ಗುರುವಾರ , ಜೂನ್ 17, 2021
29 °C

ಕೊರೊನಾ ವೈರಸ್‌ ಮೂರನೇ ಅಲೆಗೆ ತಡೆಯಲು ಸಿದ್ಧತೆ ಅಗತ್ಯ: ಡಾ.ವಿ.ಕೆ.ಪೌಲ್‌

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಕೊರೊನಾ ವೈರಸ್‌ ಮತ್ತೆ ದಾಳಿ ಮಾಡಲಿದೆ. ಹೀಗಾಗಿ, ಈ ವೈರಸ್‌ ದಾಳಿಯನ್ನು ಎದುರಿಸಲು ರಾಜ್ಯಗಳ ನಡುವಿನ ಸಮನ್ವಯದೊಂದಿಗೆ ರಾಷ್ಟ್ರ ಮಟ್ಟದಲ್ಲಿ ಸಿದ್ಧತೆ ಮಾಡಿಕೊಳ್ಳುವುದು ಅಗತ್ಯ’ ಎಂದು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ.ವಿ.ಕೆ.ಪೌಲ್‌ ಗುರುವಾರ ಹೇಳಿದರು.

‘ಕೋವಿಡ್‌–19 ರೋಗಿಗಳ ಚಿಕಿತ್ಸೆಗಾಗಿ ಮೂಲಸೌಕರ್ಯಗಳನ್ನು ಹೆಚ್ಚಿಸಬೇಕು, ಸೋಂಕು ಪ್ರಸರಣದ ಸರಪಳಿಯನ್ನು ತುಂಡರಿಸಲು ಕಠಿಣ ನಿರ್ಬಂಧಗಳನ್ನು ಅನುಸರಿಸಬೇಕು’ ಎಂದೂ ಅವರು ಹೇಳಿದ್ದಾರೆ.

ಕೋವಿಡ್‌ನ ಎರಡನೇ ಅಲೆ ಬಾಧಿಸುವುದನ್ನು ಅರಿಯುವಲ್ಲಿ ಸರ್ಕಾರ ವಿಫಲವಾಯಿತು ಎಂಬ ಆರೋಪಗಳನ್ನು ತಳ್ಳಿ ಹಾಕಿದ ಅವರು, ‘ಕೋವಿಡ್‌–19ನ ಎರಡನೇ ಅಲೆಯ ಬಗ್ಗೆ ವಿವಿಧ ವೇದಿಕೆಗಳ ಮೂಲಕ ಸರ್ಕಾರ ಪದೇಪದೇ ಎಚ್ಚರಿಸುತ್ತಲೇ ಬಂದಿದೆ’ ಎಂದರು.

‘ದೇಶದ ಶೇ 80ರಷ್ಟು ಜನರ ಇನ್ನೂ ಸೋಂಕಿಗೆ ಒಳಗಾಗುವ ಅಪಾಯ ಎದುರಿಸುತ್ತಿದ್ದಾರೆ. ಸೋಂಕು ದೃಢ ಪ್ರಮಾಣ ಶೇ 20ರಷ್ಟಿದೆ ಎಂದು ಈ ಹಿಂದೆಯೇ ಎಚ್ಚರಿಕೆ ನೀಡಲಾಗಿತ್ತು’ ಎಂದೂ ಅವರು ಹೇಳಿದರು.

ಸೋಂಕಿತರ ಪ್ರಮಾಣ ಇಳಿಮುಖ
ನವದೆಹಲಿ:
ಕಳೆದ ಒಂದು ತಿಂಗಳಿಂದ ಸಾರ್ವಜನಿಕರ ಆತಂಕ ಹೆಚ್ಚಿಸಿದ್ದ ಕೋವಿಡ್‌ ಎರಡನೇ ಅಲೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿಯಂತ್ರಣಕ್ಕೆ ಬರುತ್ತಿದೆ. ಗುರುವಾರ ಕೊರೊನಾ ಸೋಂಕು ದೃಢಪಟ್ಟವರ ಪ್ರಮಾಣದಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡುಬಂದಿದೆ.

ಸತತ 4ನೇ ವಾರ ಲಾಕ್‌ಡೌನ್‌ ಮುಂದುವರಿದಿರುವ ಪರಿಣಾಮ ಸೋಂಕಿತರ ಶೇಕಡಾವಾರು ಪ್ರಮಾಣ ಇದೇ ಮೊದಲ ಬಾರಿಗೆ 15ಕ್ಕಿಂತ ಕಡಿಮೆ ದಾಖಲಾಗಿದೆ.

ಸತತ 6 ದಿನಗಳಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಿ, ಗುಣಮುಖರಾದವರ ಸಂಖ್ಯೆ ಹೆಚ್ಚುತ್ತಾ ಸಾಗಿರುವುದು ಆತಂಕ
ವನ್ನು ಕೊಂಚ ಕಡಿಮೆ ಮಾಡಿದೆ.

**

100 ಜಿಲ್ಲಾಧಿಕಾರಿಗಳ ಜೊತೆ ಚರ್ಚೆ
ನವದೆಹಲಿ (ಪಿಟಿಐ):
ದೇಶದಾದ್ಯಂತ ಅತ್ಯಧಿಕ ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿರುವ 100 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮೇ 18, 20ರಂದು ಸಮಾಲೋಚಿಸುವರು.

ಸರ್ಕಾರದ ಮೂಲಗಳ ಪ್ರಕಾರ, ಮೊದಲ ದಿನ 9 ರಾಜ್ಯಗಳ 46 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಎರಡನೇ ದಿನ 10 ರಾಜ್ಯಗಳ 54 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ಪ್ರಧಾನಿ ಚರ್ಚಿಸಲಿದ್ದಾರೆ. ಸಂವಹನದ ವೇಳೆ ಆಯಾ ರಾಜ್ಯಗಳ ಮುಖ್ಯಮಂತ್ರಿ ಕೂಡಾ ಭಾಗವಹಿಸುವರು.

ಕೋವಿಡ್ ಪರಿಸ್ಥಿತಿ ಗಂಭೀರವಾದ ಬಳಿಕ ಪ್ರಧಾನಿ ಹೀಗೆ ಜಿಲ್ಲಾ ಹಂತದಲ್ಲಿ ಆಡಳಿತ ಅಧಿಕಾರಿಗಳ ಜೊತೆಗೆ ಚರ್ಚಿಸುತ್ತಿರುವುದು ಇದೇ ಮೊದಲು. ಇದುವರೆಗೂ ಮುಖ್ಯಮಂತ್ರಿಗಳ ಜೊತೆಗೆ ವಿವಿಧ ಸಭೆ ನಡೆಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಶೇ 72ರಷ್ಟು ಹೊಸ ಸೋಂಕು ಪ್ರಕರಣಗಳು, ಶೇ 74.30ರಷ್ಟು ಸಾವಿನ ಪ್ರಕರಣಗಳು 10 ರಾಜ್ಯಗಳಲ್ಲಿ ದಾಖಲಾಗುತ್ತಿವೆ. ಈ ರಾಜ್ಯಗಳು– ಮಹಾರಾಷ್ಟ್ರ, ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು