ಸೋಮವಾರ, ಮಾರ್ಚ್ 27, 2023
31 °C

ಕಾಶಿಯ ಸಂಸ್ಕೃತಿ ಬಿಂಬಿಸುವ ಸಮಾವೇಶ ಕೇಂದ್ರ: ನಾಳೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಉತ್ತರ ಪ್ರದೇಶದ ವಾರಾಣಸಿಯ ಹೊರವಲಯದ ಸಿಗ್ರಾ ಪ್ರದೇಶದಲ್ಲಿ ನಿರ್ಮಿಸಿರುವ ‘ರುದ್ರಾಕ್ಷ’ ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರವನ್ನು (ವಿಸಿಸಿ) ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉದ್ಘಾಟಿಸಲಿದ್ದಾರೆ.

ಜಪಾನ್ ಸರ್ಕಾರದ ಸಹಯೋಗದೊಂದಿಗೆ ನಿರ್ಮಿಸಿರುವ ಈ ಕೇಂದ್ರದಲ್ಲಿ 108 ರುದ್ರಾಕ್ಷಗಳನ್ನು ಸ್ಥಾಪಿಸಲಾಗಿದೆ. ಪುರಾತನ ಕಾಶಿಯ ಶ್ರೀಮಂತ ಸಾಂಸ್ಕೃತಿಕ ದೃಶ್ಯಗಳನ್ನು ಅನಾವರಣಗೊಳಿಸುವ ಈ ಕೇಂದ್ರದ ಕಟ್ಟಡದ ಸೂರು ಶಿವಲಿಂಗದ ಆಕಾರದಲ್ಲಿದೆ. ಇಡೀ ಕಟ್ಟಡ ರಾತ್ರಿ ವೇಳೆ ಎಲ್‌ಇಡಿ ದೀಪಗಳಿಂದ ಜಗಮಗಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಐಷಾರಾಮಿ ಸಮಾವೇಶ ಕೇಂದ್ರ ಎರಡು ಅಂತಸ್ತಿನ ಕಟ್ಟಡವಾಗಿದೆ. 2.87 ಹೆಕ್ಟೇರ್‌ ವಿಸ್ತೀರ್ಣದಲ್ಲಿರುವ ಈ ಕೇಂದ್ರ 1200 ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ‘ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಚಾರಗಳ ಕುರಿತು ಸಂವಾದ ನಡೆಸಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರಾಣಸಿಯ ಕಲೆ, ಸಂಸ್ಕೃತಿ ಮತ್ತು ಸಂಗೀತವನ್ನು ಪ್ರತಿನಿಧಿಸುವ ಮ್ಯೂರಲ್‌ ಚಿತ್ರಗಳನ್ನೊಳಗೊಂಡ ಗ್ಯಾಲರಿ ಇರುವ ಈ ಕೇಂದ್ರ, ಅಂತರರಾಷ್ಟ್ರೀಯ ಸಮ್ಮೇಳನಗಳು, ಪ್ರದರ್ಶನಗಳು ಮತ್ತು ಸಂಗೀತ ಕಛೇರಿಗಳಂತಹ ಕಾರ್ಯಕ್ರಮಗಳನ್ನು ನಡೆಸಲು ಸೂಕ್ತ ಸ್ಥಳವಾಗಿದೆ. ಈ ಕೇಂದ್ರದ ಮುಖ್ಯ ಸಭಾಂಗಣವನ್ನು ಅಗತ್ಯವೆನಿಸಿದಾಗ, ಸಣ್ಣ ಸಣ್ಣ ಸಭಾಂಗಣಗಳಾಗಿ ವಿಭಜಿಸಲು ಸಾಧ್ಯವಿರುವಂತೆ ನಿರ್ಮಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಇದು ಪರಿಸರ ಸ್ನೇಹಿ ಕಟ್ಟಡವಾಗಿದೆ.

ಅಂತರರಾಷ್ಟ್ರೀಯ ಸಮಾವೇಶ ಕೇಂದ್ರವನ್ನು ಉದ್ಘಾಟಿಸಲು ವಾರಾಣಸಿಗೆ ಆಗಮಿಸುವ ಪ್ರಧಾನಿ ಮೋದಿಯವರು ₹1,500 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ... ಕೇಂದ್ರ ಸರ್ಕಾರ ದೇಶವನ್ನು ದುರ್ಬಲಗೊಳಿಸುತ್ತಿದೆ: ರಾಹುಲ್‌ ಗಾಂಧಿ ಆರೋಪ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು