ಭಾನುವಾರ, ಮೇ 29, 2022
22 °C

ಭಾರತದ ನೆಲ ಚೀನಾಗೆ ಬಿಟ್ಟುಕೊಟ್ಟ ಮೋದಿ: ರಾಹುಲ್ ಗಾಂಧಿ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಎದುರು ತಲೆಬಾಗಿದ್ದಾರೆ. ಭಾರತದ ನೆಲವನ್ನು ಚೀನಾಗೆ ಬಿಟ್ಟುಕೊಟ್ಟಿದ್ದಾರೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆರೋಪಿಸಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಈ ಆರೋಪ ಮಾಡಿದ್ದಾರೆ. ಲಡಾಖ್‌ನ ಪ್ಯಾಂಗಾಂಗ್ ಸರೋವರದ ಗಡಿ ಸಂಘರ್ಷದ ಸ್ಥಳದಿಂದ ಭಾರತ-ಚೀನಾ ಸೇನೆಗಳು ತಮ್ಮ ಸೈನಿಕರನ್ನು ವಾಪಸ್‌ ಕರೆಸಿಕೊಳ್ಳಲು ಸಮ್ಮತಿ ಸೂಚಿಸಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂಸತ್ತಿನಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ರಾಹುಲ್ ಅವರು ಈ ಆರೋಪ ಮಾಡಿದ್ದಾರೆ. 

‘ಪ್ಯಾಂಗಾಂಗ್ ಸರೋವರದ ಉತ್ತರದ ದಂಡೆಯ ಫಿಂಗರ್ 4ರವರೆಗೆ ಭಾರತೀಯ ಸೈನಿಕರು ಗಸ್ತು ನಡೆಸುತ್ತಿದ್ದರು. 2020ರ ಏಪ್ರಿಲ್‌ 28ಕ್ಕೆ ಮುನ್ನ ಇದ್ದ ಸ್ಥಿತಿ ಇದು. ಆದರೆ ಯಥಾಸ್ಥಿತಿಯನ್ನು ಕಾಯ್ದಕೊಳ್ಳಲಾಗಿದೆ, ಭಾರತೀಯ ಸೈನಿಕರು ಫಿಂಗರ್ 3ರವರೆಗೆ ಗಸ್ತು ತಿರುಗಲಿದ್ದಾರೆ ಎಂದು ರಕ್ಷಣಾ ಸಚಿವರು ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ಫಿಂಗರ್ 4ರಿಂದ ಫಿಂಗರ್ 3ರವರೆಗಿನ ಪ್ರದೇಶವನ್ನು ಚೀನಾಗೆ ಬಿಟ್ಟುಕೊಟ್ಟಿರುವುದು ಸ್ಪಷ್ಟವಾಗಿದೆ. ಹೇಡಿಗಳು ಭಾರತ ಮಾತೆಯನ್ನು ಹರಿದು, ಒಂದು ತುಂಡನ್ನು ಚೀನಾಗೆ ನೀಡಿದ್ದಾರೆ’ ಎಂದು ರಾಹುಲ್ ಆರೋಪಿಸಿದ್ದಾರೆ.

‘ಇದೇ ಅವಧಿಯಲ್ಲಿ ಚೀನಾ ಸೈನಿಕರು ಗೋಗ್ರಾ, ಹಾಟ್‌ ಸ್ಪ್ರಿಂಗ್ ಮತ್ತು ದೆಪ್ಸಾಂಗ್‌ ಪ್ರದೇಶವನ್ನು ಅತಿಕ್ರಮಿಸಿದ್ದರು. ಈ ಪ್ರದೇಶಗಳಿಂದ ಚೀನಾ ಸೈನಿಕರನ್ನು ವಾಪಸ್ ಕರೆಸಿಕೊಳ್ಳುತ್ತದೆಯೇ ಎಂಬುದರ ಬಗ್ಗೆ ರಕ್ಷಣಾ ಸಚಿವರ ಭಾಷಣದಲ್ಲಿ ಒಂದು ಉಲ್ಲೇಖವೂ ಇರಲಿಲ್ಲ. ಈ ಪ್ರದೇಶಗಳಿಂದ ಚೀನಾ ಸೈನಿಕರು ವಾಪಸ್ ಏಕೆ ಹೋಗುತ್ತಿಲ್ಲ? ಇದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಬೇಕು’ ಎಂದು ರಾಹುಲ್ ಗಾಂಧಿ ಅವರು ಆಗ್ರಹಿಸಿದ್ದಾರೆ.

‘ಭಾರತೀಯ ಸೈನಿಕರು ಕೈಲಾಸ ಪರ್ವತ ಸಾಲನ್ನು ವಶಕ್ಕೆ ಪಡೆದಿದ್ದರು. ಅದನ್ನು ಚೀನಾಗೆ ಬಿಟ್ಟುಕೊಟ್ಟು, ಸೈನಿಕರನ್ನು ವಾಪಸ್ ಕರೆಸಿಕೊಂಡಿದ್ದು ಏಕೆ? ಇದರಿಂದ ಭಾರತಕ್ಕೆ ಸಿಕ್ಕ ಲಾಭವೇನು’ ಎಂದು ರಾಹುಲ್ ಪ್ರಶ್ನಿಸಿದ್ದಾರೆ. ‘ಇದು ಕೇವಲ ಕೊಡುವ ಒಪ್ಪಂದ. ಪಡೆದುಕೊಳ್ಳುವುದು ಏನೂ ಇಲ್ಲ’ ಎಂದು ರಾಹುಲ್ ಟೀಕಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ಹೇಡಿತನದಿಂದಲೇ ಹೀಗಾಗಿದೆ. ನಮ್ಮ ಸೈನಿಕರು ಚೀನಾವನ್ನು ಎದುರಿಸಿ ನಿಂತಿದ್ದಾರೆ. ಆದರೆ, ಪ್ರಧಾನಿ ಅವರಿಗೆ ಚೀನಾದ ಎದುರು ನಿಲ್ಲುವ ಧೈರ್ಯ ಇಲ್ಲ. ಹೀಗಾಗಿ ಹಿಂದೂಸ್ಥಾನದ ನೆಲವನ್ನು ಚೀನಾಗೆ ಬಿಟ್ಟುಕೊಟ್ಟಿದ್ದಾರೆ. ಇದು ಶೇ 100ರಷ್ಟು ಹೇಡಿತನ’ ಎಂದು ರಾಹುಲ್ ಟೀಕಿಸಿದ್ದಾರೆ.

‘ರಾಹುಲ್‌ಗೆ ಚಿಕಿತ್ಸೆ ಇಲ್ಲ’

ರಾಹುಲ್ ಗಾಂಧಿ ಅವರ ಆರೋಪಗಳಲ್ಲಿ ಹುರುಳಿಲ್ಲ. ದೇಶದ ಹೆಸರಿಗೆ ಮಸಿಬಳಿಯುವ, ಕಳಂಕ ತರುವ ಮತ್ತು ಭದ್ರತಾ ಪಡೆಗಳ ನೈತಿಕತೆಯನ್ನು ಕುಗ್ಗಿಸುವ ರಾಹುಲ್ ಅವರ ಈ ಯತ್ನಗಳಿಗೆ ಯಾವುದೇ ಚಿಕಿತ್ಸೆ ಇಲ್ಲ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರು ಲೇವಡಿ ಮಾಡಿದ್ದಾರೆ.

‘ಚೀನಾಗೆ ಭಾರತದ ನೆಲವನ್ನು ಬೊಟ್ಟುಕೊಟ್ಟವರು ಯಾರು ಎಂಬುದನ್ನು ರಾಹುಲ್ ಅವರು ತಮ್ಮ ಅಜ್ಜನನ್ನು (ಜವಾಹರ ಲಾಲ್ ನೆಹರೂ) ಕೇಳಬೇಕು. ಆಗ ಅವರಿಗೆ ಉತ್ತರ ದೊರೆಯುತ್ತದೆ. ಯಾರು ದೇಶಪ್ರೇಮಿ, ಯಾರು ದೇಶಪ್ರೇಮಿ ಅಲ್ಲ ಎಂಬುದು ದೇಶದ ಜನರಿಗೆ ಗೊತ್ತಿದೆ’ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಲೇವಡಿ ಮಾಡಿದ್ದಾರೆ.

‘ಚೀನಾಗೆ ಭೂಪ್ರದೇಶ ಕೊಟ್ಟಿಲ್ಲ’

ನವದೆಹಲಿ (ಪಿಟಿಐ): ‘ಪ್ಯಾಂಗಾಂಗ್ ಸರೋವರ ಪ್ರದೇಶದಿಂದ ಉಭಯ ರಾಷ್ಟ್ರಗಳ ಸೇನೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಮಾಡಿಕೊಂಡ ಒಪ್ಪಂದಕ್ಕೆ ಪ್ರತಿಯಾಗಿ ಚೀನಾಗೆ ಯಾವುದೇ ಭೂಪ್ರದೇಶವನ್ನು ಬಿಟ್ಟುಕೊಟ್ಟಿಲ್ಲ’ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಸೇನಾ ಹಿಂತೆಗೆತಕ್ಕೆ ಸಂಬಂಧಿಸಿದಂತೆ ಭಾರತ–ಚೀನಾ ನಡುವಿನ ಒಪ್ಪಂದದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು, ‘ಒಪ್ಪಂದಕ್ಕೆ ಪ್ರತಿಯಾಗಿ ಭಾರತವು ಚೀನಾಗೆ ತನ್ನ ಭೂಪ್ರದೇಶವನ್ನು ಬಿಟ್ಟುಕೊಟ್ಟಿದೆ’ ಎಂದು ಆರೋಪಿಸಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ ರಕ್ಷಣಾ ಸಚಿವಾಲಯವು ಈ ಸ್ಪಷ್ಟನೆ ನೀಡಿದೆ.

ರಾಹುಲ್‌ ಅವರ ಹೇಳಿಕೆಗೆ ಕಠಿಣ ಪದಗಳ ಪ್ರತಿಕ್ರಿಯೆ ನೀಡಿರುವ ಸಚಿವಾಲಯವು, ‘ಭಾರತವು ವಾಸ್ತವ ಗಡಿಯನ್ನು ಗೌರವಿಸುವಂತೆ ಮಾಡಿದ್ದಲ್ಲದೆ, ಯಥಾಸ್ಥಿತಿಯಲ್ಲಿ ಏಕಪಕ್ಷೀಯವಾಗಿ ಯಾವುದೇ ಬದಲಾವಣೆಗಳನ್ನು ಮಾಡುವುದನ್ನು ತಡೆದಿದೆ. ಸರ್ಕಾರವು ಸಶಸ್ತ್ರಪಡೆಗಳ ಮೇಲೆ ಸಂಪೂರ್ಣ ವಿಶ್ವಾಸವನ್ನು ಇಟ್ಟಿರುವ ಕಾರಣದಿಂದ, ಲಡಾಖ್‌ ಪ್ರದೇಶದಲ್ಲಿ ರಾಷ್ಟ್ರೀಯ ಹಿತಾಸಕ್ತಿ ಹಾಗೂ ಭೂಪ್ರದೇಶವನ್ನು ಪರಿಣಾಮಕಾರಿಯಾಗಿ ರಕ್ಷಿಸುವ ಕೆಲಸವನ್ನು ಮಾಡಲಾಗಿದೆ. ಯೋಧರು ತಮ್ಮ ಬಲಿದಾನದಿಂದ ಮಾಡಿರುವ ಸಾಧನೆ ಬಗ್ಗೆ ಸಂದೇಹ ವ್ಯಕ್ತಪಡಿಸುವವರು ವಾಸ್ತವದಲ್ಲಿ ನಮ್ಮ ಯೋಧರನ್ನು ಅಪಮಾನಿಸುತ್ತಿದ್ದಾರೆ’ ಎಂದಿದೆ.

ಪ್ರಕಟಣೆಯ ಮೂಲಕ ಕೆಲವು ಸ್ಪಷ್ಟನೆಗಳನ್ನು ಸಹ ನೀಡಿರುವ ಸಚಿವಾಲಯವು, ‘ಭಾರತೀಯ ಭೂಪ್ರದೇಶವು ಫಿಂಗರ್‌ 4 ವರೆಗೂ ಇದೆ ಎಂಬ ಪ್ರತಿಪಾದನೆ ಸುಳ್ಳು. ಭಾರತದ ಭೂಪ್ರದೇಶ ಎಂದು ನಮ್ಮ ಭೂಪಟದಲ್ಲಿ ಗುರುತಿಸಲಾದ ಪ್ರದೇಶದಲ್ಲಿ 1962ರಿಂದ ಚೀನಾ ಅತಿಕ್ರಮಣ ಮಾಡಿಕೊಂಡಿರುವ 43,000 ಚದರ ಕಿ.ಮೀ ಪ್ರದೇಶವೂ ಸೇರಿದೆ.

‘ಭಾರತೀಯ ಗ್ರಹಿಕೆಯಂತೆ ವಾಸ್ತವ ಗಡಿ ನಿಯಂತ್ರಣ ರೇಖೆಯು ಫಿಂಗರ್‌ 8 ಆಗಿದೆಯೇ ವಿನಾ ಫಿಂಗರ್‌ 4 ಅಲ್ಲ. ಆದ್ದರಿಂದ ಫಿಂಗರ್‌ 8ರವರೆಗೂ ಗಸ್ತು ನಡೆಸುವ ಅಧಿಕಾರವನ್ನು ಭಾರತವು ಉಳಿಸಿಕೊಂಡಿದೆ. ಈಗಿನ ಒಪ್ಪಂದದಲ್ಲೂ ಅದನ್ನು ಉಳಿಸಿಕೊಳ್ಳಲಾಗಿದೆ’ ಎಂದಿದೆ.

‘ಪ್ಯಾಂಗಾಂಗ್‌ನಲ್ಲಿ ಸೇನೆಯ ಹಿಂತೆಗೆತಕ್ಕೆ ಸಂಬಂಧಿಸಿದಂತೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹಾಗೂ ದಾರಿತಪ್ಪಿಸುವ ಹೇಳಿಕೆಗಳನ್ನು ಕೆಲವರು ಕೊಡುತ್ತಿರುವುದನ್ನು ಸಚಿವಾಲಯವು ಗಮನಿಸಿದೆ. ಆ ಕುರಿತ ಗೊಂದಲವನ್ನು ದೂರಮಾಡುವ ಉದ್ದೇಶದಿಂದ ಈ ಹೇಳಿಕೆಯನ್ನು ನೀಡಲಾಗುತ್ತಿದೆ’ ಎಂದು ಸಚಿವಾಲಯ ಹೇಳಿದೆ.

‘ಹೊಸ ಒಪ್ಪಂದದಲ್ಲಿ ಉಲ್ಲೇಖಿಸಿರುವಂತೆ ಚೀನಾವು ಪ್ಯಾಂಗಾಂಗ್‌ ಸರೋವರದ ಉತ್ತರ ದಂಡೆಯಲ್ಲಿರುವ ಫಿಂಗರ್ 8 ಪ್ರದೇಶದಿಂದ ತನ್ನ ಸೈನ್ಯವನ್ನು ಪೂರ್ವ ಭಾಗಕ್ಕೆ ಕರೆಯಿಸಿಕೊಳ್ಳಲಿದೆ. ಭಾರತೀಯ ಯೋಧರು ಫಿಂಗರ್‌ 3ರ ಸಮೀಪದಲ್ಲಿರುವ ತಮ್ಮ ಶಾಶ್ವತ ನೆಲೆಯಾಗಿರುವ ಧನ್‌ಸಿಂಗ್‌ ಥಾಪಾ ಪೋಸ್ಟ್‌ನಲ್ಲಿ ನೆಲೆಸುವರು’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಗುರುವಾರ ಲೋಕಸಭೆಗೆ ಮಾಹಿತಿ ನೀಡಿದ್ದರು.

***

ನಮ್ಮ ನೆಲವನ್ನು ಚೀನಾಗೆ ಬಿಟ್ಟುಕೊಡುವ ಮೂಲಕ ಭಾರತ ಸರ್ಕಾರವು ದೇಶದ ಸೈನಿಕರ ಶ್ರಮ ಮತ್ತು ಬಲಿದಾನಕ್ಕೆ ಅವಮಾನ ಮಾಡಿದೆ
-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು