ಜನರನ್ನು ವಿಭಜಿಸುವ ಯತ್ನ: ಮೋದಿ ಎಚ್ಚರಿಕೆ

ನವದೆಹಲಿ: ‘ದೇಶದ ಜನರಲ್ಲಿ ಭಿನ್ನಾಭಿಪ್ರಾಯದ ಬೀಜ ಬಿತ್ತುವ, ಆ ಮೂಲಕ ಜನರನ್ನು ವಿಭಜಿಸುವ ಯತ್ನಗಳ ಬಗ್ಗೆ ಎಚ್ಚರದಿಂದಿರಬೇಕು’ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಇಂಥ ಪ್ರಯತ್ನಗಳು ಫಲ ನೀಡವು ಎಂದು ಪ್ರತಿಪಾದಿಸಿದರು.
ಇಲ್ಲಿನ ಕಂಟೋನ್ಮೆಂಟ್‌ನಲ್ಲಿರುವ ಕಾರಿಯಪ್ಪ ಮೈದಾನದಲ್ಲಿ ನಡೆದ ಎನ್‌ಸಿಸಿ ರ‍್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಭಾರತದ ಭವಿಷ್ಯ ಉಜ್ವಲವಾಗಲು, ಅಭಿವೃದ್ಧಿ ಸಾಧಿಸಲು ಏಕತೆ ಎಂಬ ಮಂತ್ರವೊಂದರಿಂದ ಸಾಧ್ಯ’ ಎಂದು ಮೋದಿ ಹೇಳಿದರು.
ಗುಜರಾತ್ ಗಲಭೆ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರವು ದೇಶದಲ್ಲಿ ವಿವಾದ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಈ ಹೇಳಿಕೆಗೆ ಮಹತ್ವ ಬಂದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
‘ದೇಶದಲ್ಲಿ ಯುವಕರ ಸಂಖ್ಯೆ ಅಧಿಕ. ಇದೇ ದೇಶದ ಶಕ್ತಿ. ಯುವ ಜನತೆಯ ಅಭ್ಯುದಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಡಿಜಿಟಲ್, ಸ್ಟಾರ್ಟ್ ಅಪ್ ಹಾಗೂ ನವೀನ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ಸರ್ಕಾರ ಕ್ರಾಂತಿಯನ್ನೇ ಮಾಡಿದೆ. ಈ ಕಾರಣಕ್ಕಾಗಿಯೇ ವಿಶ್ವವು ಇಂದು ಭಾರತದತ್ತ ಮುಖಮಾಡಿದೆ’ ಎಂದರು.
‘ದೇಶವನ್ನು ಒಡೆಯುವ ಸಲುವಾಗಿ ಹಲವಾರು ನೆಪಗಳನ್ನು ಹುಡುಕಲಾಗುತ್ತದೆ. ತಾಯಿ ಭಾರತಿಯ ಮಕ್ಕಳ ನಡುವೆ ಕಂದಕ ಸೃಷ್ಟಿಸಲು ನೂರಾರು ವಿಷಯಗಳನ್ನು ಮುನ್ನೆಲೆಗೆ ತರಲಾಗುತ್ತದೆ. ಈ ಬಗ್ಗೆ ಎಲ್ಲರೂ ಎಚ್ಚರದಿಂದಿರಬೇಕು’ ಎಂದು ಮೋದಿ ಹೇಳಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.