ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆತ್ತವರು ಕೋವಿಡ್‌ಗೆ ಬಲಿಯಾದ ಮಕ್ಕಳಿಗೆ ಪಿಎಂ ಕೇರ್ಸ್‌ ನಿಧಿ: ಮಾರ್ಗಸೂಚಿ ಪ್ರಕಟ

Last Updated 7 ಅಕ್ಟೋಬರ್ 2021, 19:28 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕದಿಂದ ಹೆತ್ತವರನ್ನು ಅಥವಾ ಪಾಲಕರನ್ನು ಕಳೆದುಕೊಂಡ ಮಕ್ಕಳ ಸುಸ್ಥಿರ ಬೆಳವಣಿಗೆಗೆ ಸಮಗ್ರ ಬೆಂಬಲ ನೀಡಲು ಯೋಜನೆ ರೂಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವರ್ಷ ಮೇ 29ರಂದು ಘೋಷಿಸಿದ್ದರು. ಯೋಜನೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದೆ.

ಮಕ್ಕಳನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶ ಇರಿಸಿಕೊಂಡು ಈ ಯೋಜನೆ ಜಾರಿಗೆ ತರಲಾಗಿದೆ. ಅದರಂತೆ ಪಿಎಂ ಕೇರ್ಸ್‌ನ ಮಕ್ಕಳ ಯೋಜನೆಗಳ ಅಡಿ ನೋಂದಾಯಿಸಿಕೊಂಡಿರುವ ಮಕ್ಕಳು ಈ ಯೋಜನೆಯ ಫಲಾನುಭವಿಗಳು ಆಗಿರುತ್ತಾರೆ. ಹೆತ್ತವರನ್ನು ಅಥವಾ ಪೋಷಕರನ್ನು ಕಳೆದುಕೊಂಡ ಮಕ್ಕಳು 18 ವರ್ಷ ವಯಸ್ಸಿನವರಾಗುತ್ತಿದ್ದಂತೆ ಅವರಿಗೆ ನೆರವು ಭತ್ಯೆ ನೀಡಲಾಗುವುದು. ಅವರು 23 ವರ್ಷಕ್ಕೆ ಕಾಲಿಡುವ ವರೆಗೆ ಈ ಭತ್ಯೆ ಸಿಗಲಿದೆ. ಅವರು 23 ವರ್ಷ ತುಂಬಿದ ಬಳಿಕ ಒಟ್ಟಿಗೇ ₹10 ಲಕ್ಷ ಪಡೆಯುತ್ತಾರೆ. ಇದರ ಜೊತೆಗೆ ಶಿಕ್ಷಣ ಮತ್ತು ಆರೋಗ್ಯ ವಿಮೆಗಳೂ ಅವರಿಗೆ ದೊರಕುತ್ತವೆ.

ಯೋಜನೆಯ ಮಾರ್ಗಸೂಚಿಗಳು ಹೀಗಿವೆ

l 2020ರ ಮಾ.11ರಿಂದ ಈ ವರ್ಷ ಡಿಸೆಂಬರ್‌ 31ರ ವರೆಗೆ ತಮ್ಮ ಇಬ್ಬರೂ ಹೆತ್ತವರು ಕಾನೂನುಬದ್ಧವಾಗಿ ದತ್ತು ಪಡೆದಿದ್ದ ಪೋಷಕರು, ಕಾನೂನುಬದ್ಧವಾಗಿ ದತ್ತು ಪಡೆದಿದ್ದ ಒಬ್ಬಂಟಿ ಪೋಷಕರನ್ನು ಕಳೆದುಕೊಂಡ ಮಕ್ಕಳು ಈ ಯೋಜನೆಯ ಫಲಾನುಭವಿಗಳು ಆಗಲಿದ್ದಾರೆ

l ಫಲಾನುಭವಿಗಳ ಅಂಚೆ ಕಚೇರಿ ಖಾತೆಗಳಿಗೆ ನಿಗದಿತ ಮೊತ್ತದ ಹಣ ನೇರವಾಗಿ ವರ್ಗಾವಣೆ ಆಗುತ್ತದೆ. ಫಲಾನುಭವಿಗೆ 18 ವರ್ಷ ಆದಾಗ ಅವರ ಖಾತೆಯಲ್ಲಿ ಒಟ್ಟು ₹10 ಲಕ್ಷ ಹಣ ಸಂಗ್ರಹವಾಗಲು (ಬಡ್ಡಿ ಸೇರಿ) ಎಷ್ಟು ಮೊತ್ತ ಬೇಕೋ ಅಷ್ಟು ಮೊತ್ತವನ್ನು ಅಂಚೆ ಕಚೇರಿ ಖಾತೆಯಲ್ಲಿ ಇರಿಸಲಾಗುತ್ತದೆ. 18 ವರ್ಷಕ್ಕೆ ಕಾಲಿಡುತ್ತಿದ್ದಂತೆ ಅವರಿಗೆ ಪ್ರತಿ ತಿಂಗಳು ಭತ್ಯೆ ದೊರಕಲಿದೆ. 23 ವರ್ಷ ತುಂಬುವವರೆಗೂ ಅವರಿಗೆ ಭತ್ಯೆ ದೊರಕಲಿದೆ

l ಎಲ್ಲಾ ಫಲಾನುಭವಿಗಳನ್ನೂ ಆಯುಷ್ಮಾನ್‌ ಭಾರತ ಯೋಜನೆ ಅಡಿ ಸೇರಿಸಲಾಗುವುದು. ಅದರ ಅಡಿ ಅವರಿಗೆ ಐದು ಲಕ್ಷ ರೂಪಾಯಿ ಆರೋಗ್ಯ ವಿಮೆ ನೀಡಲಾಗುವುದು

l ಈ ಯೋಜನೆಯ ಫಲಾನುಭವಿಗಳಿಗೆ ಪೂರ್ವ ಪ್ರಾಥಮಿಕದಿಂದ ಉನ್ನತ ಶಿಕ್ಷಣದ ವರೆಗೂ ನೆರವು ನೀಡಲಾಗುವುದು. ಆರು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪೋಷಕಾಂಶ ಒದಗಿಸುವ ಮತ್ತು ಇತರ ಸಹಾಯಗಳನ್ನು ಅಂಗನವಾಡಿ ಕಾರ್ಯಕರ್ತರು ಮಾಡುತ್ತಾರೆ

l ಮಕ್ಕಳನ್ನು ಅವರು ವಾಸವಾಗಿರುವ ಸ್ಥಳಕ್ಕೆ ಹತ್ತಿರದಲ್ಲಿರುವ ಕೇಂದ್ರೀಯ ವಿದ್ಯಾಲಯ ಮತ್ತು ಇತರ ಖಾಸಗಿ ಶಾಲೆಗಳಿಗೆ ಸೇರಿಸಲಾಗುವುದು. ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ
ಮಕ್ಕಳಿಗೆ ಶಿಕ್ಷಣದ ಹಕ್ಕಿನ ಅಡಿ ಭೋದನಾ ಶುಲ್ಕ ತೆಗೆದು
ಕೊಳ್ಳುವಂತಿಲ್ಲ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ 10 ವರ್ಷ ವಯಸ್ಸಿಗಿಂತ ಚಿಕ್ಕ ಮಕ್ಕಳಿಗೆ ಸಮಗ್ರ ಶಿಕ್ಷಣ ಅಭಿಯಾನದ ಅಡಿ ಎರಡು ಜೊತೆ ಸಮವಸ್ತ್ರಗಳು ಮತ್ತು ಉಚಿತ ಪಠ್ಯ ಪುಸ್ತಕಗಳನ್ನು ನೀಡಲಾಗುವುದು

l ಸಂಬಂಧಿಗಳ ಜೊತೆ ವಾಸಿಸುತ್ತಿರುವ 11ರಿಂದ 18ರ ಒಳಗಿನ ಮಕ್ಕಳನ್ನು ಸರ್ಕಾರಿ, ಸರ್ಕಾರಿ ಅನುದಾನಿತ, ಕೇಂದ್ರೀಯ ವಿದ್ಯಾಲಯ ಅಥವಾ ಖಾಸಗಿ ಶಾಲೆಗಳಿಗೆ ಸೇರಿಸಲಾಗಿದೆ ಎಂಬುದನ್ನು ಜಿಲ್ಲಾಡಳಿತದಿಂದ ದೃಢೀಕರಿಸಬೇಕು

l ಫಲಾನುಭವಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಶಿಕ್ಷಣ ಸಾಲ ನೀಡಲಾಗುತ್ತದೆ. ಒಂದು ವೇಳೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಯೋಜನೆಗಳ ಅಡಿ ಅವರಿಗೆ ಬಡ್ಡಿ ವಿನಾಯಿತಿ ಸಿಗದಿದ್ದರೆ, ಆ ಬಡ್ಡಿಯನ್ನು ಪಿಎಂ ಕೇರ್ಸ್‌ನ ಮಕ್ಕಳ ಯೋಜನೆ ಅಡಿ ತುಂಬಲಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT