ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಗೆಲ್ಲಲು ಬಿಜೆಪಿಯಿಂದ ಧರ್ಮ, ಜಾತಿ, ನಕಲಿ ಫೋಟೊ ಬಳಕೆ: ಪ್ರಿಯಾಂಕಾ ಗಾಂಧಿ

ಉತ್ತರಪ್ರದೇಶ ವಿಧಾನಸಭಾ ಚುನಾವಣೆ
Last Updated 27 ನವೆಂಬರ್ 2021, 14:21 IST
ಅಕ್ಷರ ಗಾತ್ರ

ಲಖನೌ: ‘ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಧರ್ಮ, ಜಾತಿ, ಸುಳ್ಳು ಜಾಹೀರಾತುಗಳು ಮತ್ತು ನಕಲಿ ಫೋಟೋಗಳನ್ನು ಬಳಸುತ್ತಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಆರೋಪಿಸಿದ್ದಾರೆ.

ಬುಂದೇಲ್‌ಖಂಡ್ ಪ್ರದೇಶದ ಮಹೋಬಾ ಪಟ್ಟಣದಲ್ಲಿ ಕಾಂಗ್ರೆಸ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಬಿಜೆಪಿ ನಾಯಕರು ಸುಳ್ಳು ಭರವಸೆಗಳನ್ನು ನೀಡುತ್ತಾರೆ. ಅಂತೆಯೇ ಸುಳ್ಳು ಜಾಹೀರಾತುಗಳನ್ನು ಹಾಕುತ್ತಾರೆ. ತಮ್ಮ ಸರ್ಕಾರದ ಸಾಧನೆಯ ಚಿತ್ರಗಳನ್ನು ತೋರಲು ನಕಲಿ ಫೋಟೊಗಳನ್ನೂ ಬಳಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನೋಯಿಡಾದಲ್ಲಿನ ವಿಮಾನ ನಿಲ್ದಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದಾಗ ಅಲ್ಲಿನ ಚಿತ್ರದ ಬದಲು ಚೀನಾದ ವಿಮಾನ ನಿಲ್ದಾಣದ ಚಿತ್ರವೊಂದನ್ನು ಪ್ರದರ್ಶಿಸಲಾಗಿತ್ತು’ ಎಂದು ಟೀಕಿಸಿದರು.

‘ಚುನಾವಣೆಸಂದರ್ಭದಲ್ಲಿ ಜನರ ಮತಗಳನ್ನು ಸೆಳೆಯುವ ಉದ್ದೇಶದಿಂದ ಬಿಜೆಪಿನಾಯಕರು ಧರ್ಮ ಮತ್ತು ಜಾತಿಯ ವಿಷಯಗಳನ್ನು ಬಳಸುತ್ತಾರೆ. ರಾಜಕೀಯದಲ್ಲಿ ಧರ್ಮ ಮತ್ತು ಜಾತಿಗೆ ಪ್ರಾತಿನಿಧ್ಯ ಇರಬೇಕು. ಆದರೆ, ಚುನಾವಣೆಯ ಸಮಯದಲ್ಲಿ ಸರ್ಕಾರಗಳು ತನ್ನ ಸಾಧನೆಯ ಲೆಕ್ಕವನ್ನು ಕೊಡಬೇಕು’ ಎಂದು ಹೇಳಿದರು.

ಪ್ರಯಾಗ್‌ರಾಜ್‌ನಲ್ಲಿ ಈಚೆಗೆ ಪರಿಶಿಷ್ಟ ಜಾತಿಯ ಕುಟುಂಬದ ನಾಲ್ವರ ಭೀಕರ ಹತ್ಯೆ ಮತ್ತು ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿದ ಪ್ರಿಯಾಂಕಾ, ‘ಉತ್ತರಪ್ರದೇಶ ಸರ್ಕಾರವು ಸಮಾಜದ ದುರ್ಬಲ ವರ್ಗಗಳ ಸುರಕ್ಷತೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ’ ಎಂದು ಆರೋಪಿಸಿದರು.

‘ಬುಂದೇಲ್‌ಖಂಡದ ಲಲಿತಪುರ್‌ದಲ್ಲಿ ರಸಗೊಬ್ಬರ ವಿತರಣಾ ಕೇಂದ್ರದ ಮುಂದೆ ಗೊಬ್ಬರ ಖರೀದಿಸಲು ಸರತಿಯಲ್ಲಿ ನಿಂತಿದ್ದ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಜೆಪಿಯ ಆಡಳಿತದಲ್ಲಿ ರೈತರು ಅತಿಹೆಚ್ಚು ನಷ್ಟ ಅನುಭವಿಸಿದ್ದಾರೆ. ₹ 8 ಸಾವಿರ ಕೋಟಿಗೆ ಖರೀದಿಸಿದ ವಿಮಾನದಲ್ಲಿ ಪ್ರಧಾನಿಯವರು ಓಡಾಡಬಹುದು. ಆದರೆ, ಸಾಲದ ಸುಳಿಯಲ್ಲಿ ಸಿಲುಕಿರುವ ರೈತರಿಗೆ ನೆರವು ನೀಡಲು ಅವರ ಸರ್ಕಾರದ ಬಳಿ ಹಣವಿಲ್ಲ. ಬಿಜೆಪಿ ಆಡಳಿತದಲ್ಲಿ ರೈತರ ಆದಾಯ ಏರಿಕೆಯಾಗಿಲ್ಲ’ ಎಂದು ಪ್ರಿಯಾಂಕಾ ದೂರಿದರು.

ಮಹಿಳಾ ಮತದಾರರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಪ್ರಿಯಾಂಕಾ, ‘ಮಹಿಳೆಯರು ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT