ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಹಂತದ ಲಸಿಕೆಗೆ ಚಾಲನೆ: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರಿಗೆ ಲಸಿಕೆ

Last Updated 2 ಮಾರ್ಚ್ 2021, 3:58 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ತಡೆಯ ಜಗತ್ತಿನ ಅತಿ ದೊಡ್ಡ ಲಸಿಕಾ ಕಾರ್ಯಕ್ರಮಕ್ಕೆ ಸೋಮವಾರ ದೇಶದಾದ್ಯಂತ ಚಾಲನೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌, ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಮುಂತಾದ ಅನೇಕ ಗಣ್ಯರು ಕೋವಿಡ್‌–19 ಲಸಿಕೆಯ ಮೊದಲ ಡೋಸ್‌ ಹಾಕಿಸಿಕೊಂಡಿದ್ದಾರೆ.

60 ವರ್ಷ ವಯಸ್ಸಿಗೂ ಮೇಲ್ಪಟ್ಟವರು ಹಾಗೂ ಇತರ ಗಂಭೀರ ಕಾಯಿಲೆಗಳಿಂದ ಬಳಲುವ, 45 ವರ್ಷಕ್ಕೂ ಮೇಲ್ಪಟ್ಟವರಿಗೆ ಈ ಹಂತದಲ್ಲಿ ಲಸಿಕೆ ಹಾಕಲಾಗುತ್ತದೆ. ಸುಮಾರು 27 ಕೋಟಿ ಜನರು ಇದರ ಲಾಭ ಪಡೆಯಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಸದ್ಯದಲ್ಲೇ 90ನೇ ವರ್ಷಕ್ಕೆ ಕಾಲಿಡಲಿರುವ ದೆಹಲಿಯ ವೃದ್ಧ ದಂಪತಿ ಹಾಗೂ ಕೋವಿಡ್‌ಗೆ ಒಳಗಾಗಿ ಚೇತರಿಸಿಕೊಂಡಿದ್ದ ನಾಲ್ವರು ಹಿರಿಯ ನಾಗರಿಕರ ಕುಟುಂಬವೊಂದು ಮೊದಲ ದಿನವೇ ಲಸಿಕೆ ಹಾಕಿಸಿಕೊಂಡು ಗಮನಸೆಳೆಯಿತು.

‘ಸೋಮವಾರ ಬೆಳಿಗ್ಗೆ 6.30ರ ಸುಮಾರಿಗೆ ಆಸ್ಪತ್ರೆಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ್‌ ಬಯೊಟೆಕ್‌ ಸಂಸ್ಥೆಯವರು ದೇಶೀಯವಾಗಿ ಅಭಿವೃದ್ಧಿಪಡಿಸಿದ ‘ಕೋವ್ಯಾಕ್ಸಿನ್‌’ ಲಸಿಕೆಯನ್ನು ಪಡೆದರು’ ಎಂದು ಏಮ್ಸ್‌ ಮುಖ್ಯಸ್ಥ ಡಾ. ರಣದೀಪ್‌ ಗುಲೇರಿಯಾ ತಿಳಿಸಿದ್ದಾರೆ.

‘ಮೋದಿ ಅವರು ಲಸಿಕೆ ಪಡೆಯಲು ಬರಲಿದ್ದಾರೆ ಎಂದು ಭಾನುವಾರ ರಾತ್ರಿ ನಮಗೆ ತಿಳಿಸಲಾಗಿತ್ತು. ಅವರಿಗಾಗಿ ವಿಶೇಷ ಸಿದ್ಧತೆಗಳನ್ನೇನೂ ಮಾಡಿಲ್ಲ. ಆಸ್ಪತ್ರೆಗೆ ಬರುವ ಇತರ ರೋಗಿಗಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಅವರು ಬೆಳಿಗ್ಗೆ ಬೇಗನೆ ಬಂದು ಲಸಿಕೆ ಪಡೆದರು. ಪ್ರಧಾನಿಯೇ ಲಸಿಕೆ ಪಡೆದಿರುವುದರಿಂದ ಲಸಿಕೆ ಬಗ್ಗೆ ಜನರಲ್ಲಿ ಇರುವ ಅಂಜಿಕೆ ಕಡಿಮೆಯಾಗುವಂತಾಗಿದೆ. ಜನರು ತಾವಾಗಿಯೇ ಲಸಿಕೆ ಕೇಂದ್ರಗಳಿಗೆ ಬಂದು ದೇಶವನ್ನು ಕೋವಿಡ್‌ ಮುಕ್ತಗೊಳಿಸಲು ಈ ಕ್ರಮವು ನೆರವಾಗಲಿದೆ’ ಎಂದು ಗುಲೇರಿಯಾ ಹೇಳಿದ್ದಾರೆ.

ಲಸಿಕೆ ಪಡೆದ ನಂತರ ಆ ಕುರಿತು ಟ್ವೀಟ್‌ ಮಾಡಿದ ಪ್ರಧಾನಿ, ‘ಏಮ್ಸ್‌ನಲ್ಲಿ ಲಸಿಕೆಯ ಮೊದಲ ಡೋಸ್‌ ಪಡೆದಿದ್ದೇನೆ. ಕೋವಿಡ್‌–19 ವಿರುದ್ಧದ ಜಾಗತಿಕ ಮಟ್ಟದ ಹೋರಾಟಕ್ಕೆ ಶಕ್ತಿ ತುಂಬಲು ನಮ್ಮ ವೈದ್ಯರು ಹಾಗೂ ವಿಜ್ಞಾನಿಗಳು ಹೇಗೆ ಕೆಲಸಮಾಡಿದ್ದಾರೆ ಎಂಬುದು ಗಮನಾರ್ಹವಾದುದು. ಅರ್ಹರೆಲ್ಲರೂ ಬಂದು ಲಸಿಕೆಯನ್ನು ಹಾಕಿಸಿಕೊಂಡು ಭಾರತವನ್ನು ಕೋವಿಡ್‌–19 ಮುಕ್ತಗೊಳಿಸಬೇಕು ಎಂದು ಮನವಿ ಮಾಡುತ್ತೇನೆ’ ಎಂದಿದ್ದಾರೆ.

10 ಲಕ್ಷ ನೋಂದಣಿ: ಸೋಮವಾರ ಮಧ್ಯಾಹ್ನ 1 ಗಂಟೆಯ ವೇಳೆಗಾಗಲೇ 10 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್‌–19 ಲಸಿಕೆಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

***

ಭಾರತದಲ್ಲೇ ತಯಾರಾದ ಲಸಿಕೆ ಹಾಕಿಸುವ ಮೂಲಕ ಲಸಿಕೆ ಬಗ್ಗೆ ಇರುವ ಹಿಂಜರಿಕೆಯನ್ನು ‍ಪ‍್ರಧಾನಿಯವರು ದೂರ ಮಾಡಿದ್ದಾರೆ

-ಭಾರತ್‌ ಬಯೊಟೆಕ್‌ ಸಂಸ್ಥೆ, ಕೋವ್ಯಾಕ್ಸಿನ್‌ ಲಸಿಕೆ ತಯಾರಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT