ಮಂಗಳವಾರ, ಮೇ 24, 2022
30 °C
‘ಸುಪ್ರೀಂ’ಗೆ ವಿವರಣೆ ನೀಡಿದ ಕೇಂದ್ರ

ಪಂಜಾಬ್‌ ಮಾಜಿ ಸಿಎಂ‌ ಹತ್ಯೆ | ಅಪರಾಧಿ ಕ್ಷಮಾದಾನ ಅರ್ಜಿ: ರಾಷ್ಟ್ರಪತಿ ಪರಿಶೀಲನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪಂಜಾಬ್‌ ಮಾಜಿ ಮುಖ್ಯಮಂತ್ರಿ ಬಿಯಾಂತ್‌ ಸಿಂಗ್‌ ಹತ್ಯೆ ಪ್ರಕರಣದಲ್ಲಿ ಬಲವಂತ್‌ ಎಸ್‌. ರಾಜೊಆನಾಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಪುನರ್‌ಪರಿಶೀಲಿಸುವ ವಿಷಯ ರಾಷ್ಟ್ರಪತಿ ಅವರ ಪರಿಗಣನೆಯಲ್ಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

‘ಖಾಲಿಸ್ತಾನ ವಿಷಯಕ್ಕೆ ಸಂಬಂಧಿಸಿದಂತೆ ಬಿಯಾಂತ್‌ ಸಿಂಗ್‌ ಅವರನ್ನು ಬಲವಂತ್‌ ಹತ್ಯೆ ಮಾಡಿದ್ದ. ಅ‍ಪರಾಧಿಗೆ ಕ್ಷಮಾದಾನ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ಬಗ್ಗೆ ಪರಿಶೀಲನಾ ಪ್ರಕ್ರಿಯೆಗಳು ಆರಂಭವಾಗಿವೆ. ರಾಷ್ಟ್ರಪತಿ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ನ್ಯಾಯಾಲಯಕ್ಕೆ ವಿವರಿಸಿದರು.

ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್‌ ಅವರನ್ನೊಳಗೊಂಡ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು.

‘ಪ್ರಸ್ತುತ ಸಂದರ್ಭದಲ್ಲಿ ಈ ವಿಷಯದ ಬಗ್ಗೆ ಪರಿಶೀಲನೆ ನಡೆಸಲು ಆರು ವಾರಗಳ ಕಾಲಾವಕಾಶ ಅಗತ್ಯವಿದೆ’ ಎಂದು ತುಷಾರ್‌ ಮೆಹ್ತಾ ತಿಳಿಸಿದ್ದಾರೆ.

ಬಲವಂತ ಪರ ವಾದ ಮಾಡಿದ ಹಿರಿಯ ವಕೀಲ ಮುಕುಲ್‌ ರೋಹಟಗಿ, ‘ಕಳೆದ 25 ವರ್ಷಗಳಿಂದ ಬಲವಂತ್‌ ಜೈಲಿನಲ್ಲಿದ್ದಾನೆ. ಆತನ ಕ್ಷಮಾದಾನ ಅರ್ಜಿಯು ಕಳೆದ ಒಂಬತ್ತು ವರ್ಷಗಳಿಂದ ಬಾಕಿ ಉಳಿದಿದೆ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಪಂಜಾಬ್‌ ಪೊಲೀಸ್‌ನ ಮಾಜಿ ಕಾನ್‌ಸ್ಟೆಬಲ್‌ ಬಲವಂತ್‌, 1995ರಲ್ಲಿ ಪಂಜಾಬ್‌ ಸಚಿವಾಲಯದ ಹೊರಗೆ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದಾನೆ. ಈ ಸ್ಫೋಟದಲ್ಲಿ ಬಿಯಾಂತ್‌ ಸಿಂಗ್‌ ಮತ್ತು ಇತರ 16 ಮಂದಿ ಸಾವಿಗೀಡಾಗಿದ್ದರು.

ಗಲ್ಲು ಶಿಕ್ಷೆಯನ್ನು ಪರಿವರ್ತಿಸಿ ಕಡಿಮೆ ಶಿಕ್ಷೆ ವಿಧಿಸುವಂತೆ ಕೋರಿ ಬಲವಂತ್‌ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಎರಡು ವಾರಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ಜನವರಿ 25ರಂದು ಆದೇಶ ನೀಡಿತ್ತು.

ತುಷಾರ್‌ ಮೆಹ್ತಾ ಅವರ ಮನವಿಗೆ ಸ್ಪಂದಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಆರು ವಾರಗಳ ಕಾಲ ಮುಂದೂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು