ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು ಪೊಲೀಸರ ಯತ್ನ: ಬಿಜೆಪಿ ಆರೋಪ

Last Updated 4 ಜೂನ್ 2022, 18:52 IST
ಅಕ್ಷರ ಗಾತ್ರ

ಹೈದರಾಬಾದ್‌: ನಗರದ ಜುಬಿಲಿ–ಬಂಜಾರಾ ಹಿಲ್ಸ್‌ ಪ್ರದೇಶದಲ್ಲಿ ಬಾಲಕಿ ಮೇಲೆ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣವನ್ನು ತೆಲಂಗಾಣ ಪೊಲೀಸರು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಶನಿವಾರ ಆರೋಪ ಮಾಡಿದೆ.

ಈ ಪ್ರಕರಣದಲ್ಲಿ ಎಐಎಂಐಎಂ ಶಾಸಕನ ಮಗನ ಪಾತ್ರ ಇದೆ ಎಂದು ಬಿಜೆಪಿ ಆರೋಪಿಸಿದೆ. ಅದನ್ನು ಪುಷ್ಟೀಕರಿಸುವುದಕ್ಕಾಗಿ, ಮರ್ಸಿಡಿಸ್‌ ಬೆಂಜ್‌ ಕಾರಿನ ಒಳಗಿನದ್ದು ಎನ್ನಲಾದ ಕೆಲವು ಫೋಟೊಗಳು ಮತ್ತು ವಿಡಿಯೊವನ್ನು ಬಹಿರಂಗಪಡಿಸಿದೆ. ಈ ಮರ್ಸಿಡಿಸ್‌ ಬೆಂಜ್‌ ಕಾರಿನೊಳಗೆ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.

ಶಾಸಕನ ಮಗನ ವಿರುದ್ಧ ಯಾವುದೇ ಸಾಕ್ಷ್ಯದೊರೆತಿಲ್ಲ ಎಂದು ಹೈದರಾಬಾದ್‌ ಪಶ್ಚಿಮ ವಲಯದ ಡಿಸಿಪಿ ಜೋಯೆಲ್‌ ಡೇವಿಸ್‌ ಅವರು ಶುಕ್ರವಾರ ಸಂಜೆ ಹೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ರಘುನಂದನ್‌ ರಾವ್‌ ಅವರು, ‘ಡಿಸಿಪಿಯೊಬ್ಬರು ಹೀಗೆ ಆರೋಪಮುಕ್ತಗೊಳಿಸಲು ಹೇಗೆ ಸಾಧ್ಯ? ನಮ್ಮ ಬಳಿ ಸಾಕ್ಷ್ಯಗಳಿವೆ ಮತ್ತು ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ಆಗಲೂ ಡಿಸಿಪಿ ಅವರು ಶಾಸಕರ ಮಗನನ್ನು ಸಮರ್ಥಿಸುತ್ತಾರೆಯೇ ನೋಡೋಣ’ ಎಂದರು.

ಸಂತ್ರಸ್ತೆಗೆ ಒಬ್ಬ ಬಾಲಕ ಮುತ್ತಿಡುವ ಮತ್ತು ಇತರರು ಅದನ್ನು ಫೋನಿನಲ್ಲಿ ಚಿತ್ರೀಕರಿಸುವ ದೃಶ್ಯಗಳು ವಿಡಿಯೊ ಮತ್ತು ಚಿತ್ರಗಳಲ್ಲಿ ಸೆರೆಯಾಗಿವೆ ಎಂದು ಹೇಳಲಾಗಿದೆ. ಆದರೆ ಬಾಲಕ ಮತ್ತು ಬಾಲಕಿಯ ಮುಖಗಳನ್ನು ತೋರಿಸಲಾಗಿಲ್ಲ.

ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಜುಬಿಲಿ ಹಿಲ್‌ ಪೊಲೀಸ್‌ ಠಾಣೆ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ.

‘ಹೈಕೋರ್ಟ್‌ನ ನ್ಯಾಯಮೂರ್ತಿಯಿಂದ ಈ ಪ್ರಕರಣದ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರಿಗೆ ಮನವಿ ಮಾಡುತ್ತೇವೆ’ ಎಂದು ರಾವ್ ಅವರು ಹೇಳಿದ್ದಾರೆ.

17 ವರ್ಷದ ಬಾಲಕಿಯನ್ನು ಐವರು ಬಾಲಕರು ಕಾರಿಗೆ ಹತ್ತಿಸಿಕೊಂಡರು ಎನ್ನಲಾದ ಪಬ್‌ ಸುತ್ತಲಿನ ಪ್ರದೇಶದ ಸಿ.ಸಿ.ಟಿ.ವಿ. ಕ್ಯಾಮರಾ ದೃಶ್ಯಾವಳಿಗಳು ಕಾಣೆ ಅಗಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

‘ಅತ್ಯಾಚಾರ ನಡೆದಿರುವುದು ಕೆಂಪು ಬಣ್ಣದ ಬೆಂಜ್‌ ಕಾರಿನಲ್ಲಿ, ಆದರೆ ಇನೊವಾ ಕಾರಿನಲ್ಲಿ ಇದ್ದವರು ಆರೋಪಿಗಳು ಎಂದು ತೋರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಟಿಎಸ್‌ 9 ಎಫ್‌ಎಲ್‌ 6460 ನೋಂದಣಿ ಸಂಖ್ಯೆಯ ಬೆಂಜ್‌ ಕಾರು, ಎಐಎಂಐಎಂ ಶಾಸಕನ ತಂಗಿಯ ಹೆಸರಿನಲ್ಲಿದೆ ಎಂಬುದು ನಮಗೆ ತಿಳಿದು ಬಂದಿದೆ’ ಎಂದರು.

ದೂರು ವಾಪಸ್‌ ಪಡೆದು ನಗರವನ್ನು ತೊರೆಯುವಂತೆ ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಒಡ್ಡಲಾಗಿದೆ ಎಂದು ರಘುನಂದನ್‌ ರಾವ್‌ ಹೇಳಿದರು.

ಆರೋಪಿಗಳಲ್ಲಿ ಒಬ್ಬನಾದ ಸಾದುದ್ದೀನ್‌ ಮಲಿಕ್‌ನನ್ನು (18) ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.ಮತ್ತಿಬ್ಬರು ಬಾಲಾರೋಪಿಗಳನ್ನು ಪೊಲೀಸರು ಶನಿವಾರ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT