ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಧೀಶರ ಸಂಖ್ಯೆ ದುಪ್ಪಟ್ಟು ಹೆಚ್ಚಿಸಲು ಕೋರಿ ‘ಸುಪ್ರೀಂ’ಗೆ ಅರ್ಜಿ

Last Updated 28 ಡಿಸೆಂಬರ್ 2020, 12:30 IST
ಅಕ್ಷರ ಗಾತ್ರ

ನವದೆಹಲಿ: ಹೈಕೋರ್ಟ್‌ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ನ್ಯಾಯಮೂರ್ತಿ ಮತ್ತು ನ್ಯಾಯಾಧೀಶರ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳಿಗೆ ನಿರ್ದೇಶನ ನೀಡುಬೇಕು ಎಂದು ಕೋರಿ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ.

ಮೂರು ವರ್ಷದೊಳಗಾಗಿ ಒಂದು ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಚಾರ್ಟರ್‌ ಅನುಷ್ಠಾನಗೊಳಿಸಬೇಕು ಎಂದೂ ಬಿಜೆಪಿ ನಾಯಕ, ವಕೀಲ ಅಶ್ವಿನಿ ಉಪಾಧ್ಯಾಯ ಅವರು ತಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ(ಪಿಐಎಲ್‌) ಕೋರಿದ್ದಾರೆ. ಇತ್ತೀಚೆಗಿನ ವರದಿಯಂತೆ 25 ಹೈಕೋರ್ಟ್‌ಗಳಲ್ಲಿ 1,079 ನ್ಯಾಯಮೂರ್ತಿಗಳ ಹುದ್ದೆಯು ಮಂಜೂರಾಗಿದ್ದು, ಈ ಪೈಕಿ 414 ಹುದ್ದೆಗಳು ಖಾಲಿ ಇವೆ.

‘ದೇಶದಲ್ಲಿ ವಿಚಾರಣಾ ನ್ಯಾಯಾಲಯದಿಂದ ಹಿಡಿದು ಸುಪ್ರೀಂ ಕೋರ್ಟ್‌ವರೆಗೆ ಅಂದಾಜು 5 ಕೋಟಿ ಪ್ರಕರಣಗಳು ಬಾಕಿ ಇವೆ. ಈ ವಿಳಂಬವು, ಜನರ ಮೂಲಭೂತ ಹಕ್ಕನ್ನು ಕಸಿದುಕೊಂಡಿದೆ. ಶೀಘ್ರದಲ್ಲೇ ನ್ಯಾಯ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಇದು ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯದ ಅವಿಭಾಜ್ಯ ಅಂಗವಾಗಿದೆ. ಇದರ ಪ್ರಾಮುಖ್ಯತೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷಿಸಿವೆ. ಅಗತ್ಯ ಮೂಲಸೌಕರ್ಯವನ್ನು ಇವರು ನೀಡದೇ ಇರುವ ಕಾರಣ ಪ್ರಕರಣಗಳ ವಿಚಾರಣೆ ಪೂರ್ಣಗೊಳ್ಳುತ್ತಿಲ್ಲ. ಪ್ರತಿ 10 ಲಕ್ಷ ಜನರಿಗೆ ನ್ಯಾಯಾಧೀಶರ ಸಂಖ್ಯೆ 20ಕ್ಕಿಂತ ಕಡಿಮೆ ಇದೆ. 2018ರಲ್ಲಿ ಈ ಪ್ರಮಾಣ 19.78, 2014ರಲ್ಲಿ 17.48 ಹಾಗೂ 2002ರಲ್ಲಿ 14.7 ಇತ್ತು’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಚಳಿಗಾಲದ ರಜೆ ಬಳಿಕ ಈ ಅರ್ಜಿಯು ವಿಚಾರಣೆಗೆ ಬರುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT