ಸೋಮವಾರ, ಆಗಸ್ಟ್ 8, 2022
23 °C

ವಾಯುಪಡೆಗೆ ರಫೇಲ್‌: ಅಧಿಕೃತ ಸೇರ್ಪಡೆಗೆ ಕ್ಷಣಗಣನೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ರಫೇಲ್‌ ಯುದ್ಧ ವಿಮಾನ

ನವದೆಹಲಿ: ಫ್ರಾನ್ಸ್‌ನಿಂದ ಭಾರತದ ಅಂಬಾಲ ವಾಯುನೆಲೆಗೆ ಇತ್ತೀಚೆಗೆ ಬಂದಿಳಿದಿರುವ ಐದು ರಫೇಲ್‌ ಯುದ್ಧ ವಿಮಾನಗಳು ಗುರುವಾರ (ಸೆ.10) ಬೆಳಿಗ್ಗೆ 10 ಗಂಟೆಗೆ ಭಾರತೀಯ ವಾಯುಪಡೆಗೆ(ಐಎಎಫ್‌) ಅಧಿಕೃತವಾಗಿ ಸೇರ್ಪಡೆಯಾಗಲಿವೆ.

ರಫೇಲ್‌ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯ 17 ಸ್ಕ್ವಾಡ್ರನ್‌ 'ಗೋಲ್ಡನ್‌ ಆರೋಸ್‌'ನ ಭಾಗವಾಗಲಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಟ್ವೀಟಿಸಿದ್ದಾರೆ.

ಅಂಬಾಲ ವಾಯುನೆಲೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಫ್ರಾನ್ಸ್‌ನ ರಕ್ಷಣಾ ಸಚಿವೆ ಫ್ಲೋರೆನ್ಸ್‌ ಪಾರ್ಲಿ, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌, ವಾಯುಪಡೆ ಮುಖ್ಯಸ್ಥ ಮಾರ್ಶಲ್‌ ಆರ್‌ಕೆಎಸ್‌ ಭದೌರಿಯಾ ಹಾಗೂ ರಕ್ಷಣಾ ಕಾರ್ಯದರ್ಶಿ ಅಜಯ್‌ ಕುಮಾರ್‌ ಭಾಗಿಯಾಗಲಿದ್ದಾರೆ.

ಸರ್ವ ಧರ್ಮ ಪೂಜೆ, ರಫೇಲ್‌, ತೇಜಸ್‌ ಹಾಗೂ ಸಾರಂಗ್‌ ತಂಡಗಳಿಂದ ವೈಮಾನಿಕ ಪ್ರದರ್ಶನ ನಡೆಯಲಿದೆ ಎಂದು ವಾಯುಪಡೆಯ ವಕ್ತಾರರಾದ ವಿಂಗ್‌ ಕಮಾಂಡರ್‌ ಇಂದ್ರಾಣಿಲ್‌ ನಂದಿ ತಿಳಿಸಿದ್ದಾರೆ. ರಫೇಲ್‌ ಅಧಿಕೃತ ಸೇರ್ಪಡೆಗೂ ಮುನ್ನ ಸಾಂಪ್ರದಾಯಿಕವಾದ ಜಲ ಫಿರಂಗಿಯ ನಮನ ಸಲ್ಲಿಸಲಾಗುತ್ತದೆ ಎಂದಿದ್ದಾರೆ.

₹59,000 ಕೋಟಿ ವೆಚ್ಚದಲ್ಲಿ ಭಾರತವು ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುತ್ತಿದ್ದು, ಈ ಪೈಕಿ 10 ಯುದ್ಧ ವಿಮಾನಗಳನ್ನು ಡಾಸೊ‌ ಏವಿಯೇಷನ್‌ ಕಂಪನಿ ಹಸ್ತಾಂತರಿಸಿದೆ. ಈ ಪೈಕಿ ಐದು ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯ ಪೈಲೆಟ್‌ಗಳ ತರಬೇತಿಗಾಗಿ ಫ್ರಾನ್ಸ್‌ನಲ್ಲೇ ಇದ್ದು, ಉಳಿದ ಐದು ಯುದ್ಧ ವಿಮಾನಗಳು ಜುಲೈ 29ರಂದು ಭಾರತಕ್ಕೆ ಬಂದಿಳಿದಿದ್ದವು. ನವೆಂಬರ್‌ನಲ್ಲಿ ಮತ್ತೆ 4–5 ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ. 2021ರೊಳಗೆ 36 ಯುದ್ಧ ವಿಮಾನಗಳು ಭಾರತಕ್ಕೆ ಹಸ್ತಾಂತರವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು