ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನಾನಿರತ ರೈತರಿಂದ 24 ಗಂಟೆ ಕೆಎಂಪಿ-ಕೆಜಿಪಿ ಎಕ್ಸ್‌ಪ್ರೆಸ್ ಹೆದ್ದಾರಿ ಬಂದ್

Last Updated 9 ಏಪ್ರಿಲ್ 2021, 16:50 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಶನಿವಾರ ಬೆಳಿಗ್ಗೆಯಿಂದ 24 ಗಂಟೆಗಳ ಕಾಲ ಪ್ರಮುಖ ಕುಂಡಲಿ-ಮಾನೇಸರ್-ಪಾಲ್ವಾಲ್ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಬಂದ್ ಮಾಡುವುದಾಗಿ ತಿಳಿಸಿದ್ದಾರೆ.

'ಸರ್ಕಾರಕ್ಕೆ ಎಚ್ಚರಿಕೆ ನೀಡುವ ಸಲುವಾಗಿ ನಾಳೆ, ಏಪ್ರಿಲ್ 10 ರಂದು, ಕೆಎಂಪಿ-ಕೆಜಿಪಿ ಹೆದ್ದಾರಿಯನ್ನು 24 ಗಂಟೆಗಳ ಕಾಲ (ಏಪ್ರಿಲ್ 10ರ ಬೆಳಿಗ್ಗೆ 8 ರಿಂದ ಏಪ್ರಿಲ್ 11ರ 8 ಗಂಟೆವರೆಗೆ) ಬಂದ್ ಮಾಡಲಾಗುವುದು' ಎಂದು ಪ್ರತಿಭಟನಾ ನಿರತ ರೈತಸಂಘಟನೆಗಳ ಒಕ್ಕೂಟ ಸಂಯುಕ್ತ್ ಕಿಸಾನ್ ಮೋರ್ಚಾ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

ಕೆಎಂಪಿ ಎಂದರೆ ಕುಂಡಲಿ-ಮಾನೇಸರ್-ಪಲ್ವಾಲ್ ಹೆದ್ದಾರಿ ಮತ್ತು ಕೆಜಿಪಿ ಎಂದರೆ ಕುಂಡ್ಲಿ-ಗಾಜಿಯಾಬಾದ್-ಪಾಲ್ವಾಲ್ ಹೆದ್ದಾರಿ ಆಗಿದೆ.

'ಏಪ್ರಿಲ್ 13 ರಂದು, ಖಾಲ್ಸಾ ಪಂಥದ ಅಡಿಪಾಯದ ದಿನವನ್ನು ದೆಹಲಿಯ ಗಡಿಯಲ್ಲಿ ಆಚರಿಸಲಾಗುವುದು ಮತ್ತು ಅದೇ ಸಮಯದಲ್ಲಿ, ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ವಾರ್ಷಿಕೋತ್ಸವದಂದು ಹುತಾತ್ಮರ ಗೌರವಾರ್ಥ ಕಾರ್ಯಕ್ರಮಗಳು ನಡೆಯಲಿವೆ'.

ಏಪ್ರಿಲ್ 14ರಂದು 'ಸಂವಿಧಾನ ಉಳಿಸಿ ದಿನ' ಮತ್ತು 'ಕಿಸಾನ್ ಬಹುಜನ ಏಕತೆ ದಿನ' ವನ್ನು ಆಚರಿಸಲಾಗುವುದು. ಈ ದಿನದಂದು ಸಂಯುಕ್ತ್ ಕಿಸಾನ್ ಮೋರ್ಚಾದ ಎಲ್ಲಾ ಕಾರ್ಯಕ್ರಮಗಳನ್ನು ಬಹುಜನ ಸಮಾಜದ ಚಳವಳಿಗಾರರು ನಿರ್ವಹಿಸಲಿದ್ದಾರೆ ಮತ್ತು ಅಂದಿನ ಭಾಷಣಕಾರರೆಲ್ಲರೂ ಸಹ ಬಹುಜನ ಸಮಾಜದವರಾಗಿರುತ್ತಾರೆ' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

'ದ್ವೇಷ ಮತ್ತು ವಿಭಜನೆಯನ್ನು' ಹರಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಶಾಂತಿಯುತ ಪ್ರತಿಭಟನೆಯನ್ನು ಮುಂದುವರೆಸಬೇಕೆಂದು ಎಸ್‌ಕೆಎಂ ಎಲ್ಲಾ ದಲಿತ-ಬಹುಜನರು ಮತ್ತು ರೈತರನ್ನು ಕೋರಿದೆ.

'ಅದೇ ದಿನದಂದು (ಏಪ್ರಿಲ್ 14) ಹರಿಯಾಣದ ಉಪಮುಖ್ಯಮಂತ್ರಿ ಉದ್ದೇಶಪೂರ್ವಕವಾಗಿ ಕೈಥಾಲ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. 'ಗರಿಷ್ಠ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಶಾಂತಿಯಿಂದ ಪ್ರತಿಭಟನೆಯನ್ನು ನಡೆಸಲು ರೈತರು ಮತ್ತು ದಲಿತ-ಬಹುಜನರಿಗೆ ಮನವಿ ಮಾಡುತ್ತೇವೆ' ಎಂದು ಹೇಳಿಕೆಯಲ್ಲಿ ತಿಳಿಸಿದೆ.

ರೈತ ಚಳುವಳಿಯಲ್ಲಿ 'ಸ್ಥಳೀಯ ಜನರ ಭಾಗವಹಿಸುವಿಕೆ ಮತ್ತು ಸಮರ್ಪಣೆಯನ್ನು' ಗುರುತಿಸಲು ಮತ್ತು ಗೌರವಿಸಲು ರೈತರು ಕೂಡ ಏಪ್ರಿಲ್ 18 ರಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ. 'ಸ್ಥಳೀಯ ಜನರನ್ನು ವೇದಿಕೆಗಳಲ್ಲಿ ಗೌರವಿಸಲಾಗುವುದು ಮತ್ತು ವೇದಿಕೆಯ ನಿರ್ವಹಣೆಯ ಜವಾಬ್ದಾರಿಯನ್ನು ಸ್ಥಳೀಯ ಜನರಿಗೆ ನೀಡಲಾಗುವುದು' ಎಂದು ಹೇಳಿಕೆಯಲ್ಲಿ ತಿಳಿಸಿದೆ.

ದೆಹಲಿಯ ಅನೇಕ ಗಡಿಗಳಲ್ಲಿ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ದೇಶದಾದ್ಯಂತದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆಯಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಚಳುವಳಿಯು 150 ದಿನಗಳನ್ನು ಪೂರೈಸಿದಾಗ ರೈತರು ಏಪ್ರಿಲ್ 24 ರಿಂದ ವಾರ ಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT