ಭಾನುವಾರ, ಸೆಪ್ಟೆಂಬರ್ 26, 2021
25 °C
ಬಿಹಾರದ ಕೋರ್ಟ್‌ನಲ್ಲಿ ದೂರು ದಾಖಲು

‘ಅಬ್ಬಾ ಜಾನ್’ ಪ್ರಯೋಗ: ಯೋಗಿ ಆದಿತ್ಯನಾಥ್ ಹೇಳಿಕೆ ವಿರುದ್ಧ ವಿಪಕ್ಷಗಳ ಟೀಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಮುಸ್ಲಿಂ ಸಮುದಾಯ ಹಾಗೂ ಸಮಾಜವಾದಿ ಪಕ್ಷವನ್ನು (ಎಸ್‌ಪಿ) ಉದ್ದೇಶಿಸಿ ‘ಅಬ್ಬಾ ಜಾನ್ ಎಂದು ಕರೆಯಲಾಗುವ ಈ ಜನರು’ ಎಂದು ವಾಗ್ದಾಳಿ ನಡೆಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ರಾಜಕೀಯ ಪಕ್ಷಗಳು ಟೀಕೆ ವ್ಯಕ್ತಪಡಿಸಿವೆ.

ಕುಶಿನಗರದಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಆದಿತ್ಯನಾಥ್ ಅವರು, ‘2017ಕ್ಕಿಂತ ಮೊದಲು ಜನರು ಈಗಿನಂತೆ ಪಡಿತರ ಪಡೆಯುತ್ತಿರಲಿಲ್ಲ. ಆಗ ‘ಅಬ್ಬಾ ಜಾನ್’ ಎಂದು ಕರೆಯಲಾಗುತ್ತಿದ್ದ ಜನರು ಈ ಪಡಿತರವನ್ನು ಜೀರ್ಣಿಸಿಕೊಳ್ಳುತ್ತಿದ್ದರು’ ಎಂದಿದ್ದರು. 

‘ಕುಶಿನಗರದ ಪಡಿತರ ಧಾನ್ಯವು ಆಗ ನೇಪಾಳ ಮತ್ತು ಬಾಂಗ್ಲಾದೇಶಕ್ಕೆ ರವಾನೆಯಾಗುತ್ತಿತ್ತು. ಇವತ್ತು ಯಾರಾದರೂ ಬಡಜನರ ಪಡಿತರವನ್ನು ಕಬಳಿಸಿದರೆ ಅಂಥವರನ್ನು ಜೈಲಿಗೆ ಕಳುಹಿಸಲಾಗುತ್ತದೆ’ ಎಂದೂ ಅವರು ಹೇಳಿದ್ದರು.

ಉರ್ದುವಿನಲ್ಲಿ ತಂದೆಯನ್ನು ‘ಅಬ್ಬಾ ಜಾನ್’ ಎಂದು ಕರೆಯಲಾಗುತ್ತದೆ.

ಆದಿತ್ಯನಾಥ್ ಅವರ ‘ಅಬ್ಬಾ ಜಾನ್’ ಎಂಬ ಪದ ಪ್ರಯೋಗಕ್ಕೆ ನ್ಯಾಷನಲ್ ಕಾನ್ಫರೆನ್ಸ್‌ನ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಟ್ವಿಟರ್‌ನಲ್ಲಿ ಟೀಕಿಸಿದ್ದರು.

‘ಬಿಜೆಪಿಯು ಕೋಮುವಾದದ ಕಾರ್ಯತಂತ್ರ (ಅಜೆಂಡಾ) ಬಿಟ್ಟು ಯಾವುದೇ ಚುನಾವಣೆಯನ್ನು ನಡೆಸುವುದಿಲ್ಲ. ಹಿಂದೂಗಳ ಪಡಿತರವನ್ನು ಮುಸ್ಲಿಮರು ತಿಂದಿದ್ದಾರೆ ಎಂದು ಹೇಳುವ ಮೂಲಕ ಆದಿ‌ತ್ಯನಾಥ್ ಮುಸ್ಲಿಮರ ವಿರುದ್ಧದ ತಮ್ಮ ದ್ವೇಷವನ್ನು ಕಾರಿದ್ದಾರೆ’ ಎಂದೂ ಅವರು ಟ್ವೀಟ್ ಮಾಡಿದ್ದಾರೆ.

ಸಮಾಜವಾದಿ ಪಕ್ಷದ ಶಾಸಕ ಅಶುತೋಷ್ ಸಿನ್ಹಾ ಅವರು, ‘ಮುಖ್ಯಮಂತ್ರಿಯಂಥ ಉನ್ನತ ಸ್ಥಾನದಲ್ಲಿರುವ ಯೋಗಿ ಆದಿತ್ಯನಾಥ್ ಅವರು ಇಂಥ ಅಸಾವಿಂಧಾನಿಕ ಪದ ಪ್ರಯೋಗಿಸಿರುವುದು ಶೋಭೆಯಲ್ಲ. ಇದು ಅವರ ಶೈಕ್ಷಣಿಕ ಮಟ್ಟವನ್ನು ತೋರಿಸುತ್ತದೆ’ ಎಂದಿದ್ದಾರೆ.

‘ಮುಖ್ಯಮಂತ್ರಿ ಅವರು ಬಳಸಿರುವ ಭಾಷೆಯು ಪ್ರಜಾಪ್ರಭುತ್ವವನ್ನು ಹಾಳುಗೆಡವುಂಥದ್ದು. ಇದು ಸಮಾಜವನ್ನು ವಿಭಜಿಸುವ ಗುರಿ ಹೊಂದಿದೆ’ ಎಂದು ಉತ್ತರ ಪ್ರದೇಶ ಕಾಂಗ್ರೆಸ್‌ ವಕ್ತಾರ ಅಶೋಕ್ ಸಿಂಗ್ ಹೇಳಿದ್ದಾರೆ.

ಉತ್ತರಪ್ರದೇಶ ಸಿ.ಎಂ ವಿರುದ್ಧ ಕೋರ್ಟ್‌ಗೆ ದೂರು

ಮುಜಾಫರ್‌ಪುರ (ಬಿಹಾರ): ‘ಅಬ್ಬಾ ಜಾನ್’ ಪದ ಪ್ರಯೋಗಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಸೋಮವಾರ ಬಿಹಾರದ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತೆ ತಮನ್ನಾ ಹಶ್ಮಿ ಎಂಬುವರು ಈ ಅರ್ಜಿ ಸಲ್ಲಿಸಿದ್ದು, ‘ಆದಿತ್ಯನಾಥ್ ಅವರು ಈ ಪದ ಬಳಸುವ ಮೂಲಕ ಮುಸ್ಲಿಂ ಸಮುದಾಯವನ್ನು ಅವಮಾನಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಐಪಿಸಿ ಸೆಕ್ಷನ್ ಅಡಿ ಆದಿತ್ಯನಾಥ್ ಅವರ ವಿಚಾರಣೆ ನಡೆಸಬೇಕು’ ಎಂದೂ ಅವರು ನ್ಯಾಯಾಲಯವನ್ನು ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು