ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಗಾಟ್‌ಗೆ ವಿಷಯುಕ್ತ ಪಾನೀಯ ಕುಡಿಸಿ ಕೊಲೆ: ಗೋವಾ ಐಜಿಪಿ

ಇಬ್ಬರು ಆಪ್ತರಿಂದಲೇ ಉದ್ದೇಶಪೂರ್ವಕ ಕೃತ್ಯ
Last Updated 26 ಆಗಸ್ಟ್ 2022, 19:45 IST
ಅಕ್ಷರ ಗಾತ್ರ

ಪಣಜಿ: ಹರಿಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಾಟ್‌ ಅವರ ಸಾವಿನ ತನಿಖೆ ಮಹತ್ವದ ತಿರುವು ಪಡೆದಿದ್ದು, ಫೋಗಾಟ್ ಅವರನ್ನು ಅವರ ಇಬ್ಬರು ಆಪ್ತರೇ ವಿಷಯುಕ್ತ ರಾಸಾಯನಿಕ ಬೆರೆಸಿದ ಪಾನೀಯ ಕುಡಿಸಿ ಕೊಲೆ ಮಾಡಿರುವ ಸಂಗತಿಯನ್ನು ಗೋವಾ ಪೊಲೀಸರು ಪತ್ತೆಹಚ್ಚಿದ್ದಾರೆ.

ಅಂಜುನಾ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದಐಜಿಪಿ ಓಂವೀರ್ ಸಿಂಗ್ ಬಿಷ್ಣೋಯ್, ಫೋಗಾಟ್‌ ಅವರ ಆಪ್ತರಾದ ಸುಧೀರ್‌ ಸಂಗ್ವಾನ್‌ ಮತ್ತು ಸುಖ್ವಿಂದರ್‌ ಸಿಂಗ್‌ ಕುಡಿಯುವ ನೀರಿನ ಬಾಟಲಿಯಲ್ಲಿಉದ್ದೇಶಪೂರ್ವಕವಾಗಿ ವಿಷದ ದ್ರವ ಬೆರೆಸಿ, ಅದನ್ನು ಆಕೆಗೆ ಕುಡಿಸಿ ಕೊಂದಿದ್ದಾರೆ. ಕೊಲೆ ಮಾಡಿರುವುದನ್ನು ಇಬ್ಬರು ಆರೋಪಿಗಳು ಒಪ್ಪಿಕೊಂಡಿದ್ದು, ಇಬ್ಬರನ್ನೂ ಬಂಧಿಸಲಾಗಿದೆ ಎಂದು ತಿಳಿಸಿದರು.

ಗುರುವಾರ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಫೋಗಾಟ್‌ ಅವರ ದೇಹದ ಮೇಲೆ ಹಲ್ಲೆಯಗಾಯದ ಗುರುತುಗಳಿದ್ದವು. ಗೋವಾ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ತಜ್ಞರು ಫೋಗಾಟ್‌ ಸಾವಿನ ಕಾರಣವನ್ನು ರಾಸಾಯನಿಕವನ್ನು ವಿಶ್ಲೇಷಣೆ ನಡೆಸುವವರೆಗೂ ಬಹಿರಂಗಪಡಿಸಿರಲಿಲ್ಲ ಎಂದು ಬಿಷ್ಣೋಯ್‌ ತಿಳಿಸಿದರು.

ಅಂಜುನಾದಕರ್ಲೀಸ್‌ ರೆಸ್ಟೋರೆಂಟ್‌ನಿಂದ ಕಲೆ ಹಾಕಿರುವ ಸಾಕ್ಷ್ಯ ಮತ್ತು ಸಿಸಿಟಿವಿ ಕ್ಯಾಮೆರಾ ದೃಶ್ಯಗಳಿಂದ ಫೋಗಾಟ್‌ ಜತೆಗೆ ಪಾರ್ಟಿಯಲ್ಲಿ ಭಾಗವಹಿಸಿದ್ದ ಆಪ್ತರು ಆಕೆ ಕುಡಿದ ಪಾನೀಯದಲ್ಲಿ ವಿಷ ಬೆರೆಸಿರುವುದು ಮತ್ತು ಆಕೆ ನಿಯಂತ್ರಣ ಕಳೆದುಕೊಂಡು ಬಿದ್ದಾಗ ಆಕೆಯನ್ನು ಎತ್ತಿಕೊಂಡು ಹೋಗಿ, ಮತ್ತೊಮ್ಮೆ ವಿಷಮಿಶ್ರಿತ ಪಾನೀಯ ಕುಡಿಸಿರುವುದು ಕಂಡುಬಂದಿದೆ ಎಂದು ಹಿರಿಯ ಪೊಲಿಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಸೋಮವಾರ ರಾತ್ರಿ ಊಟ ಮುಗಿಸಿ ಮನೆಗೆ ತೆರಳಿದ ನಂತರ ಫೋಗಾಟ್ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡು, ಮರು ದಿನ (ಆ.23) ಬೆಳಿಗ್ಗೆ ಉತ್ತರ ಗೋವಾದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ ನಂತರ ಅವರು ಸಾವನ್ನಪ್ಪಿದ್ದರು.

ಸೋನಾಲಿ ಫೋಗಾಟ್‌ ಅವರು ತಮ್ಮ ಆಪ್ತರೊಂದಿಗೆ ರಜೆ ಕಳೆಯಲು ಗೋವಾದಲ್ಲಿದ್ದರು. ಫೋಗಾಟ್‌ ಸಾವಿನಲ್ಲಿ ಏನೋ ಸಂಚು ಇದೆ ಎಂಬುದಾಗಿ ಅವರ ಕುಟುಂಬ ಸದಸ್ಯರು ಆರೋಪಿಸಿದ್ದರು. ಜತೆಗೆ ಫೋಗಾಟ್‌ ಅವರ ಸಹೋದರಿಯರು, ಆಕೆ ನಮಗೆ ಕರೆ ಮಾಡಿ ಸೋಮವಾರ ರಾತ್ರಿತಾನು ಸೇವಿಸಿದ ಆಹಾರದ ಬಗ್ಗೆ ಹೇಳಿಕೊಂಡಿದ್ದಳು ಎಂದು ಹೇಳಿದ್ದರು.

ಸೋನಾಲಿ ಫೋಗಾಟ್ ಅವರ ಸಾವಿನ ಸಂಬಂಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಆಕೆಯ ಸಹೋದರ ರಿಂಕು ಢಾಕಾ ಒತ್ತಾಯಿಸಿದಾಗಲೂ, ಫೋಗಾಟ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪ್ರಮೋದ್ ಸಾವಂತ್ ಹೇಳಿಕೆ ನೀಡಿದ್ದರು.

ಫೋಗಾಟ್‌ ಅವರ ಹತ್ಯೆಗೆ ರಾಜಕೀಯ ಉದ್ದೇಶ ಅಥವಾ ಹಣಕಾಸು ವಿಷಯವೇ ಎನ್ನುವುದು ಇನ್ನೂ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಗೋವಾ ಕಾಂಗ್ರೆಸ್‌ ಒತ್ತಾಯಿಸಿದೆ.

ಹರಿಯಾಣದಲ್ಲಿ ಅಂತ್ಯಕ್ರಿಯೆ: ಹರಿಯಾಣದ ರಿಷಿ ನಗರದ ಸ್ಮಶಾನದಲ್ಲಿ ಸೋನಾಲಿ ಫೋಗಾಟ್‌ ಅವರ ಅಂತ್ಯಕ್ರಿಯೆ ನೆರವೇರಿತು. ಮಗಳು ಯಶೋಧರ ಹಾಗೂ ಕುಟುಂಬ ಸದಸ್ಯರು ಕಣ್ಣೀರಿನ ವಿದಾಯ ಹೇಳಿದರು.

ಗುರುವಾರ ರಾತ್ರಿ ಸೋನಾಲಿ ಮೃತದೇಹವನ್ನು ಗೋವಾದಿಂದ ದೆಹಲಿ ಮೂಲಕ ತರಲಾಯಿತು. ಬೆಳಿಗ್ಗೆ ಅವರ ತೋಟದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

‘ಶುಕ್ರವಾರ ಮುಖ್ಯಮಂತ್ರಿ ಮನೋಹರ್ ಲಾಲ್ ಅವರೊಂದಿಗೆ ಮಾತನಾಡಿದ್ದು, ಆಕೆಯ ಸಾವಿನ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದೇನೆ’ ಎಂದು ಬಿಜೆಪಿ ನಾಯಕ ಕುಲದೀಪ್ ಬಿಷ್ಣೋಯ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT