ಮಂಗಳವಾರ, ನವೆಂಬರ್ 24, 2020
26 °C

ಪಂಜಾಬ್‌ನಲ್ಲಿ ಪ್ರತಿಭಟನೆ; ರೈಲ್ವೆ ಇಲಾಖೆಗೆ ₹1200 ಕೋಟಿ ನಷ್ಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್‌ನಲ್ಲಿ ನಡೆಸಿದ ಪ್ರತಿಭಟನೆಯಿಂದಾಗಿ ಇಲ್ಲಿಯವರೆಗೆ ರೈಲ್ವೆ ಇಲಾಖೆಗೆ ಅಂದಾಜು ₹1200 ಕೋಟಿ ನಷ್ಟವಾಗಿದ್ದು, ರಾಜ್ಯದಾದ್ಯಂತ ಇನ್ನೂ 32 ಸ್ಥಳಗಳಲ್ಲಿ ರೈಲ್ವೆ ಹಳಿಗಳ ಮೇಲೆ ಪ್ರತಿಭಟನೆಗಳು ಮುಂದುವರಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸರಕು ಸಾಗಣೆದಾರರು ನೀಡಿದ ಮಾಹಿತಿ ಪ್ರಕಾರ, ಪ್ರತಿಭಟನೆಯಿಂದ ಉಂಟಾದ ಅಡೆತಡೆಗಳಿಂದಾಗಿ ಇಲ್ಲಿವರೆಗೂ ಪ್ರಮುಖ ಸರಕುಗಳನ್ನು ಹೊತ್ತ 2225ಕ್ಕೂ ಹೆಚ್ಚು ವಾಹನಗಳು ಸಾಗಾಟ ನಡೆಸಿಲ್ಲ. 1350 ವಾಹನಗಳ ಸಾಗಾಟವನ್ನು ಬಲವಂತವಾಗಿ ರದ್ದು ಮಾಡಲಾಗಿದೆ ಅಥವಾ ಬೇರೆ ಕಡೆಗೆ ಹೋಗುವಂತೆ ಕಳುಹಿಸಲಾಗಿದೆ.

ರೈಲ್ವೆ ಪ್ಲಾಟ್‌ಫಾರಂ ಮತ್ತು ಹಳಿಗಳ ಮೇಲೆ ಪ್ರತಿಭಟನೆ ಮುಂದುವರಿದಿರುವುದರಿಂದ ಈಗಾಗಲೇ ₹1200 ಕೋಟಿ ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ. ರಾಜ್ಯದ ಜಂಡಿಯಾಲ, ನಭಾ, ತಲ್ವಾಂಡಿ ಸಾಬೊ ಮತ್ತು ಬಟಿಂಡಾ ಸೇರಿದಂತೆ ಕೆಲವು ಕಡೆಗಳಲ್ಲಿ ಇನ್ನೂ ರೈಲು ತಡೆ ಮುಂದುವರಿದಿದೆ. ಹೀಗಾಗಿ ಪ್ರಯಾಣಿಕರ ಸುರಕ್ಷತೆ ಮತ್ತು ಕಾರ್ಯಾಚರಣೆ  ದೃಷ್ಟಿಯಿಂದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ‘ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಈ ಪ್ರತಿಭಟನೆಗಳಿಂದ ಕೃಷಿ, ಕೈಗಾರಿಕೆ ಮತ್ತು ಮೂಲ ಸೌಕರ್ಯ ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ‘ ಎಂದು ಅವರು ವಿವರಿಸಿದ್ದಾರೆ.

ಈ ಹಿಂದೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಪಂಜಾಬ್ ಮುಖ್ಯಮಂತ್ರಿಗೆ ಪತ್ರ ಬರೆದು ರೈಲು ಸಂಚಾರವನ್ನು ಪುನರಾರಂಭಿಸುವಂತೆ ತಿಳಿಸಿದ್ದರು. ರಾಜ್ಯದಲ್ಲಿ ರೈಲ್ವೆ ಹಳಿಗಳ ಮತ್ತು ಚಾಲನಾ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸುವಂತೆ ಅವರು ಕೇಳಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು