ಬುಧವಾರ, ಸೆಪ್ಟೆಂಬರ್ 22, 2021
24 °C

ಪೆಗಾಸಸ್ ಗೂಢಚರ್ಯೆ: ಸ್ವತಂತ್ರ ತನಿಖೆಗೆ ಆಗ್ರಹ, ಪತ್ರಕರ್ತರಿಂದ ಸುಪ್ರೀಂಗೆ ಅರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೆಗಾಸಸ್ ಕುತಂತ್ರಾಂಶ ಬಳಸಿಕೊಂಡು ರಾಜಕಾರಣಿಗಳು, ಪತ್ರಕರ್ತರು ಹಾಗೂ ನಾಗರಿಕರ ಮೇಲೆ ಸರ್ಕಾರ ಕಣ್ಗಾವಲು ಇಟ್ಟಿದೆ ಎಂಬ ವರದಿಗಳ ಕುರಿತು ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಯಿಂದ ಸ್ವತಂತ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಹಿರಿಯ ಪತ್ರಕರ್ತ ಎನ್. ರಾಮ್ ಮತ್ತು ಶಶಿ ಕುಮಾರ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. 

ಮುಂದಿನ ಕೆಲವು ದಿನಗಳಲ್ಲಿ ಈ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಭಾರತದಲ್ಲಿ ಮುಕ್ತ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ  ತಣ್ಣಗಾಗಿಸುವ ಯತ್ನವಿದು ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. 

‘ಸರ್ಕಾರ ಅಥವಾ ಅದರ ಯಾವುದೇ ಸಂಸ್ಥೆಗಳು ಪೆಗಾಸಸ್ ತಂತ್ರಾಂಶದ ಪರವಾನಗಿ ಪಡೆದಿವೆಯೇ ಮತ್ತು ಕಣ್ಗಾವಲು ನಡೆಸಲು ಅದನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬಳಸುತ್ತಿವೆಯೇ’ ಎಂದು ಬಹಿರಂಗಪಡಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಲಾಗಿದೆ.

ಇಂದು ವಿಚಾರಣೆ

ಪೆಗಾಸಸ್ ಕುತಂತ್ರಾಂಶ ಬಳಸಿಕೊಂಡು ರಾಜಕಾರಣಿಗಳು, ಪತ್ರಕರ್ತರು ಹಾಗೂ ಇತರರ ದೂರವಾಣಿಗಳನ್ನು ಕದ್ದಾಲಿಸಿರುವ ವಿಷಯವಾಗಿ ಮಾಹಿತಿ ತಂತ್ರಜ್ಞಾನ (ಐ.ಟಿ) ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಅಧಿಕಾರಿಗಳನ್ನು ಪ್ರಶ್ನೆ ಮಾಡಲಿದೆ. 

32 ಸದಸ್ಯರ ಸಂಸದೀಯ ಸ್ಥಾಯಿ ಸಮಿತಿಯು ಬುಧವಾರ ಸಭೆ ಸೇರಲಿದ್ದು, ಪಟ್ಟಿ ಮಾಡಲಾದ ಸಭೆಯ ಕಾರ್ಯಸೂಚಿಯಲ್ಲಿ ನಾಗರಿಕರ ದತ್ತಾಂಶ ಸುರಕ್ಷತೆ ಮತ್ತು ಗೋಪ್ಯತೆ ವಿಷಯದ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಲೋಕಸಭಾ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 

ಸದ್ಯದಲ್ಲೇ ಬಹಿರಂಗ: ಚಿದಂಬರಂ

ಪೆಗಾಸಸ್ ಗೂಢಚರ್ಯೆ ಪ್ರಕರಣದಲ್ಲಿ ‘ಭಾರತೀಯ ಗ್ರಾಹಕ’ ಯಾರು ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ ಎಂದು ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಮಂಗಳವಾರ ಹೇಳಿದ್ದಾರೆ. ‘ಆ ಗ್ರಾಹಕರ ಹೆಸರು ಪತ್ತೆಯಾಗುವವರೆಗೂ ಕೇಂದ್ರ ಸರ್ಕಾರವು ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸುತ್ತಿರುತ್ತದೆ. ಗೂಢಚರ್ಯೆ ತಂತ್ರಾಂಶವನ್ನು ಖರೀದಿಸಿರುವ ಭಾರತೀಯ ಗ್ರಾಹಕ ಯಾರು, ಅದು ಕೇಂದ್ರ ಸರ್ಕಾರವೇ, ಅಥವಾ ಸರ್ಕಾರದ ಸಂಸ್ಥೆಯೇ ಅಥವಾ ಖಾಸಗಿ ಘಟಕವೇ‘ ಎಂದು ಅವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.   

ಜಂಟಿ ನಿಲುವಳಿ ಮಂಡನೆಗೆ ನಿರ್ಧಾರ

ಕಾಂಗ್ರೆಸ್, ಡಿಎಂಕೆ, ಶಿವಸೇನಾ ಸೇರಿದಂತೆ ವಿರೋಧ ಪಕ್ಷದ ನಾಯಕರು ಬುಧವಾರ ಲೋಕಸಭೆಯಲ್ಲಿ ಪೆಗಾಸಸ್ ವಿಷಯದ ಬಗ್ಗೆ ಜಂಟಿ ಗೊತ್ತುವಳಿ ಮಂಡಿಸಲು ನಿರ್ಧರಿಸಿದ್ದಾರೆ. ಪ್ರತಿಪಕ್ಷಗಳ ಬೇಡಿಕೆಯನ್ನು ಸರ್ಕಾರ ನಿರ್ಲಕ್ಷಿಸಿಸಿದರೆ ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಎಲ್ಲ ಸಮಾನ ಮನಸ್ಕ ಪಕ್ಷಗಳು ಸಭೆ ನಡೆಸಲಿವೆ. ಲೋಕಸಭೆ ಮತ್ತು ರಾಜ್ಯಸಭೆಯು ಬುಧವಾರ ಸಮಾವೇಶಗೊಳ್ಳುವುದಕ್ಕಿಂತ ಮೊದಲು ಈ ಸಭೆ ನಡೆಯಲಿದೆ. ಸಭೆಯಲ್ಲಿ ಕಾಂಗ್ರೆಸ್‌ ಸಂಸದ ರಾಹುಲ್  ಗಾಂಧಿ ಭಾಗವಹಿಸಲಿದ್ದಾರೆ. ಕಾಂಗ್ರೆಸ್, ಎನ್‌ಸಿಪಿ, ಶಿವಸೇನಾ, ಸಿಪಿಎಂ, ಆರ್‌ಎಸ್‌ಪಿ, ಮುಸ್ಲಿಂ ಲೀಗ್, ಎನ್‌ಸಿ ಮತ್ತು ಬಿಎಸ್‌ಪಿ ಒಳಗೊಂಡ ಹತ್ತು ಪಕ್ಷಗಳ ನಾಯಕರು ಮಂಗಳವಾರ ಸಂಜೆ ಸಭೆ ಸೇರಿ ಮುಂದಿನ ತಂತ್ರಗಾರಿಕೆ ಬಗ್ಗೆ ಚರ್ಚಿಸಿದ್ದಾರೆ.

*ಜೆಟ್‌ ಏರ್‌ವೇಸ್‌ನ ಮಾಜಿ ಮುಖ್ಯಸ್ಥ ನರೇಶ್ ಗೋಯೆಲ್, ಸ್ಪೈಸ್‌ಜೆಟ್‌ನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಮತ್ತು ಎಸ್ಸಾರ್‌ ಗ್ರೂಪ್‌ನ ಪ್ರಶಾಂತ್ ರೂಯಾ ಅವರ ಫೋನ್‌ ಸಂಖ್ಯೆ ಪೆಗಾಸಸ್ ಗೂಢಚರ್ಯೆ ಪಟ್ಟಿಯಲ್ಲಿ

*ಪಶ್ಚಿಮ ಬಂಗಾಳದಂತೆಯೇ ಪೆಗಾಸಸ್ ಗೂಢಚರ್ಯೆ ತನಿಖೆಗೆ ಆಯೋಗ ರಚಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಕಾಂಗ್ರೆಸ್ ಒತ್ತಾಯ

*ಪೆಗಾಸಸ್ ಗೂಢಚರ್ಯೆಯನ್ನು ಖಂಡಿಸಿ 'ಆಲ್‌ ಇಂಡಿಯಾ ರೈಲ್ವೆಮೆನ್ಸ್ ಫೆಡರೇಷನ್ 'ದಿಕ್ಕಾರ ದಿನ' ಆಚರಿಸಿದೆ

ಇದನ್ನೂ ಓದಿ... ಭಿನ್ನಾಭಿಪ್ರಾಯವನ್ನು ಸಮನ್ವಯಗೊಳಿಸುವ ಸಾಮರ್ಥ್ಯ ಪ್ರಜಾಪ್ರಭುತ್ವಕ್ಕಿದೆ: ಕೋವಿಂದ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು