ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಅವರ ಆ ಬಾಲಿಶ ನಡೆಯಿಂದ 2014ರಲ್ಲಿ ಕಾಂಗ್ರೆಸ್‌ಗೆ ಸೋಲಾಯಿತು: ಆಜಾದ್‌

Last Updated 26 ಆಗಸ್ಟ್ 2022, 9:48 IST
ಅಕ್ಷರ ಗಾತ್ರ

ನವದೆಹಲಿ: 2013 ರಲ್ಲಿ ಯುಪಿಎ ಸರ್ಕಾರದ ಸುಗ್ರೀವಾಜ್ಞೆಯೊಂದನ್ನು ರಾಹುಲ್‌ ಗಾಂಧಿ ಅವರು ಬಹಿರಂಗವಾಗಿ ಹರಿದು ಹಾಕಿದ್ದು 2014ರ ಲೋಕಸಭೆ ಚುನಾವಣೆಯ ಸೋಲಿಗೆ ಪ್ರಮುಖ ಕಾರಣ ಎಂದು ಗುಲಾಂ ನಬಿ ಆಜಾದ್‌ ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಅವರು ಶುಕ್ರವಾರ ಪಕ್ಷ ತೊರೆದಿದ್ದು, ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಅವರಿಗೆ ತಲುಪಿಸಿದ್ದಾರೆ. ಸೋನಿಯಾಗೆ ಬರೆದ ಪತ್ರದಲ್ಲಿ ಆಜಾದ್‌ ಅವರು ಪಕ್ಷದ ನಾಯಕತ್ವ, ರಾಹುಲ್‌ ಗಾಂಧಿ ಅವರ ವರ್ತನೆ ಕುರಿತು ಟೀಕೆ ಮಾಡಿದ್ದಾರೆ.

‘ರಾಹುಲ್ ಗಾಂಧಿಯವರು ಕಿಕ್ಕಿರಿದ ಮಾಧ್ಯಮಗಳ ಎದುರು ಯುಪಿಎ ಸರ್ಕಾರದ ಸುಗ್ರೀವಾಜ್ಞೆಯನ್ನು ಹರಿದು ಹಾಕಿದ್ದರು. ಇದು ಅವರ ಅಪ್ರಬುದ್ಧತೆಗೆ ಅತಿ ದೊಡ್ಡ ಉದಾಹರಣೆ. ಆ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್‌ನ ಕೋರ್‌ ಕಮಿಟಿಯಲ್ಲಿ ಚರ್ಚೆ ಮಾಡಿ, ಪ್ರಧಾನಿ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. ಭಾರತದ ರಾಷ್ಟ್ರಪತಿಯವರಿಂದಲೂ ಅನುಮೋದನೆ ನೀಡಲಾಗಿತ್ತು. ರಾಹುಲ್‌ ಗಾಂಧಿ ಅವರ ಅಂದಿನ ಆ ಬಾಲಿಶ ನಡವಳಿಕೆಯು ಪ್ರಧಾನಮಂತ್ರಿ ಮತ್ತು ಭಾರತ ಸರ್ಕಾರದ ಅಧಿಕಾರವನ್ನೇ ಸಂಪೂರ್ಣವಾಗಿ ಬುಡಮೇಲು ಮಾಡಿತ್ತು’ ಎಂದು ಆಜಾದ್‌ ಬೇಸರ ವ್ಯಕ್ತಪಡಿಸಿದ್ದಾರೆ.

‘ರಾಹುಲ್‌ ಗಾಂಧಿ ಅವರ ಈ ನಡೆ 2014 ರಲ್ಲಿ ಯುಪಿಎ ಸರ್ಕಾರದ ಸೋಲಿಗೆ ಪ್ರಮುಖ ಕಾರಣವಾಯಿತು. ಇದು ಬಲಪಂಥೀಯ ಶಕ್ತಿಗಳು ಮತ್ತು ಕೆಲವು ಕಾರ್ಪೊರೇಟ್ ಹಿತಾಸಕ್ತಿಗಳ ಅಪಹಾಸ್ಯ, ಪ್ರಚೋದನೆ, ಅಪಪ್ರಚಾರಕ್ಕೆ ಒಳಗಾಯಿತು’ ಎಂದು ಆಜಾದ್‌ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಳಂಕಿತ ಸಂಸದರು ಮತ್ತು ಶಾಸಕರನ್ನು ಅನರ್ಹತೆಯಿಂದ ರಕ್ಷಿಸುವ ಸುಗ್ರೀವಾಜ್ಞೆಯನ್ನು ರಾಹುಲ್‌ ಗಾಂಧಿ ಅವರು 2013ರಲ್ಲಿ ‘ದೆಹಲಿ ಪ್ರೆಸ್‌ಕ್ಲಬ್‌’ನಲ್ಲಿ ಹರಿದೆಸೆದಿದ್ದರು. ರಾಹುಲ್‌ ಅವರ ಈ ನಡೆಯಿಂದ ಅಂದಿನ ಪ್ರಧಾನಿ ಮನಮೋಹನ ಸಿಂಗ್‌ ಮತ್ತು ಕಾಂಗ್ರೆಸ್‌ ತೀವ್ರ ಮುಜುಗರಕ್ಕೆ ಒಳಗಾಗಿತ್ತು.

ಟೀಕೆಯ ಜೊತೆಗೇ, ಪಕ್ಷದೊಂದಿಗಿನ 50 ವರ್ಷಗಳ ಸುದೀರ್ಘ ಒಡನಾಟವನ್ನೂ ಆಜಾದ್ ತಮ್ಮ ಪತ್ರದಲ್ಲಿ ಮೆಲುಕುಹಾಕಿದ್ದಾರೆ. ರಾಜೀವ್ ಗಾಂಧಿ ಮತ್ತು ಪಿ.ವಿ ನರಸಿಂಹರಾವ್‌ ಅವರ ಅವಧಿಯಲ್ಲಿ ಸಂಸದೀಯ ಮಂಡಳಿಯ ಸದಸ್ಯರಾಗಿದ್ದಿದ್ದಾಗಿ ಅವರು ನೆನಪಿಸಿಕೊಂಡಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಚುನಾವಣೆ ಅಥವಾ ನಾಮನಿರ್ದೇಶನದ ಮೂಲಕ ಸತತವಾಗಿ ಆಯ್ಕೆಯಾದ ಹಿನ್ನೆಲೆಯನ್ನು ತಾವು ಹೊಂದಿರುವುದಾಗಿಯೂ, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ 35 ವರ್ಷಗಳಲ್ಲಿ ದೇಶದ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಉಸ್ತುವಾರಿಯಾಗಿ ಕೆಲಸ ಮಾಡಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.

ತಾವು ಉಸ್ತುವಾರಿ ವಹಿಸಿಕೊಂಡಿದ್ದ ರಾಜ್ಯಗಳ ಪೈಕಿ ಶೇ 90 ರಷ್ಟು ರಾಜ್ಯಗಳನ್ನು ಕಾಂಗ್ರೆಸ್‌ ಗೆದ್ದಿದೆ ಎಂದೂ ಅವರು ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT