ಬುಧವಾರ, ಸೆಪ್ಟೆಂಬರ್ 28, 2022
26 °C

ನಿನ್ನೆ ನೆಹರೂ ಅವರ ದೂಷಣೆ, ಇಂದು ಪ್ರಧಾನಿಯಿಂದಲೇ ಸ್ಮರಣೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರದ ವಿಭಜನೆಗಾಗಿ ಬಿಜೆಪಿ ನಾಯಕರಿಂದ ದೂಷಣೆಗೆ ಗುರಿಯಾಗಿದ್ದ, ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುರಿತ ಪತ್ರಿಕಾ ಜಾಹೀರಾತುಗಳಲ್ಲಿ ಕಣ್ಮರೆಯಾಗಿದ್ದ ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ಅವರನ್ನು ನರೇಂದ್ರ ಮೋದಿ ಅವರು ಇಂದು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಸ್ಮರಿಸಿದರು. 

ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಭಾರತದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದರು. 

‘ಸ್ವಾತಂತ್ರ್ಯಕ್ಕಾಗಿ ಹೋರಾಡಿ, ದೇಶ ಕಟ್ಟಿದ ಡಾ.ರಾಜೇಂದ್ರ ಪ್ರಸಾದ್, ನೆಹರೂ, ಸರ್ದಾರ್ ಪಟೇಲ್, ಶ್ಯಾಮ ಪ್ರಸಾದ್ ಮುಖರ್ಜಿ, ಲಾಲ್ ಬಹದ್ದೂರ್ ಶಾಸ್ತ್ರಿ, ದೀನದಯಾಳ್ ಉಪಾಧ್ಯಾಯ, ಜೈ ಪ್ರಕಾಶ್ ನಾರಾಯಣ್, ರಾಮ್ ಮನೋಹರ ಲೋಹಿಯಾ, ವಿನೋಬಾ ಭಾವೆ, ನಾನಾಜಿ ದೇಶಮುಖ್, ಸುಬ್ರಮಣ್ಯಂ ಭಾರತಿ ಅವರನ್ನು ಸ್ಮರಿಸಬೇಕು. ಇಂತಹ ಮಹಾನ್ ವ್ಯಕ್ತಿಗಳ ಮುಂದೆ ತಲೆಬಾಗುವ ದಿನವಿದು’ ಎಂದು ಮೋದಿ ಹೇಳಿದರು. 

ಆದರೆ, ನೆಹರೂ ಅವರನ್ನು ಉಲ್ಲೇಖಿಸುವುದಕ್ಕೂ ಮೊದಲು ಮೋದಿ ಅವರು ಸಾವರ್ಕರ್‌ಗೆ ನಮನ ಸಲ್ಲಿಸಿದರು. 'ಕರ್ತವ್ಯದ ಹಾದಿಯಲ್ಲಿ ತಮ್ಮ ಪ್ರಾಣಾರ್ಪಣೆ ಮಾಡಿದ ಬಾಪು, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ವೀರ್ ಸಾವರ್ಕರ್ ಅವರಿಗೆ ದೇಶದ ಜನರು ಕೃತಜ್ಞರಾಗಿದ್ದಾರೆ’ ಎಂದು ಅವರು ಹೇಳಿದರು. 

ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ರಾಜ್ಯ ಸರ್ಕಾರ ಅ.14 ರಂದು ಪ್ರಕಟಿಸಿದ ಜಾಹೀರಾತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಪಂಡಿತ್ ಜವಾಹರಲಾಲ್ ನೆಹರೂರವರ ಭಾವಚಿತ್ರವನ್ನು ಕೈಬಿಟ್ಟಿರುವುದಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಪ್ರಮಾದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದರು. 

‘ನೆಹರೂ ಅವರು ಗಾಂಧೀಜಿಯವರ ಮಾತು ಕೇಳದೇ ದೇಶ ವಿಭಜನೆಗೆ ಕಾರಣರಾದವರು. ಆದ್ದರಿಂದ ಉದ್ದೇಶಪೂರ್ವಕವಾಗಿ ಅವರ ಭಾವಚಿತ್ರವನ್ನು ಸರ್ಕಾರಿ ಜಾಹೀ‌ರಾತಿನಲ್ಲಿ ಕೈಬಿಡಲಾಗಿದೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌  ಭಾನುವಾರ ಹೇಳಿದರು.

‘ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅನಾಮಧೇಯರಾಗಿ ಹೋರಾಟ ನಡೆಸಿದವರಿಗೆ ನಮನ ಸಲ್ಲಿಸಿದ್ದೇವೆ. ಜಾಹೀರಾತಿನಲ್ಲಿ ನೆಹರೂ ಅವರ ಚಿತ್ರವೂ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

‘ಭಗವಾನ್ ಬಿರ್ಸಾ ಮುಂಡಾ, ಸಿಧು ಕನ್ಹು, ಅಲ್ಲೂರಿ ಸೀತಾರಾಮರಾಜು, ಗೋವಿಂದ್ ಗುರು  ಅವರಂಥ ಬುಡಕಟ್ಟು ನಾಯಕರು ಸ್ವಾತಂತ್ರ್ಯ ಹೋರಾಟದ ಧ್ವನಿಯಾಗಿದ್ದರು. ಮಾತೃಭೂಮಿಗಾಗಿ ಹೋರಾಡಲು ಬುಡಕಟ್ಟು ಸಮುದಾಯವನ್ನು ಪ್ರೇರೇಪಿಸಿದ್ದರು’ ಎಂದು ಪ್ರಧಾನಿ ಭಾಷಣದಲ್ಲಿ ಹೇಳಿದರು. 

‘ರಾಣಿ ಲಕ್ಷ್ಮೀಬಾಯಿ, ಜಲ್ಕರಿ ಬಾಯಿ, ಚೆನ್ನಮ್ಮ, ಬೇಗಂ ಹಜರತ್ ಮಹಲ್ ಅವರ ಶಕ್ತಿಯನ್ನು ಸ್ಮರಿಸಿದಾಗ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯಾಗುತ್ತದೆ’ ಎಂದು ಮೋದಿ ಅವರು ಮಹಿಳಾ ಹೋರಾಟಗಾರರನ್ನು ಕೊಂಡಾಡಿದರು. 

ಬ್ರಿಟಿಷರ ಆಳ್ವಿಕೆಯನ್ನು ನಡುಗಿಸಿದ್ದ ಕ್ರಾಂತಿಕಾರಿಗಳಾದ ಮಂಗಲ್ ಪಾಂಡೆ, ತಾತ್ಯಾ ಟೋಪೆ, ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ್ ಆಜಾದ್, ಅಶ್ಫಾಕುಲ್ಲಾ ಖಾನ್, ರಾಮ್ ಪ್ರಸಾದ್ ಬಿಸ್ಮಿಲ್ ಅವರಿಗೆ ದೇಶ ಕೃತಜ್ಞತೆ ಸಲ್ಲಿಸುತ್ತದೆ ಎಂದರು.

ಇವುಗಳನ್ನೂ ಓದಿ

ಜಾಹೀರಾತಿನಲ್ಲಿ ನೆಹರೂ ಚಿತ್ರಕ್ಕೆ ಕೋಕ್: ಸರ್ಕಾರದ ನಡೆಗೆ ಲೇಖಕರ ಖಂಡನೆ

ಜಾಹೀರಾತಿನಲ್ಲಿ ನೆಹರು ಕಡೆಗಣನೆ: ಕ್ಷಮೆ ಕೇಳುವಂತೆ ಸಿಎಂಗೆ ಡಿಕೆಶಿ ಒತ್ತಾಯ

ಜಾಹೀರಾತಿನಲ್ಲಿ ನೆಹರೂ ಚಿತ್ರ ಕೈಬಿಟ್ಟಿದ್ದು ಉದ್ದೇಶ ಪೂರ್ವಕ: ರವಿಕುಮಾರ್‌

ವಿಶ್ಲೇಷಣೆ: ನೆಹರೂ ವ್ಯಕ್ತಿತ್ವ, ವೈಚಾರಿಕತೆ ಮುಕ್ತ ಮನಸ್ಸಿನಿಂದ ಅರಿಯಬೇಕಾದ ಕಾಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು