ಭೋಪಾಲ್: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅವರ ಪಕ್ಷದ ಇತರರಿಗೆ ರೈತರು ಮತ್ತು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಯಾವುದೇ ಹಕ್ಕಿಲ್ಲ ಎಂದು
ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದಲ್ಲಿ ರೈತರು ಸೇರಿದಂತ 8 ಮಂದಿ ಮೃತಪಟ್ಟಿದ್ದು, ಈ ಬಗ್ಗೆ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ಟೀಕೆಗೈಯುತ್ತಿದ್ದಾರೆ.
ಈ ಬಗ್ಗೆ ಹಿಂದಿಯಲ್ಲಿ ಸರಣಿ ಟ್ವೀಟ್ ಮಾಡಿರುವ ಉಮಾ ಭಾರತಿ, ‘ಉತ್ತರ ಪ್ರದೇಶದ ಹಿಂಸಾಚಾರದ ಬಗ್ಗೆ ಮಾತನಾಡುವ ಹಕ್ಕನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪ್ರಿಯಾಂಕಾ ವಾದ್ರಾ ಮತ್ತು ಇತರ ಕಾಂಗ್ರೆಸ್ ನಾಯಕರು ಹೊಂದಿಲ್ಲ’ಎಂದು ಹೇಳಿದ್ದಾರೆ. ‘ದೇಶದಲ್ಲಿ ಕೃಷಿ ಮತ್ತು ರೈತರು ಹಿಂದುಳಿದಿರುವುದಕ್ಕೆ ನೆಹರು ಕಾರಣ. ಸ್ವಾತಂತ್ರ್ಯ ಬಂದ ನಂತರ ಕೃಷಿಯನ್ನು ದೇಶದ ಮುಖ್ಯ ಆರ್ಥಿಕ ನೆಲೆಯೆಂದು ಪರಿಗಣಿಸುವ ಮಹಾತ್ಮ ಗಾಂಧೀಜಿಯವರ ಕನಸು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರಿಂದ ನಾಶವಾಯಿತು. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್, ಪ್ರಜಾಪ್ರಭುತ್ವ ಪದವನ್ನು ಉಚ್ಚರಿಸುವ ಹಕ್ಕನ್ನು ಕಳೆದುಕೊಂಡಿದೆ. ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು 10,000 ಸಿಖ್ಖರನ್ನು ಸಜೀವ ದಹನ ಮಾಡಿದರು. ಹಾಗಾಗಿ, ಅಹಿಂಸೆ ಎಂಬ ಪದವು ಕಾಂಗ್ರೆಸ್‌ಗೆ ಸರಿಹೊಂದುವುದಿಲ್ಲ’ ಎಂದು ಉಮಾ ಭಾರತಿ ಕಿಡಿಕಾರಿದ್ದಾರೆ.
ರೈತರ ಸಮಸ್ಯೆಗಳನ್ನು ಪರಿಹರಿಸಲು ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಮತ್ತು ಕೇಂದ್ರ ಸರ್ಕಾರದೊಂದಿಗೆ ಸಹಕರಿಸಬೇಕು ಎಂಬುದು ಕಾಂಗ್ರೆಸ್ ನಾಯಕರಿಗೆ ನನ್ನ ಸಲಹೆಯಾಗಿದೆ ಎಂದು ಉಮಾ ಭಾರತಿ ಹೇಳಿದ್ಧಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.