ಮಂಗಳವಾರ, ಮಾರ್ಚ್ 28, 2023
22 °C

ಕೇದಾರನಾಥದಲ್ಲಿ ಪ್ರಧಾನಿ ಮೋದಿ: ಶಂಕರಾಚಾರ್ಯರ 12 ಅಡಿ ಎತ್ತರದ ಪ್ರತಿಮೆ ಅನಾವರಣ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಡೆಹ್ರಾಡೂನ್‌/ ಕೇದಾರನಾಥ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕೇದಾರನಾಥದಲ್ಲಿನ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಆದಿ ಗುರು ಶಂಕರಾಚಾರ್ಯ ಅವರ ಸಮಾಧಿಯ ಪುನರ್‌ನಿರ್ಮಾಣವಾಗಿದ್ದು, ಅಲ್ಲಿ ಶಂಕರಾಚಾರ್ಯರ 12 ಅಡಿ ಎತ್ತರದ ಪ್ರತಿಮೆ ಅನಾವರಣ ಮಾಡಿದರು.

ಹಿಮಾಲಯ ಪರ್ವತ ಸಾಲಿನಲ್ಲಿರುವ ಕೇದಾರನಾಥದಲ್ಲಿ ಸುಮಾರು ₹400 ಕೋಟಿ ವೆಚ್ಚದ ಪುನರ್‌ನಿರ್ಮಾಣ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.

ಶಂಕರಾಚಾರ್ಯರ ಪ್ರತಿಮೆ ಅನಾವರಣದ ನಂತರ ಮೋದಿ ಅವರು ಅಲ್ಲಿಯೇ ಕೆಲ ಸಮಯ ಧ್ಯಾನಕ್ಕೆ ಕುಳಿತರು. 35 ಟನ್‌ ತೂಕದ ಶಂಕರಾಚಾರ್ಯರ ಪ್ರತಿಮೆ ರೂಪಿಸುವ ಕಾರ್ಯ 2019ರಲ್ಲಿ ಆರಂಭಿಸಲಾಗಿತ್ತು.

 

2013ರ ಪ್ರವಾಹದಿಂದ ತೀವ್ರ ಹಾನಿಗೆ ಒಳಗಾಗಿದ್ದ ಕೇದಾರನಾಥ ಪ್ರದೇಶವನ್ನು ಪುನರ್‌ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಅಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ವಿವರಗಳನ್ನು ಒಳಗೊಂಡ ಸಾಕ್ಷ್ಯಚಿತ್ರವೊಂದನ್ನು ಮೋದಿ ವೀಕ್ಷಿಸಿದರು.

ಜೂನ್‌ 2013ರ ಪ್ರಕೃತಿ ವಿಕೋಪದಲ್ಲಿ ಪರ್ವತದಿಂದ ದೇವಾಲಯದ ಹಿಂಬದಿಗೆ ಉರುಳಿ ಬಂದ ಬೃಹತ್‌ ಬಂಡೆಯು, ದೇವಾಲಯಕ್ಕೆ ಆಗಬಹುದಾಗಿದ್ದ ಹೆಚ್ಚಿನ ಹಾನಿಯನ್ನು ತಡೆದಿತ್ತು. ಅದನ್ನು 'ಭೀಮ ಶಿಲಾ' ಎಂದು ಕರೆಯಲಾಗುತ್ತಿದೆ. ಅಲ್ಲಿಗೂ ಪ್ರಧಾನಿ ಭೇಟಿ ನೀಡಿದರು.

ಕೇದಾರ್‌ಪುರಿಯ ಮರುನಿರ್ಮಾಣವು ಪ್ರಧಾನಿ ಮೋದಿ ಅವರ ಕನಸಿನ ಯೋಜನೆಯಾಗಿದ್ದು, ಆಗಾಗ್ಗೆ ಯೋಜನೆಯ ಅಭಿವೃದ್ಧಿಯ ಬಗೆಗೆ ಪರಿಶೀಲನೆ ನಡೆಸುತ್ತಿರುತ್ತಾರೆ.

ಇಂದು ಬೆಳಿಗ್ಗೆ ಡೆಹ್ರಾಡೂನ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಉತ್ತರಾಖಂಡದ ರಾಜ್ಯಪಾಲರಾದ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಗುರ್ಮಿತ್‌ ಸಿಂಗ್‌, ಮುಖ್ಯಮಂತ್ರಿ ಪುಷ್ಕರ್‌ ಸಿಂಗ್ ಧಾಮಿ ಬರಮಾಡಿಕೊಂಡರು. ಸಂಪುಟ ಸಚಿವರಾದ ಸುಬೋಧ್ ಉನಿಯಾಲ್‌, ಗಣೇಶ್‌ ಜೋಶಿ ಹಾಗೂ ಉತ್ತರಾಖಂಡ ವಿಧಾನಸಭೆಯ ಸ್ಪೀಕರ್‌ ಪ್ರೇಮ್‌ಚಂದ್‌ ಅಗರ್ವಾಲ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು