ಐಟಿ ನಿಯಮಕ್ಕೆ ತಿದ್ದುಪಡಿ: ಅಭಿಪ್ರಾಯ ಸಂಗ್ರಹಣೆ ಕಾಲಾವಕಾಶ ವಿಸ್ತರಣೆ

ನವದೆಹಲಿ: ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗಸೂಚಿ ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮ– 2021ಕ್ಕೆ ಕರಡು ತಿದ್ದುಪಡಿ ತರುವ ಕುರಿತು ಸಂಬಂಧಪಟ್ಟವರ ಅಭಿಪ್ರಾಯ ಕಲೆಹಾಕಲು ನಿಗದಿಪಡಿಸಲಾಗಿದ್ದ ಕಾಲಮಿತಿಯನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಗುರುವಾರ ವಿಸ್ತರಿಸಿದೆ.
ಪ್ರೆಸ್ ಇನ್‌ಫರ್ಮೇಷನ್ ಬ್ಯೂರೊ (ಪಿಐಬಿ) ಸುಳ್ಳು ಸುದ್ದಿ (ಫೇಕ್ ನ್ಯೂಸ್) ಎಂದು ವರ್ಗೀಕರಿಸುವ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಬೇಕು ಎಂದು ಉದ್ದೇಶಿತ ತಿದ್ದುಪಡಿ ನಿಯಮ ಇದಾಗಿದೆ. ಈ ತಿದ್ದುಪಡಿ ನಿಯಮಕ್ಕೆ ಸಂಬಂಧಿಸಿ 2023ರ ಫೆಬ್ರುವರಿ 20ರ ವರೆಗೆ ಸಂಬಂಧಪಟ್ಟವರು ಅಭಿಪ್ರಾಯಗಳನ್ನು ನೀಡಬಹುದು ಎಂದು ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಇದಕ್ಕೂ ಮೊದಲು ಕಡೇ ದಿನಾಂಕವನ್ನು ಜನವರಿ 25ಕ್ಕೆ ನಿಗದಿಪಡಿಸಲಾಗಿತ್ತು.
ಈ ಕುರಿತು ಬುಧವಾರ ಮಾಹಿತಿ ನೀಡಿರುವ ಕೇಂದ್ರ ಎಲಿಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್, ಕೇಂದ್ರದ ಈ ಪ್ರಸ್ತಾವನೆಯು ಜಾರಿಯಾಗುವ ಮುನ್ನ ಮುಂದಿನ ತಿಂಗಳು ಸಂಬಂಧಪಟ್ಟವರ ಜೊತೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದರು.
ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ, ಎಡಿಟರ್ಸ್ ಗಿಲ್ಡ್ ಸೇರಿ ಹಲವಾರು ಪ್ರತಿಕಾ ಸಂಘಟನೆಗಳು ಕೇಂದ್ರ ಸರ್ಕಾರದ ಈ ಪ್ರಸ್ತಾವನೆಯನ್ನು ವಿರೋಧಿಸಿದ್ದವು. ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಉದ್ದೇಶದಿಂದ ಸರ್ಕಾರ ಈ ತಿದ್ದುಪಡಿ ನಿಯಮ ಜಾರಿಗೆ ತರಲು ಉದ್ದೇಶಿಸಿದೆ ಎಂದು ಆರೋಪಿಸಿದ್ದವು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.