವು ಭಾರತೀಯ ಸೇನೆಯ ಜತೆಗಿದೆಯೇ ಅಥವಾ ಚೀನಾ ಜತೆಗಿದೆಯೇ: ರಾಹುಲ್ ಪ್ರಶ್ನೆ
Last Updated 16 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ನವದೆಹಲಿ:ಚೀನಾ ವಿಚಾರದಲ್ಲಿ ಎರಡು ಧ್ವನಿ‌ಯಲ್ಲಿ ಮಾತನಾಡುತ್ತಿರುವ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಬುಧವಾರ ತರಾಟೆಗೆ ತೆಗೆದುಕೊಂಡಿತು. ಕಳೆದ ಆರು ತಿಂಗಳಲ್ಲಿ ಚೀನಾ ಕಡೆಯಿಂದ ಒಳನುಸುಳುವಿಕೆ ಕಂಡುಬಂದಿಲ್ಲ ಎಂದು ಸರ್ಕಾರ ಹೇಳಿತ್ತು. ಆದರೆವಾಸ್ತವ ನಿಯಂತ್ರಣ ರೇಖೆಯ ಒಳಭಾಗದಲ್ಲಿ ಚೀನೀ ಪಡೆಗಳು ಕಾಮಗಾರಿ ನಡೆಸಿವೆ ಎಂದುರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂಸತ್ತಿನಲ್ಲಿ ಒಪ್ಪಿಕೊಂಡಿದ್ದಾರೆ. ಏಕೆ ಈ ವೈರುಧ್ಯ ಎಂದು ಪಕ್ಷ ಪ್ರಶ್ನಿಸಿದೆ.

‘ಈ ಕಾಲಾನುಕ್ರಮಣಿಕೆಯನ್ನುಗಮನಿಸಿ: ಯಾರೂ ಗಡಿ ದಾಟಿಲ್ಲ ಎಂದು ಪ್ರಧಾನಿ ಹೇಳಿಕೆ ನೀಡಿದ್ದರು; ಬಳಿಕ ಚೀನಾ ಮೂಲದ ಬ್ಯಾಂಕ್‌ನಿಂದ ದೊಡ್ಡ ಮೊತ್ತದ ಸಾಲ ಪಡೆಯಲಾಯಿತು; ಚೀನಾ ನಮ್ಮ ಜಾಗ ಆಕ್ರಮಿಸಿಕೊಂಡಿದೆ ಎಂದು ರಕ್ಷಣಾ ಸಚಿವರು ನಂತರ ಒಪ್ಪಿಕೊಂಡರು; ಈಗ ಗೃಹ ಖಾತೆ ರಾಜ್ಯ ಸಚಿವರು ಯಾವುದೇ ಒಳನುಸುಳುವಿಕೆ ಕಂಡುಬಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈಗ ಹೇಳಿ, ಕೇಂದ್ರ ಸರ್ಕಾರವು ಭಾರತೀಯ ಸೇನೆಯ ಜತೆಗಿದೆಯೇ ಅಥವಾ ಚೀನಾ ಜತೆಗಿದೆಯೇ? ಯಾಕಿಷ್ಟು ಭಯ?’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಸಂಸತ್ ಭವನದ ಹೊರಗಡೆ ಸುದ್ದಿಗಾರರ ಜತೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಚೀನಾ ಸಂಘರ್ಷದ ಬಗ್ಗೆ ಕೇಂದ್ರ ಸಚಿವರು ದ್ವಿಮುಖ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಸೇನಾಪಡೆಗಳು ಲಡಾಖ್‌ನಲ್ಲಿ ಚೀನಾ ಸೈನಿಕರ ಜತೆ ಸಂಘರ್ಷ ನಡೆಸುತ್ತಿರುವ ಸಂದರ್ಭದಲ್ಲೇ, ಪ್ರಧಾನಮಂತ್ರಿ ಗರೀಬ್‌ಕಲ್ಯಾಣ ಯೋಜನೆಗೆ ಹಣಕಾಸು ಒದಗಿಸಲು ಬೀಜಿಂಗ್ ಮೂಲದ ಏಷ್ಯನ್ ಇನ್‌ಫ್ರಾಸ್ಟ್ರಕ್ಚರ್ ಬ್ಯಾಂಕ್‌ನಿಂದ ₹5,625 ಕೋಟಿ ಸಾಲ ಪಡೆಯಲು ನಿರ್ಧರಿಸಿದ ಸರ್ಕಾರದ ನಡೆಯನ್ನು ಕಾಂಗ್ರೆಸ್ ಟೀಕಿಸಿದೆ.

‘ಜೂನ್ 19 ಭಾರತ ದೇಶದ ಇತಿಹಾಸದಲ್ಲಿ ಕಪ್ಪುದಿನ. ಅಂದು ಪ್ರಧಾನಮಂತ್ರಿ ದೇಶಕ್ಕೆ ಸುಳ್ಳು ಹೇಳಿದರು. ಚೀನಾವನ್ನು ಆರೋಪಮುಕ್ತಗೊಳಿಸಿದ್ದು ಮಾತ್ರವಲ್ಲದೇ, ಬೀಜಿಂಗ್‌ ಮೂಲದ ಬ್ಯಾಂಕ್‌ನಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆಯುವ ಒಪ್ಪಂದಕ್ಕೆ ಸಹಿ ಹಾಕಿದರು’ ಎಂದು ಪವನ್ ಖೇರಾ ಹೇಳಿದ್ದಾರೆ.

ಚೀನಾ ಸೈನಿಕರು ಕಳೆದ ಆರು ತಿಂಗಳ ಅವಧಿಯಲ್ಲಿ ಒಳನುಸುಳಿಲ್ಲ ಎಂದು ಗೃಹಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ಸಂಸತ್ತಿನಲ್ಲಿ ನೀಡಿದ ಹೇಳಿಕೆಗೆ ಖೇರಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ಈ ಹೇಳಿಕೆಯು, ಗಾಲ್ವನ್‌ ಕಣಿವೆಯಲ್ಲಿ ಹುತಾತ್ಮರಾದ ನಮ್ಮ ವೀರ ಸೈನಿಕರಿಗೆ ಮಾಡಿದ ಅಪಮಾನ’ ಎಂದು ಕರೆದಿದ್ದಾರೆ.

ಗಾಲ್ವನ್ ಸಂಘರ್ಷವು ಚೀನಾದ ಭೂಪ್ರದೇಶದಲ್ಲಿ ನಡೆದಿದೆ ಎಂದು ಹೇಳಲು ಸರ್ಕಾರ ಹೊರಟಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ‘ಚೀನಾದ ಆಕ್ರಮಣವನ್ನು ನಿಭಾಯಿಸುವ ಬದಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂತಹ ದ್ವಂದ್ವ ನಿಲುವು ತೆಗೆದು
ಕೊಂಡು ದೇಶಕ್ಕೆ ಆಘಾತ ನೀಡಿದೆ’ ಎಂದು ಖೇರಾ ವಾಗ್ದಾಳಿ ನಡೆಸಿದ್ದಾರೆ.

ವಲಸೆ ಕಾರ್ಮಿಕರಿಗೆ ಪರಿಹಾರಕ್ಕೆ ಆಗ್ರಹ: ಲಾಕ್‌ಡೌನ್‌ ವೇಳೆ ಊರಿಗೆ ತೆರಳುವ ಮಾರ್ಗದಲ್ಲಿ ಮೃತಪಟ್ಟ ವಲಸೆ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಶಿಕ್ಷಣ ನೀತಿಯ ಹಿಮ್ಮುಖ ದೃಷ್ಟಿ’

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ‘ಹಿಮ್ಮುಖ ದೃಷ್ಟಿ’ ಹೊಂದಿದೆ ಎಂದು ವ್ಯಾಖ್ಯಾನಿಸಿರುವ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು, ಶಿಕ್ಷಣ ನೀತಿಯು ಸಾಂವಿಧಾನಿಕ ಮೌಲ್ಯಗಳನ್ನು ಆಧರಿಸಿ ರಚನೆಯಾಗಬೇಕೇ ವಿನಾ, ಪ್ರಾಚೀನ ಸಾಂಸ್ಕೃತಿಕ ಮೌಲ್ಯಗಳನ್ನು ಆಧರಿಸಿ ಅಲ್ಲ ಎಂದಿದ್ದಾರೆ.

ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು,ಎನ್‌ಇಪಿ ಮಕ್ಕಳ ಭವಿಷ್ಯದ ಯೋಜನೆ ಹೊಂದಿರಬೇಕು. ಆದರೆ ಅದು ನಮ್ಮನ್ನು 2,000 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ ಎಂದು ಆರೋಪಿಸಿದ್ದಾರೆ. ‘ಶಾಲೆಗಳು ಹಾಗೂ ಉನ್ನತ ಶಿಕ್ಷಣದಲ್ಲಿ ನೈತಿಕ ಶಿಕ್ಷಣವು ಸಂವಿಧಾನದ ತತ್ವಗಳಡಿ ರೂಪುಗೊಂಡಿರಬೇಕು’ ಎಂದಿದ್ದಾರೆ.

ಕಾಳಸಂತೆಯಲ್ಲಿ ಆಮ್ಲಜನಕ ಸಿಲಿಂಡರ್ ಮಾರಾಟ ಆರೋಪ

ಕೋವಿಡ್‌–19 ಸಮಯದಲ್ಲಿ ಚಿಕಿತ್ಸೆಗೆ ಅಗತ್ಯವಾಗಿರುವ ಆಮ್ಲಜನಕ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ರಾಜ್ಯಸಭೆಯಲ್ಲಿ ಸಂಸದರು ಆರೋಪಿಸಿದರು. ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್‌ ಸಿಂಗ್ ಹಾಗೂ ಬಿಜೆಪಿ ಸಂಸದ ಭಾಗವತ್ ಕರಾಡ್ ಆಗ್ರಹಿಸಿದರು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ದಿಗ್ವಿಜಯ್ ಸಿಂಗ್, ಮಧ್ಯಪ್ರದೇಶ, ಗುಜರಾತ್, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಸಿಲಿಂಡರ್‌ಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದರು. ಪ್ರತಿ ಕ್ಯೂಬಿಕ್‌ ಮೀಟರ್‌ ಆಮ್ಲಜನಕ ಬೆಲೆಯನ್ನು ₹50ವರೆಗೆ ಏರಿಸಲಾಗಿದೆ. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು ಪ್ರತಿ ಕ್ಯೂಬಿಕ್‌ ಮೀಟರ್‌ ಮರುಪೂರಣಕ್ಕೆ ₹17 ನಿಗದಿಗೊಳಿಸಿದ್ದರೂ, ಸರ್ಕಾರ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿಲ್ಲ ಎಂದು ಆರೋಪಿಸಿದರು.

ಉತ್ತರ ಪ್ರದೇಶದಲ್ಲಿ ಚಿಕ್ಕ ಗಾತ್ರದ ಸಿಲಿಂಡರ್ ಬೆಲೆ ₹130 ಇತ್ತು. ಇದೀಗ ₹350 ಆಗಿದೆ. ಸಿಲಿಂಡರ್‌ನ ಭದ್ರತಾ ಠೇವಣಿ ಮೊತ್ತವನ್ನು ₹5,000ದಿಂದ ₹10,000ಕ್ಕೆ ಏರಿಸಲಾಗಿದೆ ಎಂದು ಗಮನ ಸೆಳೆದರು. ವೃತ್ತಿಯಲ್ಲಿ ವೈದ್ಯರೂ ಆಗಿರುವ ಕರಾಡ್, ಸಿಲಿಂಡರ್ ಕಾಳಸಂತೆ ವ್ಯಾಪಾರ ನಿಗ್ರಹಿಸುವಂತೆ ಮನವಿ ಮಾಡಿದರು.

‘₹65 ಸಾವಿರ ಕೋಟಿ ಎಲ್ಲಿದೆ?’

ಉದ್ದೇಶಿತ ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆಗೆ ಅಗತ್ಯವಿರುವ ₹65,000 ಕೋಟಿ ಹಣವನ್ನು ಎಲ್ಲಿಂದ ತರುತ್ತೀರಿ ಎಂದು ಸಮಾಜವಾದಿ ಪಕ್ಷದ ಮುಖಂಡ ರಾಮ್‌ಗೋಪಾಲ್ ಯಾದವ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಆಯುರ್ವೇದ ಸಂಸ್ಥೆ ಕುರಿತುರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಬುಧವಾರ ಭಾಗವಹಿಸಿ ಮಾತನಾಡಿದ ಅವರು, ಇದೊಂದು ಗಿಮಿಕ್ ಯೋಜನೆಯೇ ಎಂದು ಪ್ರಶ್ನಿಸಿದ್ದಾರೆ. ಏಕೆಂದರೆ ಇಡೀ ಆರೋಗ್ಯ ಇಲಾಖೆಯ ಬಜೆಟ್ ₹65 ಸಾವಿರ ಕೋಟಿ ಇರುವಾಗ, ಇದೊಂದು ಯೋಜನೆಗೆ ಅಷ್ಟೇ ಮೊತ್ತವನ್ನು ಹೊಂದಿಸಲು ಹೇಗೆ ಸಾಧ್ಯ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT