ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ರೈಲ್ವೆ ವಿದ್ಯುದೀಕರಣ ಕಾಮಗಾರಿ ನಿಧಾನ

2,533 ಕಿ.ಮೀ. ಮಾರ್ಗದ ಪೈಕಿ 722 ಕಿ.ಮೀ. ಕಾಮಗಾರಿ ಮಾತ್ರ ಪೂರ್ಣ
Last Updated 31 ಮಾರ್ಚ್ 2023, 2:13 IST
ಅಕ್ಷರ ಗಾತ್ರ

ವದೆಹಲಿ: ಕರ್ನಾಟಕ ರಾಜ್ಯದಲ್ಲಿ ರೈಲು ಮಾರ್ಗಗಳ ವಿದ್ಯುದೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.

ರಾಜ್ಯದಲ್ಲಿ ರೈಲ್ವೆ ಇಲಾಖೆಯು 12 ಮಾರ್ಗಗಳ ವಿದ್ಯುದೀಕರಣ ಕಾಮಗಾರಿ ಕೈ‌ಗೆತ್ತಿಕೊಂಡಿದೆ. 2,533 ಕಿ.ಮೀ. ಮಾರ್ಗದ ಪೈಕಿ ಈ ವರೆಗೆ ಪೂರ್ಣ ಆಗಿರುವುದು 722 ಕಿ.ಮೀ. ಮಾತ್ರ. 12 ಮಾರ್ಗಗಳ ಕಾಮಗಾರಿ ಪೂರ್ಣಗೊಳಿಸಲು ₹3,887 ಕೋಟಿ ಬೇಕು. ಈವರೆಗೆ ಇಲಾಖೆ ₹1,207 ಕೋಟಿ ವೆಚ್ಚ ಮಾಡಿದೆ.

ದೇಶದ ರೈಲು ಮಾರ್ಗಗಳ ವಿದ್ಯುದೀಕರಣ ಕಾಮಗಾರಿಗಳ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದು, ಕರ್ನಾಟಕ (12), ರಾಜಸ್ಥಾನ (12) ಹಾಗೂ ಗುಜರಾತ್‌ನಲ್ಲಿ (11) ಹೆಚ್ಚಿನ ಸಂಖ್ಯೆಯ ಕಾಮಗಾರಿಗಳು ಬಾಕಿ ಇವೆ ಎಂದು ಮಾಹಿತಿ ನೀಡಿದ್ದಾರೆ.

‘ಕರ್ನಾಟಕದಲ್ಲಿ ₹49,087 ಕೋಟಿ ವೆಚ್ಚದ 4,330 ಕಿ.ಮೀ. ರೈಲ್ವೆ ಕಾಮಗಾರಿಗಳು ವಿವಿಧ ಹಂತದಲ್ಲಿವೆ. ಇದರಲ್ಲಿ 21 ಹೊಸ ಯೋಜನೆಗಳು ಹಾಗೂ 11 ದ್ವಿಪಥ ಕಾಮಗಾರಿಗಳು ಸೇರಿವೆ. ₹16,258 ಕೋಟಿ ವೆಚ್ಚದ 1,305 ಕಿ.ಮೀ. ಕಾಮಗಾರಿಗಳು ಪೂರ್ಣಗೊಂಡಿವೆ’ ಎಂದಿದ್ದಾರೆ.

‘ಕರ್ನಾಟಕದಲ್ಲಿ ಹೊಸ ಮಾರ್ಗಗಳ ನಿರ್ಮಾಣ, ದ್ವಿಪಥ, ಗೇಜ್‌ ಪರಿವರ್ತನೆ, ವಿದ್ಯುದೀಕರಣ ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ಒದಗಿಸುತ್ತಿರುವ ಹಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2014–19ನೇ ಸಾಲಿನಲ್ಲಿ ಪ್ರತಿವರ್ಷ ₹2,702 ಕೋಟಿ ಒದಗಿಸಲಾಗಿದೆ. 2019–20ರಲ್ಲಿ ₹3,386 ಕೋಟಿ, 2020–21ರಲ್ಲಿ ₹4,220 ಕೋಟಿ, 2021–22ರಲ್ಲಿ ₹4,227, 2022–23ರಲ್ಲಿ ₹6,091 ಕೋಟಿ ಒದಗಿಸಲಾಗಿದೆ. ಈ ವರ್ಷದ ಬಜೆಟ್‌ನಲ್ಲಿ ₹7,561 ಕೋಟಿ ನೀಡಲಾಗಿದೆ. ಇದು 2009-14ರ ಅವಧಿಯಲ್ಲಿ ಒದಗಿಸಿರುವ ಅನುದಾನಕ್ಕೆ ಹೋಲಿಸಿದರೆ ಶೇ 806 ಪಟ್ಟು ಅಧಿಕ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಇತ್ತೀಚಿನ ವರ್ಷಗಳಲ್ಲಿ ರೈಲ್ವೆ ವಿದ್ಯುದೀಕರಣ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಒದಗಿಸಿರಲಿಲ್ಲ. ಮಾರ್ಗಗಳ ವಿದ್ಯುದೀಕರಣ ಕಾಮಗಾರಿಯಲ್ಲಿ ಕರ್ನಾಟಕ ಹಿಂದೆ ಇತ್ತು. ಈ ಸಲದ ಬಜೆಟ್‌ನಲ್ಲಿ ಹೊಸ ಯೋಜನೆಗಳ ಜತೆಗೆ ದ್ವಿಪಥ ಹಾಗೂ ವಿದ್ಯುದೀಕರಣ ಕಾಮಗಾರಿಗೆ ಹೆಚ್ಚಿನ ಅನುದಾನ ಒದಗಿಸಿದ್ದಾರೆ. ಈ ಅನುದಾನವನ್ನು ಬಳಸಿಕೊಂಡು 2024ರ ಒಳಗೆ ಈ ಕಾಮಗಾರಿಗಳನ್ನು ಪೂರ್ಣಗೊಳಿಸಬಹುದು’ ಎಂದು ರೈಲ್ವೆ ಹೋರಾಟಗಾರ ಕೃಷ್ಣಪ್ರಸಾದ್‌ ತಿಳಿಸಿದರು.

‘ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ರಾಜ್ಯದ 9 ರೈಲು ಮಾರ್ಗಗಳ ವಿದ್ಯುದೀಕರಣಕ್ಕೆ ₹725 ಕೋಟಿ ಒದಗಿಸಲಾಗಿದೆ. ಇದರಿಂದಾಗಿ, ವಿದ್ಯುದೀಕರಣ ಕಾಮಗಾರಿಗೆ ಇನ್ನಷ್ಟು ವೇಗ ಸಿಗಲಿದೆ’ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT