ಭಾನುವಾರ, ಜನವರಿ 24, 2021
27 °C

ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಉಚಿತ: ಪ್ರಧಾನಿ ನರೇಂದ್ರ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ದೇಶದ ಮೂರು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ ನೀಡುವ, ಮೊದಲ ಹಂತದ ಲಸಿಕಾ ಕಾರ್ಯಕ್ರಮದ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಿಳಿಸಿದ್ದಾರೆ.

ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಡೆಸಿದ ಸಂವಾದದ ಸಂದರ್ಭದಲ್ಲಿ ಈ ವಿಚಾರ ತಿಳಿಸಿದ ಅವರು, ‘ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಲಸಿಕೆ ನೀಡಲಾಗುವುದು. ಇದರಲ್ಲಿ ಜನಪ್ರತಿನಿಧಿಗಳು, ರಾಜಕಾರಣಿಗಳು ಪಾಲ್ಗೊಳ್ಳಬಾರದು ಎಂದು ನಾನು ಮನವಿ ಮಾಡುತ್ತೇನೆ. ಇದನ್ನು ಅನ್ಯಥಾ ಭಾವಿಸಬಾರದು’ ಎಂದರು.

‘ಜ.16ರಂದು ದೇಶದಲ್ಲಿ ಲಸಿಕಾ ಅಭಿಯಾನ ಆರಂಭವಾಗಲಿದೆ. ಕಳೆದ ಸುಮಾರು ಒಂದು ತಿಂಗಳಲ್ಲಿ, ವಿವಿಧ ರಾಷ್ಟ್ರಗಳ 2.5 ಕೋಟಿ ಜನರಿಗೆ ಮಾತ್ರ ಲಸಿಕೆ ಲಭ್ಯವಾಗಿದೆ. ಭಾರತದಲ್ಲಿ ಮುಂದಿನ ಕೆಲವು ತಿಂಗಳಲ್ಲಿ 30 ಕೋಟಿ ಜನರಿಗೆ ಲಸಿಕೆ ಹಾಕಲಾಗುವುದು ಎಂದರು.

‘ಕೋವಿಡ್‌ ವಿರುದ್ಧದ ಭಾರತದ ಹೋರಾಟವು ನಿರ್ಣಾಯಕ ಹಂತಕ್ಕೆ ಬರುತ್ತಿದೆ. ದೇಶದಲ್ಲಿ ತಯಾರಾದ ಮತ್ತು ಈಗಾಗಲೇ ಬಳಕೆಗೆ ಅನುಮತಿ ನೀಡಲಾಗಿರುವ ಎರಡು ಲಸಿಕೆಗಳು, ಇತರ ದೇಶಗಳಿಗೆ ಹೋಲಿಸಿದರೆ ಇಲ್ಲಿ ಅತ್ಯಂತ ಅಗ್ಗದ ದರದಲ್ಲಿ ಲಭ್ಯವಾಗಲಿವೆ. ದೇಶದ ಅಗತ್ಯಗಳಿಗೆ ಅನುಗುಣವಾಗಿ ಇವುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಎರಡನೇ ಸುತ್ತಿನ ಅಭಿಯಾನ ಆರಂಭವಾಗುವಾಗ ಹೆಚ್ಚು ಡೋಸ್‌ಗಳು ಲಭ್ಯವಾಗಲಿವೆ’ ಎಂದು ಮೋದಿ ತಿಳಿಸಿದರು.

‘ಎರಡೂ ಲಸಿಕೆಗಳು ಭಾರತದಲ್ಲೇ ತಯಾರಾದವುಗಳು ಎಂಬುದು ಹೆಮ್ಮೆಯ ವಿಚಾರವಾಗಿದೆ. ಲಸಿಕೆಗಾಗಿ ನಾವು ಬೇರೆ ದೇಶವನ್ನು ಅವಲಂಬಿಸಬೇಕಾದ ಸ್ಥಿತಿ ಬಂದಿದ್ದರೆ ಎಷ್ಟೊಂದು ಕಷ್ಟಗಳನ್ನು ಅನುಭವಿಸಬೇಕಾಗುತ್ತಿತ್ತು ಎಂಬುದನ್ನು ಯಾರಾದರೂ ಊಹಿಸಬಹುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು