ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಗಾಸಸ್ ಗೂಢಚಾರಿಕೆ| ಮೋದಿ, ಶಾ ಎಸಗಿದ್ದು ದೇಶದ್ರೋಹ: ಕಾಂಗ್ರೆಸ್‌ ಆರೋಪ

ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆಗೆ ಒತ್ತಾಯ
Last Updated 23 ಜುಲೈ 2021, 16:30 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ದೇಶದ ವಿರುದ್ಧ, ದೇಶದ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಮತ್ತು ಪ್ರಜಾಪ್ರಭುತ್ವದ ವಿರುದ್ಧ ಪೆಗಾಸಸ್ ಕಣ್ಗಾವಲು ತಂತ್ರಾಂಶವನ್ನು ಬಳಸಿದ್ದಾರೆ. ಈ ಕೃತ್ಯವನ್ನು ದೇಶದ್ರೋಹ ಎಂದಷ್ಟೇ ಕರೆಯಬಹುದು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ತಮ್ಮ ಫೋನ್‌ಗಳನ್ನೂ ಕದ್ದಾಲಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಪೆಗಾಸಸ್ ಗೂಢಚರ್ಯೆಯನ್ನು ಸುಪ್ರೀಂ ಕೋರ್ಟ್‌ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಸಂಸತ್ ಭವನದ ಹೊರಗೆ ವಿಜಯ್ ಚೌಕದಲ್ಲಿ ವಿರೋಧ ಪಕ್ಷಗಳು ನಡೆಸಿದ ಪ್ರತಿಭಟನೆ ವೇಳೆ ರಾಹುಲ್‌ ಮಾತನಾಡಿದ್ದಾರೆ.

‘ಪೆಗಾಸಸ್ ತಂತ್ರಾಂಶವನ್ನು ಇಸ್ರೇಲ್ ಸರ್ಕಾರವು ಒಂದು ಶಸ್ತ್ರ ಎಂದು ವರ್ಗೀಕರಿಸಿದೆ. ಆ ಶಸ್ತ್ರವನ್ನು ಭಯೋತ್ಪಾದಕರ ವಿರುದ್ಧ ಮಾತ್ರ ಬಳಸಬೇಕು. ಆದರೆ ನಮ್ಮ ಪ್ರಧಾನಿ ಮತ್ತು ಗೃಹ ಸಚಿವರು ಈ ಶಸ್ತ್ರವನ್ನು ದೇಶದ ರಾಜ್ಯಗಳು, ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಬಳಸಿದ್ದಾರೆ. ಈ ಶಸ್ತ್ರವನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಈ ಶಸ್ತ್ರವನ್ನು ಅವರು ಬಳಸಿದ್ದಾರೆ’ ಎಂದು ರಾಹುಲ್ ಆರೋಪಿಸಿದ್ದಾರೆ.

‘ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ತನಿಖೆಯ ಹಾದಿ ತಪ್ಪಿಸುವ ಉದ್ದೇಶದಿಂದಲೇ ಪೆಗಾಸಸ್ ಅನ್ನು ಸುಪ್ರೀಂ ಕೋರ್ಟ್‌ ಅಧಿಕಾರಿಗಳ ವಿರುದ್ಧ ಬಳಸಲಾಗಿದೆ. ಪೆಗಾಸಸ್ ಅನ್ನು ಯಾರೋ ವ್ಯಕ್ತಿ ಖರೀದಿಸಲು ಮತ್ತು ಬಳಕೆಗೆ ಅನುಮತಿ ನೀಡಲು ಸಾಧ್ಯವಿಲ್ಲ. ಸೇನೆಯು ಸಹ ಇದನ್ನು ನೇರವಾಗಿ ಖರೀದಿಸಲು ಸಾಧ್ಯವಿಲ್ಲ. ಇಸ್ರೇಲ್ ಸರ್ಕಾರ ಮಾತ್ರವೇ ಬೇರೆ ಸರ್ಕಾರಕ್ಕೆ ಇದನ್ನು ಮಾರಾಟ ಮಾಡಲು ಸಾಧ್ಯ. ಇದನ್ನು ಬಳಸುವ ದೇಶದ ಪ್ರಧಾನಿ ಮತ್ತು ಗೃಹ ಸಚಿವರಷ್ಟೇ ಪೆಗಾಸಸ್ ಬಳಕೆಗೆ ಅನುಮತಿ ನೀಡಲು ಸಾಧ್ಯ. ಹೀಗಾಗಿ ಗೃಹ ಸಚಿವ ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಮೋದಿ ಮತ್ತು ಶಾ ಇಬ್ಬರ ವಿರುದ್ಧ ಸುಪ್ರೀಂ ಕೋರ್ಟ್‌ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು’ ಎಂದು ರಾಹುಲ್ ಆಗ್ರಹಿಸಿದ್ದಾರೆ.

ರಫೇಲ್ ಸತ್ಯ ಹೊರಗೆ ಬರಲಿದೆ

‘ರಫೇಲ್‌ ಯುದ್ಧವಿಮಾನ ಖರೀದಿ ಒಪ್ಪಂದವು ಸರ್ಕಾರ ಮತ್ತು ಸರ್ಕಾರದ ಮಧ್ಯೆ ನಡೆಯಿತು. ಆದರೆ ಒಪ್ಪಂದದ ಸಭೆಯಲ್ಲಿ ಅನಿಲ್ ಅಂಬಾನಿ ಇದ್ದರು. ನಾನು ಸತ್ಯ ಹೇಳಿದಾಗ ಯಾರೂ ನಂಬಲಿಲ್ಲ. ನನ್ನನ್ನು ಯಾರೂ ಬೆಂಬಲಿಸಲಿಲ್ಲ. ಆದರೆ ಈಗ ಒಂದೊಂದೇ ಸತ್ಯ ಹೊರಗೆ ಬರುತ್ತಿದೆ’ ಎಂದು ರಾಹುಲ್ ಹೇಳಿದ್ದಾರೆ.

‘ನೀವು ಹಣಕೊಟ್ಟು ಎಲ್ಲವನ್ನೂ ಖರೀದಿಸಲು ಸಾಧ್ಯವಿಲ್ಲ ಮತ್ತು ಎಲ್ಲವನ್ನೂ ಹತ್ತಿಕ್ಕಲು ಸಾಧ್ಯವಿಲ್ಲ. ರಫೇಲ್‌ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ರಾನ್ಸ್‌ನಲ್ಲಿ ತನಿಖೆ ಆರಂಭವಾಗಿದೆ. ರಫೇಲ್ ಒಪ್ಪಂದದಲ್ಲಿನ ಭ್ರಷ್ಟಾಚಾರಕ್ಕೆ ನಮ್ಮ ಪ್ರಧಾನಿಯೇ ನೇರ ಹೊಣೆ ಎಂಬುದು ನಿಮಗೆಲ್ಲರಿಗೂ ತಿಳಿಯಲಿದೆ’ ಎಂದು ರಾಹುಲ್ ಹೇಳಿದ್ದಾರೆ.

‘ನನ್ನ ಫೋನ್ ಕದ್ದಾಲಿಸಲಾಗುತ್ತಿದೆ’

‘ನನ್ನ ಎಲ್ಲಾ ಫೋನ್‌ಗಳನ್ನು ಕದ್ದಾಲಿಸಲಾಗುತ್ತಿದೆ. ಗುಪ್ತಚರ ಇಲಾಖೆ ಅಧಿಕಾರಿಗಳು ನನಗೆ ಮತ್ತು ನನ್ನ ಸ್ನೇಹಿತರಿಗೆ ಕರೆ ಮಾಡುತ್ತಾರೆ. ನಿಮ್ಮ ಫೋನ್‌ಗಳನ್ನು ಕದ್ದಾಲಿಸುತ್ತಿದ್ದೇವೆ, ಎಚ್ಚರಿಕೆಯಿಂದಿರಿ ಎಂದು ಮಾಹಿತಿ ನೀಡುತ್ತಾರೆ. ನಾನು ಏನು ಮಾತನಾಡುತ್ತೇನೆ, ಏನು ಹೇಳುತ್ತೇನೆ ಎಂಬುದನ್ನು ನನ್ನ ಭದ್ರತಾ ಸಿಬ್ಬಂದಿ ಅವರ ಹಿರಿಯ ಅಧಿಕಾರಿಗಳಿಗೆ ಹೇಳಲೇಬೇಕು. ನನ್ನ ಫೋನ್‌ ಅನ್ನು ಕದ್ದಾಲಿಸುತ್ತಿಲ್ಲ ಎಂಬ ಭ್ರಮೆಯಲ್ಲಿ ನಾನು ಇಲ್ಲ’ ಎಂದು ರಾಹುಲ್ ಹೇಳಿದ್ದಾರೆ.

‘ಕಾನೂನುಬಾಹಿರವಾಗಿ ಕದ್ದಾಲಿಸಿಲ್ಲ’

‘ಬಿಜೆಪಿ ಸರ್ಕಾರವು ಯಾರ ಫೋನನ್ನೂ ಕಾನೂನುಬಾಹಿರವಾಗಿ ಕದ್ದಾಲಿಸಿಲ್ಲ, ಗೂಢಚರ್ಯೆ ನಡೆಸಿಲ್ಲ. ರಾಹುಲ್ ಗಾಂಧಿ ಅವರು ಅತಮ್ಮ ಫೋನ್‌ ಅನ್ನು ಕದ್ದಾಲಿಸಲಾಗಿದೆ ಎಂದಿದ್ದಾರೆ. ಅದು ನಿಜವೇ ಆಗಿದ್ದರೆ ಅವರು ತಮ್ಮ ಫೋನ್‌ ಅನ್ನು ತನಿಖಾ ಸಂಸ್ಥೆಗೆ ಒಪ್ಪಿಸಲಿ. ಭಾರತೀಯ ದಂಡ ಸಂಹಿತೆಯ ನಿಯಮಗಳ ಪ್ರಕಾರ ತನಿಖೆ ನಡೆಯಲಿದೆ’ ಎಂದು ಬಿಜೆಪಿ ವಕ್ತಾರ ರಾಜ್ಯವರ್ಧನ್ ಸಿಂಗ್ ರಾಥೋಡ್ ಸವಾಲು ಹಾಕಿದ್ದಾರೆ.

ದಿನದ ಬೆಳವಣಿಗೆ

* ಪೆಗಾಸಸ್ ಗೂಢಚರ್ಯೆಯನ್ನು ಸುಪ್ರೀಂ ಕೋರ್ಟ್‌ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಸಂಸತ್ ಭವನದ ಹೊರಗೆ ವಿರೋಧ ಪಕ್ಷಗಳ ಪ್ರತಿಭಟನೆ

* ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ದೇಶದ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

* ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಹುರಿಯತ್ ನಾಯಕರು, ಸಾಮಾಜಿಕ ಕಾರ್ಯಕರ್ತರು ಮತ್ತು ಸ್ಥಳೀಯ ಪತ್ರಕರ್ತರು ಸೇರಿ 25 ಜನರ ಫೋನ್‌ ಸಂಖ್ಯೆಯು ಪೆಗಾಸಸ್ ಗೂಢಚರ್ಯೆ ಪಟ್ಟಿಯಲ್ಲಿದೆ ಎಂದು ದಿ ವೈರ್ ವರದಿ ಮಾಡಿದೆ

* ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಅವರು ಮತ್ತು ಅವರ ಆಪ್ತ ಸಹಾಯಕರ ಫೋನ್‌ ಸಂಖ್ಯೆಯು ಪೆಗಾಸಸ್ ಗೂಢಚರ್ಯೆಯ ಪಟ್ಟಿಯಲ್ಲಿದೆ ಎಂದು ದಿ ವೈರ್ ವರದಿ ಮಾಡಿದೆ

* ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಗೂಢಚರ್ಯೆ ನಡೆಸಲು ಭಾರತ ಸರ್ಕಾರ ಪೆಗಾಸಸ್ ಬಳಸಿದೆ. ಈ ಬಗ್ಗೆ ತನಿಖೆಗೆ ನಡೆಸಿ ಎಂದು ಪಾಕಿಸ್ತಾನವು ವಿಶ್ವಸಂಸ್ಥೆಗೆ ಪತ್ರ ಬರೆದಿದೆ

‘ಇದು ರಾಹುಲ್ ಗಾಂಧಿಯ ಖಾಸಗಿತನದ ವಿಷಯವಲ್ಲ. ಬದಲಿಗೆ ಜನರ ಧ್ವನಿಯನ್ನು ಹತ್ತಿಕ್ಕುತ್ತಿರುವ ವಿಚಾರ. ನಾನು ಪೆಗಾಸಸ್ ಗೂಢಚರ್ಯೆಯ ಸಂಭಾವ್ಯ ಗುರಿ ಅಲ್ಲ. ನನ್ನ ಫೋನ್‌ಗಳನ್ನು ಕದ್ದಾಲಿಸುತ್ತಿರುವುದು ನಿಜ’ ಎಂದು ಅವರು ಆರೋಪಿಸಿದ್ದಾರೆ.

ಶಂತನು ಅಮಾನತು

ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈ‍ಷ್ಣವ್ ಅವರಿಂದ ಹೇಳಿಕೆ ಪತ್ರವನ್ನುರಾಜ್ಯಸಭೆಯಲ್ಲಿ ಕಸಿದುಕೊಂಡು, ಹರಿದುಹಾಕಿದ್ದ ಟಿಎಂಸಿ ಸಂಸದ ಶಂತನು ಸೆನ್ ಅವರನ್ನು ಸಂಸತ್ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ.

ಶುಕ್ರವಾರ ಬೆಳಿಗ್ಗೆಯೇ ಸರ್ಕಾರವು, ‘ಶಂತನು ಸೆನ್ ಅವರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಬೇಕು’ ಎಂದು ನಿರ್ಣಯ ಮಂಡಿಸಿತು. ಈ ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಿ, ಶಂತನು ಅವರನ್ನು ಅಮಾನತು ಮಾಡಲಾಯಿತು.

‘ಶಂತನು ಸೆನ್ ನಿಮ್ಮ ವರ್ತನೆಯಿಂದ ಸಂಸದೀಯ ನಡವಳಿಕೆಗೆ ಧಕ್ಕೆಯಾಗಿದೆ. ನಿಮ್ಮನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ. ನೀವು ಸದನದಿಂದ ಹೊರ ನಡೆಯಿರಿ’ ಎಂದು ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಆದೇಶಿಸಿದರು. ಶಂತನು ಅವರು ಸದನದಿಂದ ಹೊರ ನಡೆಯಲು ನಿರಾಕರಿಸಿದರು. ಅಮಾನತಾದ ಸದಸ್ಯರು ಸದನದಲ್ಲೇ ಇದ್ದರೆ ಕಲಾಪ ನಡೆಯುವ ಹಾಗಿಲ್ಲ ಎಂದು ಸಭಾಪತಿ ಹೇಳಿದರು.

‘ಅಮಾನತು ನಿರ್ಣಯವನ್ನು ಸದನದ ದಿನದ ಕಲಾಪ ಪಟ್ಟಿಯಲ್ಲಿ ಸೇರಿಸದೆಯೇ ಮಂಡಿಸಲಾಗಿದೆ. ಈ ಮೂಲಕ ನಮ್ಮ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಈ ನಿರ್ಣಯವನ್ನು ಅಂಗೀಕರಿಸಿದ್ದು ಸರಿಯಲ್ಲ’ ಎಂದು ಟಿಎಂಸಿ ಸಂಸದರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಕಾರಣ ದಿನದಮಟ್ಟಿಗೆ ಕಲಾಪವನ್ನು ಮುಂದೂಡಲಾಯಿತು.

ಲೋಕಸಭೆಯಲ್ಲೂ ನಡೆಯದ ಕಲಾಪ: ಪೆಗಾಸಸ್ ಗೂಢಚರ್ಯೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದ ಕಾರಣ ಲೋಕಸಭೆಯಲ್ಲೂ ಶುಕ್ರವಾರ ಕಲಾಪ ನಡೆಯಲಿಲ್ಲ. ದಿನದಮಟ್ಟಿಗೆ ಕಲಾಪವನ್ನು ಮುಂದೂಡಲಾಯಿತು.

‘ಬಜೆಟ್ ಏರಿಸಿದ್ದು ಏಕೆ?’

‘2017-18ನೇ ಸಾಲಿನಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿಯ ಬಜೆಟ್‌ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಪೆಗಾಸಸ್ ಖರೀದಿಸಲು ಈ ಹಣ ಬಳಕೆಯಾಗಿದೆಯೇ? ಪೆಗಾಸಸ್ ಖರೀದಿಸಲೆಂದೇ ಸಮಿತಿಯ ಬಜೆಟ್ ಅನ್ನು ಏರಿಕೆ ಮಾಡಲಾಯಿತೆ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘2014-15ರಲ್ಲಿ ಈ ಸಮಿತಿಯ ಬಜೆಟ್ ₹ 44.46 ಕೋಟಿಯಷ್ಟು ಇತ್ತು. 2016-17ರಲ್ಲಿ ಅದನ್ನು ₹ 33 ಕೋಟಿಗೆ ಇಳಿಸಲಾಗಿತ್ತು. 2017-18ರಲ್ಲಿ ಈ ಸಮಿತಿಯ ಬಜೆಟ್ ಅನ್ನು ₹ 333 ಕೋಟಿಗೆ ಏರಿಕೆ ಮಾಡಲಾಗಿದೆ. ಅದೇ ವರ್ಷ ರಾಷ್ಟ್ರೀಯ ಭದ್ರತಾ ಸಮಿತಿಯಲ್ಲಿ ಸೈಬರ್ ಭದ್ರತೆ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವನ್ನು ಆರಂಭಿಸಲಾಗಿದೆ. ಅದೇ ವರ್ಷದಿಂದ ಪೆಗಾಸಸ್ ಗೂಢಚರ್ಯೆ ಆರಂಭವಾಗಿದೆ. ಪೆಗಾಸಸ್ ಖರೀದಿಸಲೆಂದೇ ಇಷ್ಟು ದೊಡ್ಡ ಮೊತ್ತವನ್ನು ನೀಡಲಾಗಿದೆ ಎಂಬುದು ಸ್ಪಷ್ಟ’ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಆಪಾದಿಸಿದ್ದಾರೆ.

‘ರಫೇಲ್‌ ಖರೀದಿ ತನಿಖೆಯ ಹಾದಿ ತಪ್ಪಿಸಲು ಪೆಗಾಸಸ್ ಗೂಢಚರ್ಯೆ ಬಳಸಲಾಗಿದೆ. ಬಿಜೆಪಿ ನಾಯಕರಾದ ಅರುಣ್ ಶೌರಿ ಮತ್ತುಮತ್ತು ಪ್ರಶಾಂತ್ ಭೂಷಣ್ ಅವರು 2018ರ ಅಕ್ಟೋಬರ್‌ನಲ್ಲಿ ಅಂದಿನ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಭೇಟಿ ಮಾಡಿ ದೂರು ನೀಡಿದ್ದರು. ಆನಂತರ ಅಲೋಕ್ ವರ್ಮಾ ಮತ್ತು ಅವರ ಕುಟುಂಬದ ಎಂಟು ಸದಸ್ಯರ ಫೋನ್‌ ಸಂಖ್ಯೆಯನ್ನು ಪೆಗಾಸಸ್ ಗೂಢಚರ್ಯೆ ಪಟ್ಟಿಗೆ ಸೇರಿಸಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

***

ಭ್ರಷ್ಟರು ಮಾತ್ರವೇ ಮೋದಿಗೆ ಹೆದರಬೇಕು. ನೀವು ಭ್ರಷ್ಟರಲ್ಲದೇ ಇದ್ದರೆ ಮೋದಿಗೆ ಹೆದರುವ ಅವಶ್ಯಕತೆ ಇಲ್ಲ. ಮೋದಿಯತ್ತ ನೋಡಿ ನಗೆ ಬೀರಬಹುದು
ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಭ್ರಷ್ಟರು ಮೋದಿಗೆ ಹೆದರಬೇಕು ಎಂಬುದು ರಾಹುಲ್ ಗಾಂಧಿ ಅವರಿಗೆ ಅರ್ಥವಾಗಿದೆ. ರಾಹುಲ್ ಅವರ ಮಾತನ್ನು ಮೋದಿಯವರ ಪ್ರಶಂಸೆ ಎಂದು ಸ್ವೀಕರಿಸಬಹುದು
ಹಿಮಂತಾ ಬಿಸ್ವಾ ಶರ್ಮಾ, ಅಸ್ಸಾಂ ಮುಖ್ಯಮಂತ್ರಿ


2017ರಲ್ಲಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿ ನೆತನ್ಯಾಹು ಜತೆ ಓಡಾಡಿದ್ದರು. ಕಣ್ಗಾವಲು ನಡೆಸುವ ಒಪ್ಪಂದ ಕುದುರಿಸಲು ಹೋಗಿದ್ದರೆ?
ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

ಪೆಗಾಸಸ್ ಅನ್ನು ನಾವು ಖರೀದಿಸಿಲ್ಲ ಎಂದು ಸರ್ಕಾರ ಈವರೆಗೆ ಹೇಳಿಲ್ಲ. ಅದನ್ನು ಖರೀದಿಸಿರುವುದೇ ಆದರೆ, ದೇಶದ ಯಾವ ಏಜೆನ್ಸಿ ಅದನ್ನು ಖರೀದಿಸಿದೆ ಎಂಬುದನ್ನು ಬಹಿರಂಗಪಡಿಸಲಿ
ಪವನ್ ಖೇರಾ, ಕಾಂಗ್ರೆಸ್ ವಖ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT