ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ| ಖುದ್ದು ಹಾಜರಿಯಿಂದ ಅಪ್ರಾಪ್ತೆ ಮನಸ್ಸಿಗೆ ಘಾಸಿ: ಕೋರ್ಟ್

ಲೈಂಗಿಕ ದೌರ್ಜನ್ಯ ಪ್ರಕರಣ: ದೆಹಲಿ ಹೈಕೋರ್ಟ್‌ ಅಭಿಪ್ರಾಯ
Last Updated 19 ಜನವರಿ 2023, 14:19 IST
ಅಕ್ಷರ ಗಾತ್ರ

ನವದೆಹಲಿ: ‘ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಅಪ್ರಾಪ್ತೆಯು ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದರಿಂದ ಆಕೆಯ ಮನಸ್ಸಿನ ಮೇಲೆ ಘಾಸಿ ಉಂಟಾಗುತ್ತದೆ. ವಿಚಾರಣೆ ನೆಪದಲ್ಲಿ ಘಟನೆಯನ್ನು ಮತ್ತೆ ಮತ್ತೆ ಪ್ರಸ್ತಾಪಿಸುವ ಮೂಲಕ ಆಕೆಗೆ ಇನ್ನಷ್ಟು ಮಾನಸಿಕ ಹಿಂಸೆ ನೀಡಬಾರದು’ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಹೊಸ ಮಾರ್ಗಸೂಚಿಯನ್ನೂ ಪ್ರಕಟಿಸಿದೆ.

ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಇದೇ 11ರಂದು ವಿಚಾರಣೆಗೆ ಒಳಪಡಿಸಿದ್ದ ನ್ಯಾಯಮೂರ್ತಿ ಜಸ್‌ಮೀತ್‌ ಸಿಂಗ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ವಿಚಾರಣೆ ವೇಳೆ ಆರೋಪ–ಪ್ರತ್ಯಾರೋಪಗಳನ್ನು ಮಾಡಲಾಗುತ್ತದೆ. ಪೋಕ್ಸೊ ಪ್ರಕರಣದ ಸಂತ್ರಸ್ತೆಯ ನಡತೆಯ ಮೇಲೆ ಅನುಮಾನ ವ್ಯಕ್ತಪಡಿಸಲಾಗುತ್ತದೆ. ಇದರಿಂದ ಆಕೆ ಜರ್ಜರಿತಳಾಗಿಬಿಡಬಹುದು’ ಎಂದು ಹೇಳಿದೆ.

‘ನನ್ನ ಪ್ರಕಾರ ವಿಚಾರಣೆ ವೇಳೆ ಸಂತ್ರಸ್ತೆಯು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದರಿಂದ ಆಕೆಯ ಮನಸ್ಸಿನ ಮೇಲೆ ಘೋರ ಪರಿಣಾಮ ಉಂಟಾಗಲಿದೆ. ಆರೋಪಿಯ ಎದುರೇ ಆಕೆ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ’ ಎಂದು ನ್ಯಾಯಮೂರ್ತಿ ಜಸ್‌ಮೀತ್‌ ತಿಳಿಸಿದ್ದಾರೆ.

‘ಪೋಕ್ಸೊ ಪ್ರಕರಣದ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ವೇಳೆ ಸಂತ್ರಸ್ತೆಯು ಖುದ್ದಾಗಿ ಇಲ್ಲವೇ ವರ್ಚುವಲ್‌ ಆಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗುತ್ತದೆ’ ಎಂದು ಆರೋಪಿ ಪರ ವಕೀಲ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಪ್ರತಿನಿಧಿಯೊಬ್ಬರು ನ್ಯಾಯಪೀಠಕ್ಕೆ ತಿಳಿಸಿದರು.

‘ಈ ಸಂಪ್ರದಾಯಕ್ಕೆ ಕೊನೆ ಹಾಡುವ ಉದ್ದೇಶದಿಂದಲೇ ಕೆಲ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಇವುಗಳನ್ನು ಜಾರಿಗೊಳಿಸಿದರೆ, ಪೋಕ್ಸೊ ಪ್ರಕರಣದ ಸಂತ್ರಸ್ತೆಯರನ್ನು ಮಾನಸಿಕ ಕಿರಿಕಿರಿಯಿಂದ ಪಾರುಮಾಡಬಹುದು. ಇನ್ನು ಮುಂದೆ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದ ಜಾಮೀನು ಅರ್ಜಿಯ ವಿಚಾರಣೆ ವೇಳೆ ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದೂ ನ್ಯಾಯಪೀಠ ಸೂಚಿಸಿತು.

ಮಾರ್ಗಸೂಚಿಯ ಪ್ರಕಾರ, ತನಿಖಾಧಿಕಾರಿ ಅಥವಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೆರವಿನೊಂದಿಗೆ ಸಂತ್ರಸ್ತೆಯನ್ನು ಕಲಾಪ ಆರಂಭಕ್ಕೂ ಮುನ್ನವೇ ವರ್ಚುವಲ್‌ ಆಗಿ ನ್ಯಾಯಾಧೀಶರ ಎದುರು ಹಾಜರುಪಡಿಸಬಹುದು.

‘ಜಾಮೀನು ಅರ್ಜಿಯ ವಿಚಾರಣೆ ವೇಳೆ ಕಟಕಟೆಯಲ್ಲಿ ನಿಂತಿರುವ ಸಂತ್ರಸ್ತೆಯ ಬಳಿ ಹೋಗಿ ಆರೋಪಿಗೆ ಜಾಮೀನು ನೀಡಬೇಕೇ, ಬೇಡವೇ ಎಂದು ನೇರವಾಗಿ ಕೇಳುವ ಬದಲು, ಸೂಕ್ತ ಪ್ರಶ್ನೆಗಳನ್ನು ಆಕೆಯ ಎದುರಿಗಿಟ್ಟು ಪ್ರತಿಕ್ರಿಯೆ ಪಡೆದುಕೊಳ್ಳಬೇಕು. ಆರೋಪಿಗೆ ಜಾಮೀನು ನೀಡುವುದರಿಂದ ಆಕೆಯ ಮನದಲ್ಲಿ ಉಂಟಾಗಬಹುದಾದ ಆತಂಕ ಮತ್ತು ಭೀತಿಯ ಕುರಿತು ಅರಿತುಕೊಳ್ಳಲು ಪ್ರಯತ್ನಿಸಬೇಕು. ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗುವಾಗ ಆಕೆಗೆ ಆತ್ಮಸ್ಥೈರ್ಯ ತುಂಬುವುದಕ್ಕಾಗಿ ವ್ಯಕ್ತಿಯೊಬ್ಬರು ಜೊತೆಗೆ ಇರಬೇಕು’ ಎಂದೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

‘ಹೈಬ್ರಿಡ್‌’ ಮಾದರಿ ವಿಚಾರಣೆ ಸೂಕ್ತ

‘ಇಂತಹ ಪ್ರಕರಣಗಳ ವಿಚಾರಣೆಗೆ ‘ಹೈಬ್ರಿಡ್‌’ ಮಾದರಿಯೇ ಸೂಕ್ತ. ಇದರಿಂದ ಸಂತ್ರಸ್ತೆಯ ಹಕ್ಕುಗಳನ್ನು ರಕ್ಷಿಸಬಹುದು. ಆರೋಪಿ ಮತ್ತು ಸಂತ್ರಸ್ತೆ ಮುಖಾಮುಖಿಯಾಗುವುದನ್ನೂ ತಪ್ಪಿಸಬಹುದು. ಸಂತ್ರಸ್ತೆಯ ಮನಸ್ಸಿನ ಮೇಲೆ ಘಾಸಿ ಉಂಟಾಗುವುದನ್ನೂ ತಡೆಯಬಹುದು’ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

‘ಜಾಮೀನು ಅರ್ಜಿ ವಿಚಾರಣೆ ವೇಳೆ ತನ್ನ ಪರವಾಗಿ ತಂದೆ–ತಾಯಿ ಅಥವಾ ಪೋಷಕರು ಇಲ್ಲವೇ ಬೆಂಬಲಿತ ವ್ಯಕ್ತಿಯು ನ್ಯಾಯಾಲಯಕ್ಕೆ ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಲಿದ್ದಾರೆ ಎಂದು ಸಂತ್ರಸ್ತೆಯು ಹೇಳಿದ್ದೇ ಆದರೆ, ಈ ಸಂಬಂಧ ಲಿಖಿತ ಪತ್ರ ಸಲ್ಲಿಸಿದರೆ ಅಂತಹ ಸಂದರ್ಭಗಳಲ್ಲಿ ಖುದ್ದು ಅಥವಾ ವರ್ಚುವಲ್‌ ಹಾಜರಾತಿಗಾಗಿ ಆಕೆಯ ಮೇಲೆ ಒತ್ತಡ ಹೇರುವಂತಿಲ್ಲ’ ಎಂದೂ ಹೇಳಲಾಗಿದೆ.

‘ಆರೋಪಿಗೆ ಜಾಮೀನು ಮಂಜೂರು ಆದ ಪಕ್ಷದಲ್ಲಿ ನ್ಯಾಯಾಲಯದ ಆದೇಶದ ಒಂದು ಪ್ರತಿಯನ್ನು ಆಕೆಗೆ ಕಡ್ಡಾಯವಾಗಿ ರವಾನಿಸಬೇಕು. ಸಂತ್ರಸ್ತೆಯ ಸುರಕ್ಷತೆಯ ದೃಷ್ಟಿಯಿಂದ ಇದು ಮಹತ್ವದ್ದು. ಜಾಮೀನು ಆದೇಶದಲ್ಲಿ ಉಲ್ಲೇಖಿಸಿರುವ ಷರತ್ತುಗಳ ಬಗ್ಗೆ ಅರಿಯಲೂ ಇದರಿಂದ ಆಕೆಗೆ ಅನುಕೂಲವಾಗುತ್ತದೆ’ ಎಂದೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT