ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲುಗಳಿಗೆ ಪರಿಹಾರ ಕ್ರಮಗಳ ಅನ್ವೇಷಣೆ: ಐಐಟಿಗಳ ಪ್ರಮುಖರಿಗೆ ಪ್ರಧಾನಿ ಸಲಹೆ

Last Updated 8 ಜುಲೈ 2021, 15:53 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಬೆಂಬಲಿತ ಪ್ರಮುಖ, ಉನ್ನತ ತಾಂತ್ರಿಕ ಸಂಸ್ಥೆಗಳ ಪ್ರಮುಖರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಮಾಲೋಚನೆ ನಡೆಸಿದ್ದು, ಹೊಸ ಸವಾಲು ಮತ್ತು ಪರಿಸ್ಥಿತಿ ಎದುರಿಸಲು ಪರಿಹಾರ ಕ್ರಮಗಳನ್ನು ಅನ್ವೇಷಿಸಬೇಕು ಎಂದು ಸಲಹೆ ಮಾಡಿದರು.

‘ತಂತ್ರಜ್ಞಾನ ಹಾಗೂ ಸಂಶೋಧನೆ, ಅಭಿವೃದ್ಧಿ ಸಂಸ್ಥೆಗಳು ಬರುವ ದಶಕಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಸವಾಲುಗಳಿಗೆ ಪರಿಹಾರ ಕಲ್ಪಿಸಲು ಉನ್ನತ ಮತ್ತು ತಾಂತ್ರಿಕ ಶಿಕ್ಷಣದ ಬಳಕೆ ಅಗತ್ಯ ಎಂದರು’ ಎಂದು ಪ್ರಧಾನಮಂತ್ರಿ ಕಚೇರಿಯ ಹೇಳಿಕೆಯು ತಿಳಿಸಿದೆ.

ಮುಂದಿನ ದಶಕವನ್ನು ‘ಭಾರತದ ತಂತ್ರಜ್ಞಾನ ದಶಕ’ ಎಂದು ಪ್ರಧಾನಿ ಬಣ್ಣಿಸಿದರು. ವಿಡಿಯೊ ಕಾನ್ಫರೆನ್ಸ್‌ನಲ್ಲಿ ನಡೆದ ಸಮಾಲೋಚನೆಯಲ್ಲಿ 100 ವಿವಿಧ ಸಂಸ್ಥೆಗಳ ಮುಖ್ಯಸ್ಥರು ಭಾಗಿಯಾಗಿದ್ದರು. ಶಿಕ್ಷಣ, ಆರೋಗ್ಯ, ಕೃಷಿ, ರಕ್ಷಣೆ ಮತ್ತು ಸೈಬರ್ ತಂತ್ರಜ್ಞಾನ ಕ್ಷೇತ್ರದ ಸವಾಲುಗಳನ್ನು ಪ್ರಧಾನಿ ಉಲ್ಲೇಖಿಸಿದರು.

ಶೈಕ್ಷಣಿಕ ಮಾದರಿಗಳ ಪರಿಷ್ಕರಣೆಗೆ ಒತ್ತು ನೀಡಿದ ಅವರು, ಲಭ್ಯತೆ, ಕೈಗೆಟುಕುವುದು, ಸಮಾನತೆ ಮತ್ತು ಗುಣಮಟ್ಟ ಇಂಥ ಶೈಕ್ಷಣಿಕ ಮಾದರಿಗಳ ಮುಖ್ಯ ಲಕ್ಷಣಗಳಾಗಿರಬೇಕು ಎಂದು ಸಲಹೆ ಮಾಡಿದರು.

ಕೋವಿಡ್‌ ಪರಿಸ್ಥಿತಿಯನ್ನು ಎದುರಿಸುವಲ್ಲಿ ಪ್ರಮುಖ ಮೂರು ಸಂಸ್ಥೆಗಳು ನಡೆಸಿದ ಸಂಶೋಧನೆಯನ್ನು ಪ್ರಧಾನಿ ಈ ಸಂದರ್ಭದಲ್ಲಿ ಶ್ಲಾಘಿಸಿದರು. ಬಳಿಕ ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿ, ‘ಉನ್ನತ ಐಐಟಿಗಳ ಪ್ರಮುಖರ ಜೊತೆಗೆ ಮೌಲ್ಯಯುತ ಚರ್ಚೆ ನಡೆಯಿತು. ಯುವಜನರಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಯಿತು’ ಎಂದು ತಿಳಿಸಿದ್ದಾರೆ.

ನೂತನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಮತ್ತು ಶಿಕ್ಷಣ ಖಾತೆ ರಾಜ್ಯ ಸಚಿವರು ಈ ಸಮಾಲೋಚನೆಯ ವೇಳೆ ಹಾಜರಿದ್ದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಗೋವರ್ಧನ್‌ ರಂಗರಾಜನ್‌, ಐಐಟಿ ಬಾಂಬೆಯ ಪ್ರೊ. ಸುಭಾಸಿಸ್‌ ಚೌಧುರಿ, ಐಐಟಿ ಮದ್ರಾಸ್‌ನ ಪ್ರೊ. ಭಾಸ್ಕರ್‌ ರಾಮಮೂರ್ತಿ, ಐಐಟಿ ಕಾನ್ಪುರದ ಪ್ರೊ. ಅಭಯ್ ಕರಂಡಿಕರ್ ಅವರೂ ಸಮಾಲೋಚನೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರಲ್ಲಿ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT