ಶುಕ್ರವಾರ, ಅಕ್ಟೋಬರ್ 30, 2020
26 °C

ಸಜೀವ ದಹನಕ್ಕೊಳಗಾಗಿದ್ದ ಅರ್ಚಕನ ಅಂತ್ಯ ಸಂಸ್ಕಾರ ನೆರವೇರಿಸಿದ ಕುಟುಂಬಸ್ಥರು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಜೈಪುರ: ರಾಜ್ಯ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ಅರ್ಚಕನ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಕುಟುಂಬವೀಗ ದೇವಸ್ಥಾನದ ಜಾಗವನ್ನು ಆಕ್ರಮಿಸಿಕೊಳ್ಳಲು ಮುಂದಾಗಿದ್ದ ದುಷ್ಕರ್ಮಿಗಳಿಂದ ಸಜೀವ ದಹನಕ್ಕೊಳಗಾಗಿದ್ದ ಅರ್ಚಕನ ಅಂತ್ಯ ಸಂಸ್ಕಾರವನ್ನು ಶನಿವಾರ ನೆರವೇರಿಸಿದೆ.

ಅಪರಾಧಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಮತ್ತು ಇನ್ನೂ ಮೂವರನ್ನು ಎಫ್ಐಆರ್‌ನಲ್ಲಿ ಹೆಸರಿಸಲಾಗಿದೆ.

ಪರಿಹಾರವಾಗಿ ರಾಜ್ಯ ಸರ್ಕಾರವು ₹ 50 ಲಕ್ಷ ನೀಡಬೇಕು ಮತ್ತು ಸರ್ಕಾರಿ ಉದ್ಯೋಗವನ್ನು ಒದಗಿಸಬೇಕು ಸೇರಿದಂತೆ ತಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೆ ಅಂತ್ಯ ಸಂಸ್ಕಾರ ನಡೆಸುವುದಿಲ್ಲ ಎಂದು ಪ್ರತಿಭಟನೆಗೆ ಮುಂದಾಗಿದ್ದರು. 

'ಘಟನೆಗೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಮತ್ತು ಪಟ್ವಾರಿ (ಕಂದಾಯ ಅಧಿಕಾರಿ) ಮತ್ತು ಆರೋಪಿಗಳನ್ನು ಬೆಂಬಲಿಸುತ್ತಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮಗೆ ರಕ್ಷಣೆ ಬೇಕು' ಎಂದು ಅರ್ಚಕರ ಸಂಬಂಧಿ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಕರೌಲಿ ಜಿಲ್ಲೆಯ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಓಂ ಪ್ರಕಾಶ್ ಮೀನಾ ಅವರು ಗ್ರಾಮಕ್ಕೆ ಭೇಟಿ ನೀಡಿ, ಅರ್ಚಕರು ಮೃತಪಟ್ಟು ಎರಡು ದಿನ ಕಳೆದಿರುವುದರಿಂದಾಗಿ ಅಂತ್ಯಕ್ರಿಯೆ ನಡೆಸುವಂತೆ ಕುಟುಂಬವನ್ನು ಮನವೊಲಿಸಲು ಪ್ರಯತ್ನಿಸಿದರು. 

ಜೈಪುರ ಸಂಸದ ರಾಮ್‌ಚರಣ್ ಬೊಹ್ರಾ ನೇತೃತ್ವದ ಬಿಜೆಪಿ ನಿಯೋಗವೂ ಇಂದು ಅರ್ಚಕರ ಕುಟುಂಬವನ್ನು ಭೇಟಿಯಾಗಿ, ಅವರ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯಿಸಿತು.

ಏನಿದು ಭೂ ವಿವಾದ?

ಕರೌಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ರಾಧಾ ಕೃಷ್ಣ ದೇವಾಲಯದ ಟ್ರಸ್ಟ್‌ಗೆ ಸೇರಿದ ಸುಮಾರು ಹದಿಮೂರು ಬಿಘಾಸ್ (ಸುಮಾರು 5.2 ಎಕರೆ) ಭೂಮಿಯು ಇತ್ತು. ಆದರೆ ಅದನ್ನು ಮುಖ್ಯ ಅರ್ಚಕರಿಗೆ ಆದಾಯದ ಮೂಲವಾಗಿ ನೀಡಲಾಗಿತ್ತು.

ಸಣ್ಣ ಗುಡ್ಡವೊಂದರ ಗಡಿಯಲ್ಲಿರುವ ತನ್ನ ಜಮೀನಿಗೆ ಸಮೀಪವೇ ಇದ್ದ ಟ್ರಸ್ಟ್‌ನ ಜಮೀನಿನಲ್ಲಿ ಬಾಬು ಲಾಲ್ ತನಗಾಗಿ ಮನೆಯನ್ನು ನಿರ್ಮಿಸಲು ಬಯಸಿದ್ದರು. ನಿರ್ಮಾಣವನ್ನು ಪ್ರಾರಂಭಿಸುವ ಸಲುವಾಗಿ, ಭೂಮಿಯನ್ನು ಸಮತಟ್ಟು ಮಾಡಿಸಿದ್ದರು. ಆದರೆ ಪ್ರಬಲ ಮೀನಾ ಸಮುದಾಯದ ಜನರ ಗುಂಪು ಇದನ್ನು ಆಕ್ಷೇಪಿಸಿ, ಆ ಭೂಮಿಯು ತಮ್ಮದೆಂದು ಹೇಳಿದೆ. 

ಈ ವಿವಾದವನ್ನು ಗ್ರಾಮದ ಹಿರಿಯರ ಬಳಿ ಕೊಂಡೊಯ್ದಾಗ ಅವರು ಅರ್ಚಕರ ಪರವಾಗಿಯೇ ತೀರ್ಪು ನೀಡಿದ್ದರು. ಆದರೆ ಆರೋಪಿಗಳು ಅರ್ಚಕರು ಸಮತಟ್ಟು ಮಾಡಿದ್ದ ಜಾಗದಲ್ಲಿಯೇ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ. ಇದು ವಾಗ್ವಾದಕ್ಕೆ ಕಾರಣವಾಗಿದೆ.

ವಿವಾದಿತ ಸ್ಥಳದಲ್ಲಿದ್ದ ಬಾಜ್ರಾಗೆ (ರಾಗಿ) ಆರು ಜನರ ತಂಡವೊಂದು ಪೆಟ್ರೋಲ್ ಸುರಿದು ಬುಧವಾರ ಬೆಂಕಿ ಹಚ್ಚಿದ್ದಾರೆ. ಬಳಿಕ ತನ್ನ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು ಎಂದು ಅರ್ಚಕ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು