ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಆಹ್ವಾನ ತಿರಸ್ಕರಿಸಿದ ಚುನಾವಣಾ ಕಾರ್ಯತಂತ್ರಗಾರ ಪ್ರಶಾಂತ್‌ ಕಿಶೋರ್‌

Last Updated 26 ಏಪ್ರಿಲ್ 2022, 11:40 IST
ಅಕ್ಷರ ಗಾತ್ರ

ನವದೆಹಲಿ: ಪಕ್ಷಕ್ಕೆ ಸೇರುವಂತೆ ಕಾಂಗ್ರೆಸ್ ನೀಡಿರುವ ಆಹ್ವಾನವನ್ನು ಚುನಾವಣಾ ಕಾರ್ಯತಂತ್ರಗಾರ ಪ್ರಶಾಂತ್‌ ಕಿಶೋರ್‌ ತಿರಸ್ಕರಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್‌ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

2024ರ ಸಾರ್ವತ್ರಿಕ ಚುನಾವಣೆಗೆ ಕಾರ್ಯತಂತ್ರ ರೂಪಿಸಲು 'ಎಂಪವರ್ಡ್ ಆ್ಯಕ್ಷನ್‌ ಗ್ರೂಪ್‌–2024' ರಚಿಸುತ್ತಿರುವ ಕಾಂಗ್ರೆಸ್‌, ಆ ಕಾರ್ಯಪಡೆಯ ಭಾಗವಾಗುವಂತೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆಹ್ವಾನ ನೀಡಿದ್ದರು.

ಈ ಕುರಿತು ಟ್ವೀಟಿಸಿರುವ ಪ್ರಶಾಂತ್‌, 'ಚುನಾವಣಾ ಕಾರ್ಯಪಡೆಯ ಭಾಗವಾಗಿ ಪಕ್ಷಕ್ಕೆ ಸೇರುವಂತೆ ಮತ್ತು ಚುನಾವಣೆ ಹೊಣೆಗಾರಿಕೆ ವಹಿಸುವಂತೆ ಕಾಂಗ್ರೆಸ್‌ ನೀಡಿದ ಉದಾತ್ತ ಆಹ್ವಾನವನ್ನು ನಾನು ತಿರಸ್ಕರಿಸಿದ್ದೇನೆ. ನನ್ನ ಪ್ರಕಾರ, ನನಗಿಂತಲೂ ಹೆಚ್ಚಾಗಿ ಪಕ್ಷಕ್ಕೆ ನಾಯಕತ್ವ ಹಾಗೂ ಒಗ್ಗಟ್ಟಿನ ಪ್ರಯತ್ನದಿಂದ ಆಳವಾದ ರಚನಾತ್ಮಕ ಸಮಸ್ಯೆಗಳಿಗೆ ಪರಿವರ್ತನಾ ಸುಧಾರಣೆಗಳ ಮೂಲಕ ಸರಿಪಡಿಸುವುದು ಅವಶ್ಯವಾಗಿದೆ' ಎಂದಿದ್ದಾರೆ.

ಪ್ರಶಾಂತ್‌ ಅವರ ಸಲಹೆಗಳು ಮತ್ತು ಪ್ರಯತ್ನಗಳನ್ನು ಪಕ್ಷವು ಶ್ಲಾಘಿಸುತ್ತದೆ ಎಂದು ಕಾಂಗ್ರೆಸ್‌ ಪ್ರಧಾನ ವಕ್ತಾರ ರಣದೀಪ್‌ ಸುರ್ಜೇವಾಲಾ ಮಂಗಳವಾರ ಹೇಳಿದ್ದಾರೆ.

ಯಾವುದೇ ನಿರೀಕ್ಷೆಗಳಿಲ್ಲದೆ ಪ್ರಶಾಂತ್‌ ಅವರು ಕಾಂಗ್ರೆಸ್‌ಗೆ ಸೇರಲು ಬಯಸಿದ್ದರು ಹಾಗೂ ಕಳೆದ ವಾರ ಪಕ್ಷಕ್ಕೆ ಅವರು ಮುಂದಿನ ಹಾದಿಯ ಕುರಿತು ವಿಷಯ ಮಂಡಿಸಿದ್ದರು ಎಂದು ವರದಿಯಾಗಿದೆ.

'ಪ್ರಶಾಂತ್‌ ಕಿಶೋರ್‌ ಅವರೊಂದಿಗೆ ಚರ್ಚೆ ಮತ್ತು ಅವರ ವಿಷಯ ಮಂಡನೆಯ ಬಳಿಕ ಕಾಂಗ್ರೆಸ್‌ ಅಧ್ಯಕ್ಷರು 2024ರ ಕಾರ್ಯಪಡೆಯನ್ನು ರಚಿಸಿದರು ಹಾಗೂ ಆ ತಂಡದ ಭಾಗವಾಗಿ ಅವರನ್ನು ಪಕ್ಷಕ್ಕೆ ಸೇರುವಂತೆ ಆಹ್ವಾನಿಸಿದರು. ನಿಗದಿತ ಜವಾಬ್ದಾರಿಯನ್ನು ತಿಳಿಸಲಾಗಿತ್ತು. ಅವರು ಅದನ್ನು ತಿರಸ್ಕರಿಸಿದ್ದಾರೆ. ಅವರು ಪಕ್ಷಕ್ಕೆ ನೀಡಿದ ಸಲಹೆಗಳು ಮತ್ತು ಪ್ರಯತ್ನಗಳನ್ನು ಶ್ಲಾಘಿಸುತ್ತೇವೆ' ಎಂದು ಸುರ್ಜೇವಾಲಾ ಟ್ವೀಟಿಸಿದ್ದಾರೆ.

ಪ್ರಶಾಂತ್‌ ಅವರ ಚುನಾವಣಾ ಕಾರ್ಯಪಡೆ ಕಂಪನಿ ಐ–ಪ್ಯಾಕ್‌, ತೆಲಂಗಾಣ ವಿಧಾನಸಭೆ ಚುನಾವಣೆಗಾಗಿ ಟಿಆರ್‌ಎಸ್‌ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅದರನ್ನು ಕಾಂಗ್ರೆಸ್‌ ಮುಖಂಡರು ಹಿತಾಸಕ್ತಿಯ ಸಂಘರ್ಷವಾಗಿ ಗಮನಿಸಿದ್ದು, ಈ ಕಾರಣದಿಂದಾಗಿ ಪ್ರಶಾಂತ್‌ ಪಕ್ಷ ಸೇರ್ಪಡೆಯಿಂದ ಹಿಂದೆ ಸರಿದಿರುವುದಾಗಿ ಮೂಲಗಳಿಂದ ತಿಳಿದು ಬಂದಿರುವುದಾಗಿ ಪಿಟಿಐ ವರದಿ ಮಾಡಿದೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಮತ್ತು ಬಿಹಾರದಲ್ಲಿ ನಿತೀಶ್‌ ಕುಮಾರ್ ಅವರ ಜೆಡಿ–ಯು ಪಕ್ಷಕ್ಕೆ ಚುನಾವಣಾ ಕಾರ್ಯತಂತ್ರ ನಿರ್ವಹಣೆಯನ್ನು ಪ್ರಶಾಂತ್‌ ಕಿಶೋರ್‌ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT