ಮಂಗಳವಾರ, ನವೆಂಬರ್ 29, 2022
29 °C
8 ಇಲಾಖೆಗಳ 300 ಪ್ರಶಸ್ತಿಗಳನ್ನು ನಿಲ್ಲಿಸಲು ಕೇಂದ್ರ ಗೃಹ ಸಚಿವಾಲಯ ಸೂಚನೆ

ನೊಬೆಲ್ ಮಾದರಿಯಲ್ಲಿ ‘ವಿಜ್ಞಾನ ರತ್ನ’ ಪ್ರಶಸ್ತಿಗೆ ಸಲಹೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಜ್ಞಾನ, ಆರೋಗ್ಯ ಇಲಾಖೆ ಸೇರಿದಂತೆ ಎಂಟು ಇಲಾಖೆಗಳು ನೀಡುತ್ತಿರುವ ಸುಮಾರು 300 ಪ್ರಶಸ್ತಿಗಳನ್ನು ರದ್ದುಗೊಳಿಸಿ ‘ವಿಜ್ಞಾನ ರತ್ನ’ ದಂತಹ ಪ್ರಶಸ್ತಿ ಸ್ಥಾಪಿಸುವಂತೆ ಕೇಂದ್ರ ಗೃಹ ಸಚಿವಾಲಯವು ಸೂಚಿಸಿದೆ. 

ವಿಜ್ಞಾನ ಮತ್ತು ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ ಅವರು, ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರೊಂದಿಗೆ ಸಮಾಲೋಚಿಸಿ ನೊಬೆಲ್ ಪ್ರಶಸ್ತಿ ಮಾದರಿಯಲ್ಲಿ ವಿಜ್ಞಾನಿಗಳಿಗೆ ‘ವಿಜ್ಞಾನ ರತ್ನ’ದಂತಹ ಪ್ರಶಸ್ತಿ ಸ್ಥಾಪಿಸುವಂತೆ ಸಲಹೆ ನೀಡಿದ್ದಾರೆ.

ಅರ್ಹರಿಗೆ ಪ್ರಶಸ್ತಿಗಳನ್ನು ನೀಡುವಂತೆ ಸೂಚಿಸಿರುವ ಸಚಿವಾಲಯವು, ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ನಿರ್ದೇಶನ ನೀಡಿರುವ ಸೂಚನೆಗಳನ್ನು ಪಾಲಿಸಲಿದೆ ಎಂದೂ ಹೇಳಿದೆ. 

ಕೌನ್ಸಿಲ್ ಆಫ್‌ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್‌ (ಸಿಎಸ್‌ಐಆರ್‌)ಗೆ ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿ ನೀಡುವುದನ್ನು ಮುಂದುವರಿಸಲು ಸೂಚಿಸಿದ್ದಾರೆ. ಆದರೆ, ಮಾಸಿಕವಾಗಿ ನೀಡುವ ಗೌರವಧನದ ನಿಯಮಗಳನ್ನು 15 ವರ್ಷಗಳಿಗೆ ಮಿತಿಗೊಳಿಸುವಂತೆಯೂ ಭಲ್ಲಾ ಸೂಚಿಸಿದ್ದಾರೆ. 

200ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ನೀಡುವ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಎಲ್ಲಾ ಖಾಸಗಿ ದತ್ತಿ, ಉಪನ್ಯಾಸ, ವಿದ್ಯಾರ್ಥಿವೇತನ, ಫೆಲೋಶಿಪ್ ಮತ್ತು ಆಂತರಿಕ ಪ್ರಶಸ್ತಿಗಳನ್ನು ನಿಲ್ಲಿಸುವಂತೆಯೂ ಸಚಿವಾಲಯವು ಹೇಳಿದೆ. ಸೂಕ್ತ ಗೌರವಧನದೊಂದಿಗೆ ವಿದ್ಯಾರ್ಥಿವೇತನ, ಫೆಲೋಶಿಪ್‌ಗಾಗಿ ಹೊಸಯೋಜನೆಯನ್ನು ಪ್ರಾರಂಭಿಸುವಂತೆಯೂ ಸಲಹೆ ನೀಡಿದೆ. 

ಪ್ರತಿವರ್ಷ 51 ದಾದಿಯರಿಗೆ ನೀಡಲಾಗುವ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳ ಸಂಖ್ಯೆಗೆ ಮಿತಿಯೊಡ್ಡಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಅಂತೆಯೇ ವೈದ್ಯರ ದಿನದಂದು ನೀಡಲಾಗುವ ಬಿ.ಸಿ. ರಾಯ್ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ ವೈದ್ಯಕೀಯ ಮಂಡಳಿಯು ನೀಡುವ ಮೂರು ಪ್ರಶಸ್ತಿಗಳನ್ನು ಮರುಪರಿಶೀಲಿಸಿ, ಉನ್ನತ ಮಟ್ಟದಲ್ಲಿ ಹೊಸ ಪ್ರಶಸ್ತಿಯನ್ನು ಸ್ಥಾಪಿಸುವಂತೆಯೂ ಸಲಹೆ ನೀಡಲಾಗಿದೆ.

ಆರೋಗ್ಯ ಸಂಶೋಧನಾ ಮಂಡಳಿಯ 32 ದತ್ತಿ ಪ್ರಶಸ್ತಿಗಳು ಸೇರಿದಂತೆ 37 ಪ್ರಶಸ್ತಿಗಳನ್ನು ನಿಲ್ಲಿಸಲು ಸೂಚಿಸಲಾಗಿದೆ. ಕಲ್ಕತ್ತ ರಾಷ್ಟ್ರೀಯ ವೈದ್ಯಕೀಯ ಕಾಲೇಜಿನ (ಸಿಎನ್‌ಎಂಸಿ) ಅಲ್ಪಾವಧಿಯ ಸ್ಟೂಡೆಂಟ್‌ಶಿಪ್ ಎಕ್ಸಲೆನ್ಸಿ ಪ್ರಶಸ್ತಿಯನ್ನು ಸಂಶೋಧನಾ ಅನುದಾನವನ್ನಾಗಿ ಪರಿವರ್ತಿಸುವಂತೆ ಸೂಚಿಸಿದೆ. 

ಭೂ‌ವಿಜ್ಞಾನ ಸಚಿವಾಲಯ, ಬಾಹ್ಯಾಕಾಶ ಇಲಾಖೆ ಮತ್ತು ಪರಮಾಣು ಶಕ್ತಿ ಇಲಾಖೆಗಳಿಗೆ ಪ್ರಸ್ತುತ  ಅಸ್ತಿತ್ವದಲ್ಲಿರುವ ಪ್ರಶಸ್ತಿಗಳನ್ನು ರದ್ದುಗೊಳಿಸಿ ಉನ್ನತ ಮಟ್ಟದ ಪ್ರಶಸ್ತಿಗಳನ್ನು ಸ್ಥಾಪಿಸುವಂತೆಯೂ ಸೂಚಿಸಲಾಗಿದೆ. 

ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಅವರ ಕಾರ್ಯಾಲಯದಲ್ಲಿ ಪರಿಶೀಲನಾ ಸಭೆ ನಡೆಸುವುದಾಗಿಯೂ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು