ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದೆಲ್ಲೆಡೆ ರಾಷ್ಟ್ರಪಿತನ ಸ್ಮರಣೆ

ಮಹಾತ್ಮ ಗಾಂಧಿ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜನ್ಮದಿನಾಚರಣೆ ಹಿನ್ನೆಲೆ
Last Updated 2 ಅಕ್ಟೋಬರ್ 2020, 13:07 IST
ಅಕ್ಷರ ಗಾತ್ರ

ನವದೆಹಲಿ/ಅಹಮದಾಬಾದ್‌: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 151ನೇ ಜನ್ಮದಿನವನ್ನು ದೇಶದೆಲ್ಲೆಡೆ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಮಾಜಿ ಪ್ರಧಾನ ಮಂತ್ರಿ ಲಾಲ್‌‌ ಬಹದ್ದೂರ್‌ ಶಾಸ್ತ್ರಿ ಜನ್ಮ ದಿನದ ಹಿನ್ನೆಲೆಯಲ್ಲಿ ಅವರ ಕೊಡುಗೆಗಳನ್ನೂ ಸ್ಮರಿಸಲಾಯಿತು.

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಗಾಂಧಿ ಅವರ ಸಮಾಧಿ ಸ್ಥಳ ರಾಜಘಾಟ್ ಹಾಗೂ ಶಾಸ್ತ್ರಿ ಅವರ ಸಮಾಧಿ ಇರುವ ವಿಜಯಘಾಟ್‌ಗೆ ಭೇಟಿ ನೀಡಿ ಇಬ್ಬರೂ ಗಣ್ಯರಿಗೂ ಗೌರವ ಸಲ್ಲಿಸಿದರು.

‘ಸಮೃದ್ಧ ಹಾಗೂ ಸಹಾನುಭೂತಿಯ ಭಾರತದ ನಿರ್ಮಾಣಕ್ಕೆ ಬಾಪು ಅವರ ಆದರ್ಶಗಳು ನಮಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತವೆ’ ಎಂದು ಮೋದಿ ಹೇಳಿದರು.

‘ವಿನಮ್ರ ಮತ್ತು ಮೃದು ವ್ಯಕ್ತಿತ್ವದ ಶಾಸ್ತ್ರಿ ಅವರು ಸರಳತೆಯ ಪ್ರತಿಪಾದಕರಾಗಿದ್ದರು. ಬದುಕಿದಷ್ಟೂ ಕಾಲ ದೇಶದ ಏಳಿಗೆಗಾಗಿ ದುಡಿದರು’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

‘ಗಾಂಧೀಜಿ ಅವರು ರೈತರು ಸೇರಿದಂತೆ ಎಲ್ಲ ದುಡಿಯುವ ವರ್ಗದ ಬಗ್ಗೆ ಸಹಾನುಭೂತಿ ಉಳ್ಳವರಾಗಿದ್ದರು. ಶಾಸ್ತ್ರಿಯವರು ‘ಜೈ ಜವಾನ್, ಜೈ ಕಿಸಾನ್‌’ ಎಂಬ ಘೋಷವಾಕ್ಯ ಮೊಳಗಿಸಿದ್ದರು’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಉಭಯ ನಾಯಕರನ್ನು ಸ್ಮರಿಸಿದ್ದಾರೆ.

ಕೇಂದ್ರ ಸಚಿವರಾದ ಹರ್‌ದೀ‍ಪ್‌ ಸಿಂಗ್‌ ಪುರಿ, ಗಜೇಂದ್ರ ಸಿಂಗ್‌ ಶೇಖಾವತ್‌, ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಅವರೂ ರಾಜಘಾಟ್‌ಗೆ ಭೇಟಿ ನೀಡಿ ನಮನ ಸಲ್ಲಿಸಿದರು. ಈ ವೇಳೆ ಗಾಂಧೀಜಿಯವರ ಅಚ್ಚುಮೆಚ್ಚಿನ ‘ವೈಷ್ಣವ ಜನ‌ ತೋ’ ಮತ್ತು ‘ರಘುಪತಿ ರಾಘವ ರಾಜಾ ರಾಮ್’ ಭಜನೆಗಳನ್ನು ಹಾಡಲಾಯಿತು.

ವಿಜಯಘಾಟ್‌ ಭೇಟಿ ವೇಳೆ ರಾಷ್ಟ್ರಪತಿಗಳ ಜೊತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಕೂಡ ಇದ್ದರು.

ಸಾಬರಮತಿಯಲ್ಲಿ ಸರ್ವ ಧರ್ಮೀಯರ ಪ್ರಾರ್ಥನೆ:

ಗಾಂಧಿ ಜಯಂತಿ ಪ್ರಯುಕ್ತ ಸಾಬರಮತಿ ಆಶ್ರಮದಲ್ಲಿ ಶುಕ್ರವಾರ ಬೆಳಿಗ್ಗೆ ಸರ್ವ ಧರ್ಮದವರನ್ನೊಳಗೊಂಡ ಪ್ರಾರ್ಥನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

‘ಪ್ರತಿ ವರ್ಷವೂ ಗಾಂಧಿ ಜಯಂತಿಯಂದು ಸರ್ವ ಧರ್ಮದವರ ಪ್ರಾರ್ಥನೆ ಕಾರ್ಯಕ್ರಮ ಆಯೋಜಿಸುವುದು ವಾಡಿಕೆ. ಪ್ರತಿ ಸಲವೂ ವಿದ್ಯಾರ್ಥಿಗಳು ಹಾಗೂ ನಾಗರಿಕರು ಇದರಲ್ಲಿ ಭಾಗವಹಿಸುತ್ತಿದ್ದರು.ಕೊರೊನಾ ಸೋಂಕು ಹರಡುವ ಅಪಾಯದ ಹಿನ್ನೆಲೆಯಲ್ಲಿ ಈ ಬಾರಿ ಆಶ್ರಮ ನಿವಾಸಿಗಳಿಗಷ್ಟೇ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಲಾಗಿತ್ತು’ ಎಂದು ಆಶ್ರಮದ ನಿರ್ದೇಶಕ ಅತುಲ್‌ ಪಾಂಡ್ಯ ತಿಳಿಸಿದರು.

ಗೂಗಲ್‌ನಲ್ಲಿ ಗಾಂಧೀಜಿ ಕುರಿತ ಅಂಚೆಚೀಟಿಗಳ ಪ್ರದರ್ಶನ‌: ಗಾಂಧಿ ಜಯಂತಿ ಅಂಗವಾಗಿ ಗೂಗಲ್‌ ಆರ್ಟ್ಸ್‌ ಆ್ಯಂಡ್‌ ಕಲ್ಚರ್‌ ಸಂಸ್ಥೆಯು ಗಾಂಧಿ ಕುರಿತಾದ ಅಂಚೆಚೀಟಿಗಳ ಆನ್‌ಲೈನ್‌ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.

ಕೊಚ್ಚಿ ಮೂಲದ ಲೆಟರ್‌ಫಾರ್ಮ್ಸ್‌ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಮಾನತೆ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಪರಿಸರ, ಮಾನವೀಯತೆ ಸೇರಿದಂತೆ ಇದನ್ನು ಒಟ್ಟು ಹತ್ತು ವಿಭಾಗಗಳಾಗಿ ವರ್ಗೀಕರಿಸಲಾಗಿದ್ದು, ಮುಂದಿನ ಒಂಬತ್ತು ವಾರಗಳ ಕಾಲ ಪ್ರತಿ ಶುಕ್ರವಾರದಂದು ಒಂದೊಂದು ವಿಭಾಗಕ್ಕೆ ಸಂಬಂಧಿಸಿದ ಅಂಚೆಚೀಟಿಗಳು ಪ್ರದರ್ಶನಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT