ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಗಾಸಸ್ ಗುರಿ: ರಾಹುಲ್ ಗಾಂಧಿ, ಪ್ರಶಾಂತ್ ಕಿಶೋರ್, ಸ್ಟಾಲಿನ್, ಅಶ್ವಿನಿ ವೈಷ್ಣವ್

ಮುಖ್ಯ ನ್ಯಾಯಮೂರ್ತಿ ಮೇಲೂ ಕಣ್ಗಾವಲು
ಅಕ್ಷರ ಗಾತ್ರ

‘ದೇಶದ ವಿರೋಧ ಪಕ್ಷಗಳ ಮೂವರು ಪ್ರಮುಖ ರಾಜಕಾರಣಿಗಳು, ಕೇಂದ್ರ ಸರ್ಕಾರದ ಇಬ್ಬರು ಸಚಿವರು, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, 40 ಪತ್ರಕರ್ತರು ಮತ್ತು ಚುನಾವಣಾ ಆಯೋಗದ ಆಯುಕ್ತರ ಸ್ಮಾರ್ಟ್‌ಫೋನ್‌ ಗಳ ಮೇಲೆ ‘ಪೆಗಾಸಸ್’ ಕಣ್ಗಾವಲು ತಂತ್ರಾಂಶ ಬಳಸಿ, ಕಣ್ಗಾವಲು ನಡೆಸುವ ಗುರಿ ಹಾಕಿಕೊಳ್ಳಲಾಗಿತ್ತು. ಇದಕ್ಕೆ ಸಂಬಂಧಿಸಿದ ದತ್ತಾಂಶವು ಸೋರಿಕೆ ಯಾಗಿದ್ದು, ಅದರಲ್ಲಿ 300 ಭಾರತೀಯರ ಫೋನ್‌ ಸಂಖ್ಯೆಗಳು ಇವೆ. 2018-2019ರ ಅವಧಿಯಲ್ಲಿ ಕಣ್ಗಾವಲು ನಡೆ
ದಿರುವ ಸಾಧ್ಯತೆ ಇದೆ’ ಎಂದು ದಿ ವೈರ್ ಪೋರ್ಟಲ್‌ ವರದಿ ಮಾಡಿದೆ.

ಫ್ರಾನ್ಸ್‌ನ ಫಾರ್‌ಬಿಡನ್ ಸ್ಟೋರೀಸ್‌ ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ನಡೆಸಿರುವ ತನಿಖಾ ಪತ್ರಿಕೋದ್ಯಮದ ಭಾಗವಾಗಿ ಈ ದತ್ತಾಂಶವನ್ನು ವಿಶ್ವದಾ ದ್ಯಂತ 15 ಮಾಧ್ಯಮ ಸಂಸ್ಥೆಗಳ ಜತೆ ಹಂಚಿ ಕೊಂಡಿವೆ. ಇದೇ ತನಿಖಾ ಸುದ್ದಿಯನ್ನು ದಿ ವಾಷಿಂಗ್ಟನ್ ಪೋಸ್ಟ್‌, ದಿ ಗಾರ್ಡಿಯನ್ ಸಹ ಪ್ರಕಟಿಸಿವೆ. ಪೆಗಾಸಸ್ ಮೂಲಕ ಕಣ್ಗಾವಲು ನಡೆಸಲು ಗುರುತಿಸಲಾಗಿದ್ದ ಭಾರತೀಯರ ಬಗ್ಗೆ ದಿ ವೈರ್ ಸರಣಿ ವರದಿಗಳನ್ನು ಪ್ರಕಟಿಸಿದೆ.

‘ಪಟ್ಟಿಯಲ್ಲಿರುವ ಫೋನ್‌ ಸಂಖ್ಯೆಗಳು ಇರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲೂ ಪೆಗಾಸಸ್ ಕಣ್ಗಾವಲು ತಂತ್ರಾಂಶವನ್ನು ಅಳವಡಿಸಲಾಗಿದೆ ಎಂದರ್ಥವಲ್ಲ. ಬದಲಿಗೆ ಇಷ್ಟು ಜನರನ್ನು ಗುರಿ ಮಾಡಿಕೊಳ್ಳಲಾಗಿತ್ತು ಎಂಬುದನ್ನಷ್ಟೇ ಈ ದಾಖಲೆಗಳು ಹೇಳುತ್ತವೆ. ಆದರೆ ಇವುಗಳಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಕಣ್ಗಾವಲು ನಡೆಸಲಾಗಿದೆ. ಈ ಪಟ್ಟಿಯಲ್ಲಿ ಇರುವವರಲ್ಲಿ 20ಕ್ಕೂ ಹೆಚ್ಚು ಜನರ ಸ್ಮಾರ್ಟ್‌ಫೋನ್‌ಗಳನ್ನು ಸ್ವತಂತ್ರ ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದೆ. 10 ಸ್ಮಾರ್ಟ್‌ಫೋನ್‌ಗಳಲ್ಲಿ ಪೆಗಾಸಸ್ ಕಣ್ಗಾವಲು ತಂತ್ರಾಂಶ ಇರುವುದು ದೃಢಪಟ್ಟಿದೆ. ಉಳಿಕೆ ಸ್ಮಾರ್ಟ್‌ಫೋನ್‌ಗಳ ಮೇಲೆ ಕಣ್ಗಾವಲು ನಡೆಸಿರುವುದು ಪತ್ತೆಯಾಗಿದೆ. ಪಟ್ಟಿಯಲ್ಲಿರುವ ಎಲ್ಲರ ಸ್ಮಾರ್ಟ್‌ಫೋನ್‌ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದರೆ, ಅವುಗಳಲ್ಲಿ ಪೆಗಾಸಸ್ ಕಣ್ಗಾವಲು ತಂತ್ರಾಂಶ ಅಳವಡಿಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಮಾಡಬಹುದು’ ಎಂದು ದಿ ವೈರ್ ಹೇಳಿದೆ.

ಆಧಾರ: ಪಿಟಿಐ, ದಿ ವೈರ್, ದಿ ವಾಷಿಂಗ್ಟನ್ ಪೋಸ್ಟ್

***

ಸರ್ಕಾರಗಳು ಬಳಸುವ ಅಧಿಕೃತ ವೈರಸ್

ಇಸ್ರೇಲ್‌ನ ಸೈಬರ್ ಭದ್ರತಾ ಸಂಸ್ಥೆ ಎನ್‌ಎಸ್‌ಒ ಗ್ರೂಪ್‌ ಅಭಿವೃದ್ಧಿಪಡಿಸಿ, ಮಾರಾಟ ಮಾಡುತ್ತಿರುವ ಕಣ್ಗಾವಲು ತಂತ್ರಾಂಶದ ಹೆಸರು ಪೆಗಾಸಸ್. ತಾಂತ್ರಿಕವಾಗಿ ಪೆಗಾಸಸ್ ಒಂದು ಕುತಂತ್ರಾಂಶ (ಮಾಲ್‌ವೇರ್). ಅಧಿಕೃತವಾಗಿ ಮಾರಾಟವಾಗುತ್ತಿರುವ ಜಗತ್ತಿನ ಅತ್ಯಂತ ಪ್ರಬಲ ಕುತಂತ್ರಾಂಶ ಇದು.

‘ಪೆಗಾಸಸ್ ಅನ್ನು ಸ್ಥಾಪಿತ ಸರ್ಕಾರಗಳಿಗೆ ಮತ್ತು ಸರ್ಕಾರದ ಗುಪ್ತಚರ ಸಂಸ್ಥೆಗಳಿಗಷ್ಟೇ ಮಾರಾಟ ಮಾಡುತ್ತೇವೆ’ ಎಂದು ಎನ್‌ಎಸ್‌ಒ ಗ್ರೂಪ್ ಘೋಷಿಸಿಕೊಂಡಿದೆ. ಆದರೆ ತನ್ನ ಗ್ರಾಹಕರು ಯಾರು ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ.

‘ಪೆಗಾಸಸ್ ಅನ್ನು ಸರ್ಕಾರಗಳಿಗೆ ಮಾತ್ರವೇ ಮಾರಾಟ ಮಾಡಲಾಗುತ್ತದೆ. ಈಗ ಸೋರಿಕೆಯಾಗಿರುವ ದತ್ತಾಂಶದಲ್ಲಿ ಇರುವವರೆಲ್ಲರೂ ಪ್ರಧಾನಿ ನರೇಂದ್ರ ಮೋದಿ ಅವರ ವಿರೋಧಿಗಳು, ವಿರೋಧ ಪಕ್ಷಗಳ ನಾಯಕರು, ಸರ್ಕಾರದ ವಿರುದ್ಧ ತನಿಖಾ ಪತ್ರಿಕೋದ್ಯಮ ನಡೆಸುತ್ತಿದ್ದ ಪತ್ರಕರ್ತರೇ ಆಗಿದ್ದಾರೆ. ಹೀಗಿದ್ದಾಗ ಸರ್ಕಾರವೇ ಈ ಪೆಗಾಸಸ್ ಕಣ್ಗಾವಲು ತಂತ್ರಾಂಶವನ್ನು ಬಳಸಿಕೊಂಡು ಕಣ್ಗಾವಲು ನಡೆಸುತ್ತಿದೆ ಎಂದು ಸಂದೇಹ ಪಡುವುದರಲ್ಲಿ ತಪ್ಪಿಲ್ಲ’ ಎಂದು ದಿ ವೈರ್ ತನ್ನ ಸರಣಿ ವರದಿಗಳಲ್ಲಿ ಹೇಳಿದೆ.

ಪೆಗಾಸಸ್ ತಂತ್ರಾಂಶವನ್ನು ಫೋನ್‌ ಕರೆಯ ಮೂಲಕವೂ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಬಹುದು. ಪೆಗಾಸಸ್ ಅಳವಡಿಕೆಯಾಗಿರುವುದು ಬಳಕೆದಾರರಿಗೆ ತಿಳಿಯದೇ ಹೋಗುವ ಸಾಧ್ಯತೆಯೇ ಹೆಚ್ಚು. ಈ ತಂತ್ರಾಂಶ ಬಳಸಿಕೊಂಡು ಬಳಕೆದಾರರ ಫೋನ್‌ ಕರೆ, ಸಂದೇಶಗಳು, ವಾಟ್ಸ್‌ಆ್ಯಪ್‌ ಸಂದೇಶ-ಕರೆ, ವಿಡಿಯೊ ಕರೆಗಳ ಮೇಲೆ ಕಣ್ಗಾವಲು ನಡೆಸಬಹುದು. ಮೀಡಿಯಾ ಗ್ಯಾಲರಿ, ಕರೆ ಪಟ್ಟಿಯಲ್ಲಿರುವ ದತ್ತಾಂಶಗಳನ್ನು ಅಳಿಸಬಹುದು ಮತ್ತು ಹೊಸ ದತ್ತಾಂಶಗಳನ್ನು ಸೇರಿಸಬಹುದು.

2017-18ರ ಅವಧಿಯಲ್ಲಿ ಭಾರತೀಯ ಪತ್ರಕರ್ತರ ಸ್ಮಾರ್ಟ್‌ಫೋನ್‌ಗಳ ಮೇಲೆ ಪೆಗಾಸಸ್ ಬಳಸಿ ಸರ್ಕಾರ ಕಣ್ಗಾವಲು ನಡೆಸಿದೆ ಎಂದು 2019ರಲ್ಲೂ ವರದಿಯಾಗಿತ್ತು. ಅದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರಿ ವಾಕ್ಸಮರಕ್ಕೆ ಕಾರಣವಾಗಿತ್ತು.


ಗುರಿ ಯಾರು?

ವಿಪಕ್ಷ ನಾಯಕರು: ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಹಾಗೂ ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಹೆಸರು ಈ ಪಟ್ಟಿಯಲ್ಲಿದೆ. ವಿರೋಧ ಪಕ್ಷಗಳಿಗೆ ಚುನಾವಣಾ ಕಾರ್ಯತಂತ್ರ ನಿಪುಣನಾಗಿ ಕೆಲಸ ಮಾಡುತ್ತಿರುವ ಪ್ರಶಾಂತ್ ಕಿಶೋರ್ ಅವರ ಹೆಸರೂ ಈ ಪಟ್ಟಿಯಲ್ಲಿದೆ. 2019ರ ಚುನಾವಣೆಗೂ ಮೊದಲು ಮತ್ತು ನಂತರ ಇವರ ಮೇಲೆ ಕಣ್ಗಾವಲು ನಡೆಸಿರುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪತ್ರಕರ್ತರು: ಒಟ್ಟು 40 ಪತ್ರಕರ್ತರ ಫೋನ್‌ ಸಂಖ್ಯೆಗಳು ಸೋರಿಕೆಯಾದ ದತ್ತಾಂಶಗಳಲ್ಲಿ ಇದೆ. ದಿ ವೈರ್, ದಿ ಹಿಂದೂ, ಹಿಂದುಸ್ತಾನ್ ಟೈಮ್ಸ್, ಮಿಂಟ್, ಇಂಡಿಯನ್ ಎಕ್ಸ್‌ಪ್ರೆಸ್‌, ಟಿವಿ18 ಪತ್ರಕರ್ತರ ಮತ್ತು ಹಲವು ಪ್ರಾದೇಶಿಕ ಮಾಧ್ಯಮಗಳ ಪತ್ರಕರ್ತರ ಫೋನ್‌ ಸಂಖ್ಯೆಗಳು ಈ ಪಟ್ಟಿಯಲ್ಲಿವೆ.

ಚುನಾವಣಾ ಆಯುಕ್ತ: ನಿವೃತ್ತ ಚುನಾವಣಾ ಆಯುಕ್ತರಾದ ಅಶೋಕ್ ಲವಾಸಾ ಅವರ ಹೆಸರೂ ಈ ಪಟ್ಟಿಯಲ್ಲಿದೆ. 2019ರ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ದೂರಿನ ಪರಿಶೀಲನೆ ನಡೆಸಿದ್ದ ಚುನಾವಣಾ ಆಯುಕ್ತರ ಸಮಿತಿಯಲ್ಲಿ ಅಶೋಕ್ ಇದ್ದರು. ಮೂರು ಸದಸ್ಯರ ಈ ಸಮಿತಿಯಲ್ಲಿ ಇಬ್ಬರು, ‘ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ’ ಎಂದು ತೀರ್ಪು ನೀಡಿದ್ದರು. ಅಶೋಕ್ ಅವರು, ‘ನೀತಿ ಸಂಹಿತೆ ಉಲ್ಲಂಘಿಸಲಾಗಿದೆ’ ಎಂದು ಭಿನ್ನಮತದ ತೀರ್ಪು ನೀಡಿದ್ದರು.

ಕೇಂದ್ರ ಸಚಿವರು: ಕೇಂದ್ರ ಸರ್ಕಾರದ ಈಗಿನ ಸಚಿವರಾದ ಪ್ರಹ್ಲಾದ್ ಪಟೇಲ್ ಮತ್ತು ಅಶ್ವಿನಿ ವೈಷ್ಣವ್ ಅವರ ಫೋನ್‌ ಸಂಖ್ಯೆ ಈ ಪಟ್ಟಿಯಲ್ಲಿವೆ. 2018-2019ರ ಅವಧಿಯಲ್ಲಿ ಈ ಇಬ್ಬರ ಫೋನ್‌ಗಳ ಮೇಲೆ ಕಣ್ಗಾವಲು ನಡೆಸಿರುವ
ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇವರಲ್ಲಿ ಅಶ್ವಿನಿ ವೈಷ್ಣವ್ ಅವರು ಈಗ ಕೇಂದ್ರ ಮಾಹಿತಿ
ತಂತ್ರಜ್ಞಾನ ಸಚಿವ.

ನ್ಯಾಯಮೂರ್ತಿ ಮತ್ತು ಸಿಬ್ಬಂದಿ: 2019ರಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಜನ್ ಗೊಗೊಯಿ ಮತ್ತು ಅವರ ಕಚೇರಿ ಸಿಬ್ಬಂದಿಯ ಫೋನ್‌ ಸಂಖ್ಯೆಗಳು ಈ ಪಟ್ಟಿಯಲ್ಲಿವೆ. ರಂಜನ್ ಅವರು ತಮ್ಮ ಕಚೇರಿಯ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಬಂದ ನಂತರ, ಈ ಪಟ್ಟಿಗೆ ಅವರ ಫೋನ್‌ ಸಂಖ್ಯೆ ಸೇರ್ಪಡೆಯಾಗಿದೆ.

***

ವರದಿಗಳಲ್ಲಿ ಹುರುಳಿಲ್ಲ. ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗುವ ಮುನ್ನಾ ದಿನ ಈ ವರದಿ ಪ್ರಕಟಿಸಲಾಗಿದೆ ಎಂದರೆ, ಉದ್ದೇಶವನ್ನು ಅರ್ಥ ಮಾಡಿಕೊಳ್ಳಿ

- ಅಶ್ವಿನಿ ವೈಷ್ಣವ್, ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ

***

ಸರ್ಕಾರವೇ ಪೆಗಾಸಸ್ ಅನ್ನು ಖರೀದಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಭಾರತೀಯರ ಮೇಲೆ ವಿದೇಶಿ ಕಂಪನಿ ಮೂಲಕ ಕಣ್ಗಾವಲು ನಡೆಸಿ ದೇಶದ ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳಲಾಗಿದೆ

- ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

***

ಅಡ್ಡಿಪಡಿಸುವವರು ತಡೆಒಡ್ಡುವವರಿಗಾಗಿ ಸಿದ್ಧಪಡಿಸಿದ ವರದಿಯಿದು. ಸಂಸತ್ ಅಧಿವೇಶನದ ಸಮಯದಲ್ಲಿ ಆಯ್ದ ಮಾಹಿತಿಯನ್ನು ಮಾತ್ರ ಕೊಟ್ಟಿದ್ದಾರೆ. ನೀವು ಕ್ರೊನಾಲಜಿ ಅರ್ಥಮಾಡಿಕೊಳ್ಳಿ

- ಅಮಿತ್ ಶಾ, ಕೇಂದ್ರ ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT