‘ಪಿಎಂ–ಕೇರ್ಸ್’ಗೆ ಪ್ರಧಾನಿ ಮೋದಿ ಕೊಟ್ಟಿದ್ದೆಷ್ಟು? ಪಿಎಂಒ ಬಳಿ ಇಲ್ಲ ದಾಖಲೆ!

ನವದೆಹಲಿ: ಕೋವಿಡ್–19 ಸಮಸ್ಯೆಗಳ ಪರಿಹಾರಕ್ಕೆ ನಿಧಿ ಸಂಗ್ರಹಿಸಲು ಕೇಂದ್ರ ಸರ್ಕಾರ ಸ್ಥಾಪಿಸಿರುವ ‘ಪಿಎಂ–ಕೇರ್ಸ್’ ನಿಧಿಗೆ ದೇಣಿಗೆ ನೀಡಿರುವ ಬಗ್ಗೆ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಕಚೇರಿಗಳು ಮಾಹಿತಿ ಒದಗಿಸಿವೆ. ಆದರೆ, ಪ್ರಧಾನಿಯವರು ನೀಡಿದ ದೇಣಿಗೆ ಬಗ್ಗೆ ಯಾವುದೇ ದಾಖಲೆಗಳು ಇಲ್ಲ ಎಂದು ಪ್ರಧಾನಿ ಕಾರ್ಯಾಲಯ (ಪಿಎಂಒ) ಹೇಳಿದೆ.
‘ಪಿಎಂ–ಕೇರ್ಸ್’ ನಿಧಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಪ್ರಧಾನಿ ನರೇಂದ್ರ ಮೋದಿ ನೀಡಿರುವ ದೇಣಿಗೆಯ ವಿವರ ಕೋರಿ ಕಾನೂನು ವಿದ್ಯಾರ್ಥಿ ಅನಿಕೇತ್ ಗೌರವ್ ಎಂಬುವವರು ಆರ್‌ಟಿಐ (ಮಾಹಿತಿ ಹಕ್ಕು ಕಾಯ್ದೆ) ಅಡಿ ಅರ್ಜಿ ಸಲ್ಲಿಸಿದ್ದರು.
ಓದಿ: Explainer: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚುತ್ತಲೇ ಇರುವುದು ಏಕೆ?
ಅರ್ಜಿಗೆ ಉತ್ತರ ಸಲ್ಲಿಸಿದ್ದ ರಾಷ್ಟ್ರಪತಿ ಭವನವು, ರಾಷ್ಟ್ರಪತಿಗಳು ಒಂದು ತಿಂಗಳ ವೇತನ ₹5 ಲಕ್ಷ ದೇಣಿಗೆ ನೀಡಿದ್ದಾಗಿ ಉತ್ತರಿಸಿತ್ತು.
ವೆಂಕಯ್ಯ ನಾಯ್ಡು ಅವರು ಒಂದು ತಿಂಗಳ ವೇತನ ₹4 ಲಕ್ಷವನ್ನು ‘ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ (ಪಿಎಂಎನ್‌ಆರ್‌ಎಫ್) ದೇಣಿಗೆಯಾಗಿ ನೀಡಿದ್ದಾರೆ ಎಂದು ಕಳೆದ ವರ್ಷ ಜೂನ್ 9ರಂದೇ ಉಪರಾಷ್ಟ್ರಪತಿ ಕಚೇರಿ ತಿಳಿಸಿತ್ತು.
ಇಷ್ಟೇ ಅಲ್ಲದೆ, ದೇಶದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ವೆಂಕಯ್ಯ ನಾಯ್ಡು ಅವರು ಹೆಚ್ಚುವರಿಯಾಗಿ ತಿಂಗಳ ವೇನದಲ್ಲಿ ಶೇ 30ರಷ್ಟನ್ನು ‘ಪಿಎಂ–ಕೇರ್ಸ್’ ನಿಧಿಗೆ ದೇಣಿಗೆ ನೀಡುತ್ತಾ ಬಂದಿದ್ದಾರೆ. 2020ರ ಏಪ್ರಿಲ್‌ನಿಂದ ಈವರೆಗೆ ತಿಂಗಳಿಗೆ ₹1.2 ಲಕ್ಷದಂತೆ ಅವರು ದೇಣಿಗೆ ನೀಡುತ್ತಾ ಬಂದಿದ್ದಾರೆ’ ಎಂದು ಕಚೇರಿ ಉಪರಾಷ್ಟ್ರಪತಿ ಕಚೇರಿ ಮಾಹಿತಿ ನೀಡಿದೆ.
ಓದಿ: ಪಂಜಾಬ್ ಅಕ್ಕಿ ಕ್ಯಾನ್ಸರ್ ಗುಳಿಗೆ ಕೊಟ್ಟಂತೆ: ಉಮೇಶ್ ಕತ್ತಿ
ಇದಾದ ಬಳಿಕ ಗೌರವ್ ಅವರು ಪ್ರಧಾನಿ ಕಾರ್ಯಾಲಯದಿಂದ ಮಾಹಿತಿ ಕೋರಿ ಆಗಸ್ಟ್‌ನಲ್ಲಿ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಬಳಿಕ ಅಕ್ಟೋಬರ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇದಕ್ಕೆ 2021ರ ಜನವರಿ 29ರಂದು ಉತ್ತರ ನೀಡಲಾಗಿದೆ.
‘ಪ್ರಧಾನಿಯವರು ನೀಡಿರುವ ದೇಣಿಗೆ ಅವರ ವೈಯಕ್ತಿಕ ಉಳಿತಾಯಕ್ಕೆ ಸಂಬಂಧಿಸಿದ್ದಾಗಿದ್ದು, ಅದು ಅವರ ವೈಯಕ್ತಿಕ ವಿಷಯವಾಗಿದೆ. ಆ ಕುರಿತ ದಾಖಲೆಗಳು ಕಚೇರಿ ಬಳಿ ಇಲ್ಲ’ ಎಂದು ಉತ್ತರದಲ್ಲಿ ಹೇಳಲಾಗಿದೆ.
‘ಪಿಎಂ–ಕೇರ್ಸ್’ಗೆ ಮೋದಿ ಅವರು ವೈಯಕ್ತಿಕ ನೆಲೆಯಲ್ಲಿ ₹2.25 ಲಕ್ಷ ದೇಣಿಗೆ ನೀಡಿದ್ದರು ಎಂದು ಈ ಹಿಂದೆ ವರದಿಯಾಗಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.