ಶುಕ್ರವಾರ, ಆಗಸ್ಟ್ 19, 2022
21 °C

Mann Ki Baat: ವರ್ಷದ ಮೊದಲ ಮನದ ಮಾತಿನಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಸ್ವಚ್ಛ ಭಾರತ ಅಭಿಯಾನ’ ಹಾಗೂ ‘ವೋಕಲ್ ಫಾರ್ ಲೋಕಲ್’ ನಮ್ಮ ಜವಾಬ್ದಾರಿ ಎಂಬುದನ್ನು ನಾವು ಎಂದಿಗೂ ಮರೆಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ವರ್ಷದ ಮೊದಲ ‘ಮನ್ ಕೀ ಬಾತ್ (ಮನದ ಮಾತು)’ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇಂದು ಮಹಾತ್ಮ ಗಾಂಧಿ ಪುಣ್ಯ ತಿಥಿ. ದೇಶದ ಸ್ವಾತಂತ್ರ್ಯಕ್ಕೆ ಅವರು ನೀಡಿದ ಕೊಡುಗೆಯನ್ನು ನಾವು ಗೌರವಿಸಬೇಕು. ಸ್ವಚ್ಛ ಭಾರತ ಅಭಿಯಾನವನ್ನು ನಾವು ಮರೆಯಬಾರದು. ಏಕ ಬಳಕೆಯ ಪ್ಲಾಸ್ಟಿಕ್ ವಿರುದ್ಧ ನಾವು ಈ ಅಭಿಯಾನವನ್ನು ಚುರುಕುಗೊಳಿಸಬೇಕಿದೆ. ವೋಕಲ್ ಫಾರ್ ಲೋಕಲ್ ಮಂತ್ರವು ನಮ್ಮ ಜವಾಬ್ದಾರಿಯಾಗಿದೆ. ಆತ್ಮ ನಿರ್ಭರ ಭಾರತ ಅಭಿಯಾನಕ್ಕಾಗಿ ನಾವೆಲ್ಲ ಕೆಲಸ ಮಾಡಬೇಕಿದೆ’ ಎಂದು ಹೇಳಿದ್ದಾರೆ.

ಮೋದಿ ಹೇಳಿದ್ದು....

* ನಮ್ಮ ಹುತಾತ್ಮರು ನಿಜವಾಗಿಯೂ ‘ಅಮರ್ ಜವಾನ್ ಜ್ಯೋತಿ’ಗಳು. ಅವರ ಪ್ರೇರಣೆ ಮತ್ತು ಅವರ ಕೊಡುಗೆಯೂ ಅಮರ. ನಿಮಗೆ ಅವಕಾಶ ಸಿಕ್ಕಾಗಲೆಲ್ಲಾ ಖಂಡಿತವಾಗಿಯೂ ‘ರಾಷ್ಟ್ರೀಯ ಯುದ್ಧ ಸ್ಮಾರಕ’ಕ್ಕೆ ಭೇಟಿ ನೀಡುವಂತೆ ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ.

* ಪ್ರತಿಯೊಬ್ಬರೂ ತಮ್ಮ ಕುಟುಂಬದೊಂದಿಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲು ಪ್ರಯತ್ನಿಸಿ ಎಂದು ನಾನು ಒತ್ತಾಯಿಸುತ್ತೇನೆ. ಅಲ್ಲಿಗೆ ಭೇಟಿ ನೀಡಿದಾಗಲೆಲ್ಲ ನೀವು ವಿಶೇಷ ರೀತಿಯ ಶಕ್ತಿ ಮತ್ತು ಸ್ಫೂರ್ತಿಯನ್ನು ಅನುಭವಿಸುವಿರಿ.

* ಒಂದು ಕೋಟಿಗೂ ಹೆಚ್ಚು ಮಕ್ಕಳು ತಮ್ಮ ಮನದ ಮಾತನ್ನು ಪೋಸ್ಟ್ ಕಾರ್ಡ್ ಮೂಲಕ ನನಗೆ ಕಳುಹಿಸಿದ್ದಾರೆ. ಈ ಪೋಸ್ಟ್‌ ಕಾರ್ಡ್‌ಗಳು ದೇಶದ ಹಲವು ಭಾಗಗಳಿಂದ ಮತ್ತು ವಿದೇಶಗಳಿಂದಲೂ ಬಂದಿವೆ.

* ನಮ್ಮ ಇತಿಹಾಸವನ್ನು ಹಿಂತಿರುಗಿ ನೋಡಿದಾಗ ಶಿಕ್ಷಣದೊಂದಿಗೆ ಬಾಂಧವ್ಯ ಹೊಂದಿದ್ದ ಅನೇಕ ವ್ಯಕ್ತಿಗಳನ್ನು ನಾವು ಕಾಣುತ್ತೇವೆ. ಅವರು ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಜೀವನದ ಎಲ್ಲಾ ಹಂತಗಳಲ್ಲಿರುವ ಭಾರತೀಯರು ಸಂಪನ್ಮೂಲಗಳನ್ನು ಕೊಡುಗೆಯಾಗಿ ನೀಡುವುದನ್ನು ನಾವು ನೋಡುತ್ತಿದ್ದೇವೆ. ಇದರಿಂದಾಗಿ ಇತರರು ಶಿಕ್ಷಣದ ಸಂತೋಷವನ್ನು ಅನುಭವಿಸುವಂತಾಗಿದೆ.‌

* ದೇಶದಲ್ಲಿ ಕೋವಿಡ್–19 ಪ್ರಕರಣಗಳಲ್ಲಿ ಇಳಿಕೆಯಾಗಿರುವುದು ಸಕಾರಾತ್ಮಕ ಬೆಳವಣಿಗೆ. ಭಾರತವು ಕೋವಿಡ್ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತಿದೆ. 4.5 ಕೋಟಿಗೂ ಹೆಚ್ಚು ಮಕ್ಕಳಿಗೆ ಕೋವಿಡ್ ಲಸಿಕೆ ನೀಡಿರುವುದು ನಮಗೆ ಹೆಮ್ಮೆಯ ವಿಷಯ. ಜನರು ಸುರಕ್ಷಿತರಾಗಿರಬೇಕು, ಜತೆಗೇ ಆರ್ಥಿಕ ಚಟುವಟಿಕೆಗಳೂ ಸಾಗಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು