ಭಾನುವಾರ, ಸೆಪ್ಟೆಂಬರ್ 20, 2020
22 °C

'ಸಮಯ ಪಾಲನೆ ಆಗದಿದ್ದರೆ ಖಾಸಗಿ ರೈಲ್ವೆ ನಿರ್ವಾಹಕರಿಗೆ ದಂಡ'

ಪಿಟಿಐ Updated:

ಅಕ್ಷರ ಗಾತ್ರ : | |

ರೈಲ್ವೆ– ಪ್ರಾತಿನಿಧಿಕ ಚಿತ್ರ

ನವದೆಹಲಿ: ಖಾಸಗಿ ರೈಲ್ವೆ ಸೇವಾ ಸಂಸ್ಥೆಗಳು ತಮ್ಮ ರೈಲ್ವೆ ಸಂಚಾರ ಸೇವೆಯಲ್ಲಿ ಶೇ 95ರಷ್ಟು ಸಮಯಪಾಲನೆ ನಿಖರತೆ ಕಾಯ್ದುಕೊಳ್ಳಬೇಕು. ತಡವಾಗಿ ನಿರ್ಗಮನ ಅಥವಾ ನಿಗದಿತ ವೇಳೆಗಿಂತಲೂ ಮೊದಲೇ ಅಂತಿಮ ನಿಲ್ದಾಣ ತಲುಪಿದರೆ ಭಾರಿ ದಂಡ ವಿಧಿಸಲಾಗುತ್ತದೆ.

ಖಾಸಗಿ ರೈಲ್ವೆ ಸೇವೆ ಒದಗಿಸುವವರಿಗೆ ರೈಲ್ವೆ ಇಲಾಖೆ ಬುಧವಾರ ಬಿಡುಗಡೆ ಮಾಡಿದ ಕರಡು ನಿಯಮಾವಳಿಗಳಲ್ಲಿ ಈ ಅಂಶದ ಪ್ರಸ್ತಾಪವಿದೆ. ಖಾಸಗಿ ರೈಲ್ವೆ ನಿರ್ವಾಹಕರು ವರ್ಷಪೂರ್ತಿ ಶೇ 95ರಷ್ಟು ನಿಖರತೆಯನ್ನು ಕಾಯ್ದುಕೊಳ್ಳುವುದು ಅಗತ್ಯ ಎಂದು ಸ್ಪಷ್ಟಪಡಿಸಲಾಗಿದೆ.

ಆದಾಯ ಕುರಿತಂತೆ ಸತ್ಯಕ್ಕೆ ದೂರವಾದ ಮಾಹಿತಿಯನ್ನು ನೀಡಿದಲ್ಲಿ ಅಥವಾ ಕಾರಣವಿಲ್ಲದೇ ರೈಲು ಸಂಚಾರ ರದ್ದು ಮಾಡಿದಲ್ಲಿ ದಂಡ ಪಾವತಿಸಬೇಕಾಗುತ್ತದೆ. 15 ನಿಮಿಷ ತಡವಾಗಿ ನಿಲ್ದಾಣಕ್ಕೆ ಬಂದಲ್ಲಿ ಅದನ್ನು ‘ವಿಳಂಬ’ ಎಂದು ಭಾವಿಸಲಾಗುತ್ತದೆ ಎಂದೂ ಕರಡಿನಲ್ಲಿ ತಿಳಿಸಲಾಗಿದೆ.

15 ನಿಮಿಷ ವಿಳಂಬವಾದ ಸಂದರ್ಭದಲ್ಲಿ 200 ಕಿ.ಮೀಗೆ ಸಮಾನವಾದ ಪ್ರಯಾಣವೆಚ್ಚವನ್ನು ರೈಲ್ವೆ ಇಲಾಖೆಗೆ ಭರಿಸಬೇಕಾಗುತ್ತದೆ. ಸದ್ಯ, ಖಾಸಗಿ ರೈಲ್ವೆ ನಿರ್ವಾಹಕ ಸಂಸ್ಥೆಗಳಿಗೆ ರೈಲ್ವೆ ಮೂಲಸೌಕರ್ಯಗಳ ಬಳಕೆಗಾಗಿ ಪ್ರತಿ ಕಿ.ಮೀಗೆ ₹ 512 ಪಾವತಿಸಬೇಕಿದೆ.

ಒಂದು ವೇಳೆ ರೈಲು ನಿಗದಿತ ನಿಲ್ದಾಣವನ್ನು 10 ನಿಮಿಷ ಕಾಲ ಮುಂದಾಗಿಯೇ ತಲುಪಿದಲ್ಲಿ ನಿರ್ವಾಹಕ ಸಂಸ್ಥೆಯು ರೈಲ್ವೆ ಇಲಾಖೆಗೆ 10 ಕಿ.ಮೀಗೆ ಅನ್ವಯಿಸುವಂತೆ ಪ್ರಯಾಣಶುಲ್ಕವಾಗಿ ದಂಡವಾಗಿ ಪಾವತಿಸಬೇಕಾಗುತ್ತದೆ.

ಒಂದು ವೇಳೆ ರೈಲ್ವೆ ಇಲಾಖೆಯ ಕಾರಣದಿಂದಲೇ ರೈಲು ಸೇವೆ ರದ್ದಾದರೆ ಖಾಸಗಿ ನಿರ್ವಾಹಕ ಸಂಸ್ಥೆಗಳಿಗೆ ಇಲಾಖೆಯೂ ಇದೇ ಪ್ರಮಾಣದಲ್ಲಿ ನಷ್ಟ ತುಂಬಿಕೊಡಬೇಕಾಗುತ್ತದೆ ಎಂದು ಕರಡು ಪ್ರತಿಯಲ್ಲಿ ತಿಳಿಸಲಾಗಿದೆ.

ಸಮಯಪಾಲನೆಯಲ್ಲಿ ನಿಖರತೆ ಕಾಪಾಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲಿಗೆ ಸಿಲುಕಿ ಜನ ಅಥವಾ ಜಾನುವಾರು ಮೃತಪಟ್ಟರೆ, ಕಾನೂನು ಪರಿಸ್ಥಿತಿ ಕೈಮೀರಿದರೆ, ಸಾರ್ವಜನಿಕ ಪ್ರತಿಭಟನೆ, ದುಷ್ಕೃತ್ಯ, ಅಪಘಾತ, ಕ್ರಾಸಿಂಗ್‌ಗಳಲ್ಲಿ ದಟ್ಟಣೆಯಿಂದ ನಿಗದಿತ ನಿಲ್ದಾಣಕ್ಕೆ ತಲುಪುವುದು ವಿಳಂಬವಾದರೆ ಆಗ ಯಾರೂ ದಂಡ ತೆರಬೇಕಾಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು