ಸಚಿವ ಕೆ.ಟಿ. ಜಲೀಲ್ ವಿರುದ್ಧ ಕೇರಳದಲ್ಲಿ ಮುಂದುವರಿದ ಪ್ರತಿಭಟನೆ: ಇಬ್ಬರ ಬಂಧನ

ಕೊಲ್ಲಂ (ಕೇರಳ): ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ರಾಜೀನಾಮೆಗೆ ಆಗ್ರಹಿಸಿ ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಸಚಿವರ ಬೆಂಗಾವಲು ಪಡೆಯ ವಾಹನಗಳನ್ನು ತಡೆಯಲು ಯತ್ನಿಸಿದ ಆರೋಪದಡಿ ಇಬ್ಬರು ಯುವಕರನ್ನು ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.
ಯುವ ಮೋರ್ಚಾದ ಪ್ರವೀಣ್ (24) ಹಾಗೂ ವಿಪಿನ್ ರಾಜಾ (25) ಬಂಧಿತರು.
ಜಲೀಲ್ ಹಾಗೂ ಅವರ ಬೆಂಗಾವಲು ಪಡೆಯವರು ಪರಿಪಲ್ಲಿ ಮೂಲಕ ಹಾದುಹೋಗುವಾಗ ಕಾರಿನಲ್ಲಿ ಬಂದ ಪ್ರವೀಣ್ ಮತ್ತು ವಿಪಿನ್, ಸಚಿವರ ಬೆಂಗಾವಲು ಪಡೆಯ ವಾಹನವನ್ನು ತಡೆಯಲು ಮುಂದಾಗಿದ್ದರು.
‘ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 143, 147, 353ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕೃತ್ಯದಲ್ಲಿ ಇನ್ನಷ್ಟು ಜನ ಭಾಗಿಯಾಗಿರುವ ಸಾಧ್ಯತೆ ಇದ್ದು ಆ ಕುರಿತು ತನಿಖೆ ನಡೆಸುತ್ತಿದ್ದೇವೆ’ ಎಂದು ಪರಿಪಲ್ಲಿ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದ್ದಾರೆ.
‘ಕಾರಿನಲ್ಲಿ ಬಂದ ಆರೋಪಿಗಳು ವೇಗವಾಗಿ ಸಾಗುತ್ತಿದ್ದ ಬೆಂಗಾವಲು ಪಡೆಯ ವಾಹನಗಳನ್ನು ತಡೆಯಲು ಮುಂದಾಗಿರುವುದು ಸರಿಯಲ್ಲ. ಇದರಿಂದ ಆಗಲಿದ್ದ ಅಪಾಯ ಎಂತಹದ್ದು ಎಂಬುದು ಅವರಿಗೆ ತಿಳಿದಂತಿಲ್ಲ. ಇದು ಪ್ರತಿಭಟನೆ ಮಾಡುವ ರೀತಿಯಲ್ಲ. ಇದು ಸಚಿವರ ಜೀವಕ್ಕೆ ಅಪಾಯ ತಂದೊಡ್ಡುವ ಕುತಂತ್ರದ ಭಾಗವಾಗಿರುವಂತಿದೆ. ಇದರಿಂದ ಸಚಿವರು ತಪ್ಪಿಸಿಕೊಂಡಿದ್ದಾರೆ’ ಎಂದು ಮೀನುಗಾರಿಕೆ ಖಾತೆ ಸಚಿವೆ ಮರ್ಸಿಕುಟ್ಟಿ ಅಮ್ಮಾ ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.