ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಫ್ತಿ ಮೊಹಮ್ಮದ್‌ರ ಸಮಾಧಿ ಮೇಲೆ ತನಿಖಾ ಸಂಸ್ಥೆಗಳ ಲೆಕ್ಕ ಪರಿಶೋಧನೆ: ಮೆಹಬೂಬಾ

Last Updated 3 ಜನವರಿ 2021, 11:16 IST
ಅಕ್ಷರ ಗಾತ್ರ

ಶ್ರೀನಗರ: ಭಯೋತ್ಪಾದನಾ ಸಂಘಟನೆಗಳಿಗೆ ಪಿಡಿಪಿ ಹಣ ಸರಬರಾಜು ಮಾಡುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಎನ್‌ಐಎ ಸೇರಿದಂತೆ ಇತರ ತನಿಖಾ ಸಂಸ್ಥೆಗಳು ನಡೆಸುತ್ತಿರುವ ತನಿಖೆ ಕುರಿತು ಪ್ರತಿಕ್ರಿಯಿಸಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ‘ಅವರು ಒಂದೇ ಒಂದು ಪ್ರಕರಣವನ್ನು ಸಾಬೀತುಪಡಿಸಲಿ. ನಾನು ಅದರ ಪರಿಣಾಮಗಳನ್ನು ಎದುರಿಸಲು ಸಿದ್ಧಳಿದ್ದೇನೆ’ ಎಂದಿದ್ದಾರೆ.

‘ನನ್ನ ತಂದೆ ಮುಫ್ತಿ ಮೊಹಮ್ಮದ್ ಸಯೀದ್ ಅವರ ಸಮಾಧಿ ಮೇಲೆ ತನಿಖಾ ಸಂಸ್ಥೆಗಳು ಲೆಕ್ಕ ಪರಿಶೋಧನೆ (ಅಡಿಟ್) ನಡೆಸುತ್ತಿರುವುದು ಅಸಹ್ಯಕರವಾಗಿದೆ. ತನಿಖಾ ಸಂಸ್ಥೆಗಳು ಇನ್ನೂ ಎಷ್ಟು ಕೆಳಮಟ್ಟಕ್ಕೆ ಇಳಿಯಲಿವೆ’ ಎಂದೂ ಅವರು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪಿಡಿಪಿ ಯುವ ಘಟಕದ ಅಧ್ಯಕ್ಷ ವಹೀದ್ ಪರ‍್ರಾ ಅವರನ್ನು ಎನ್‌ಐಎ ಬಂಧಿಸಿದ ನಂತರ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಮುಫ್ತಿ ಮೆಹಬೂಬಾ, ‘ತನಿಖಾ ಸಂಸ್ಥೆಗಳು ಎರಡು ವರ್ಷಗಳಿಂದ ಸರ್ಕಾರಿ ಕಡತಗಳು ಮತ್ತು ನನ್ನ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿವೆ. ಆದರೂ ಇದುವರೆಗೆ ಅವರಿಗೆ ಏನೂ ದೊರೆತಿಲ್ಲ’ ಎಂದು ಹೇಳಿದ್ದಾರೆ.

‘ನನ್ನ ವಿರುದ್ಧದ ಭ್ರಷ್ಟಾಚಾರದ ಆರೋಪ ಸಾಬೀತುಪಡಿಸುವಲ್ಲಿ ತನಿಖಾ ಸಂಸ್ಥೆಗಳು ವಿಫಲವಾದ ನಂತರ, ಭಯೋತ್ಪಾದನಾ ಸಂಘಟನೆಗಳ ಜೊತೆಗೆ ನನ್ನ ನಂಟು ಬೆಸೆಯುವ ಮೂಲಕ ಅವರು ನನ್ನನ್ನು ನಿಂದಿಸುವ ಇತರ ಮಾರ್ಗಗಳನ್ನು ಅವಲಂಬಿಸಿವೆ. ಹಣಕಾಸು ದುರುಪಯೋಗ ಪಡಿಸಿಕೊಂಡ ನನ್ನ ವಿರುದ್ಧದ ಒಂದೇ ಒಂದು ಪ್ರಕರಣವನ್ನು ಅವರು (ತನಿಖಾ ಸಂಸ್ಥೆಗಳು) ದೃಢಪಡಿಸಲಿ. ನಾನು ಅದರ ಪರಿಣಾಮಗಳನ್ನು ಎದುರಿಸಲು ಸಿದ್ಧಳಿದ್ದೇನೆ’ ಎಂದು ಮುಫ್ತಿ ಮೆಹಬೂಬಾ ಸವಾಲೆಸಿದಿದ್ದಾರೆ.

‘ವಹೀದ್ ಪರ‍್ರಾ ಪ್ರಜಾಪ್ರಭುತ್ವ ಪರವಾಗಿರುವ ದೊಡ್ಡ ವಕೀಲ. ಸಾವಿರಾರು ಯುವಕರು ಮುಖ್ಯವಾಹಿನಿಗೆ ಬರುವಂತೆ ಅವರು ಪ್ರೇರೇಪಿಸಿದ್ದಾರೆ. ಅವರ ವಿರುದ್ಧದ ಆರೋಪಗಳೆಲ್ಲವೂ ಕಾಲ್ಪನಿಕವಾಗಿರುವಂಥವು’ ಎಂದು ಮೆಹಬೂಬಾ ಹೇಳಿದ್ದಾರೆ.

ಮೆಹಬೂಬಾ ಅವರ ಹೇಳಿಕೆಗಳಿಗೆ ಎನ್ಐಎ, ಜಾರಿ ನಿರ್ದೇಶನಾಲಯ (ಇ.ಡಿ) ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮೆಹಬೂಬಾ ಅವರಿಗೆ ಬೆಂಬಲ ಕೋರಿ, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರರೊಂದಿಗೆ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ವಹೀದ್ ಅವರನ್ನು ಎನ್ಐಎ ಬಂಧಿಸಿತ್ತು.

‘ಶ್ರೀನಗರದಿಂದ ಜಮ್ಮುವಿಗೆ ಭಯೋತ್ಪಾದಕರನ್ನು ಕರೆದೊಯ್ಯುತ್ತಿರುವಾಗಲೇ ಬಂಧನಕ್ಕೊಳಗಾದ ಜಮ್ಮು–ಕಾಶ್ಮೀರದ ಉಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವಿಂದರ್ ಸಿಂಗ್ ಮೂಲಕ ವಹೀದ್, ಭಯೋತ್ಪಾದಕರಿಗೆ ಹಣ ಪಾವತಿಸಿದ್ದಾನೆ’ ಎಂದು ಎನ್‌ಐಎ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT