ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

31 ವರ್ಷ ಸೆರೆಯಲ್ಲಿ ಕಳೆದ ರಾಜೀವ್ ಹಂತಕರು: ಮರಣದಂಡನೆ ಮಾರ್ಪಾಡಾಗಿ ಈಗ ಬಿಡುಗಡೆ

Last Updated 11 ನವೆಂಬರ್ 2022, 19:31 IST
ಅಕ್ಷರ ಗಾತ್ರ

ನವದೆಹಲಿ/ಚೆನ್ನೈ:ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಹಂತಕರು 23ರಿಂದ 31 ವರ್ಷಗಳಷ್ಟು ಜೈಲುಶಿಕ್ಷೆ ಅನುಭವಿಸಿದ್ದಾರೆ.

ಈ ಪ್ರಕರಣದಲ್ಲಿ ಅವರಿಗೆ ಮೊದಲು ಮರಣದಂಡನೆ ಘೋಷಿಸಲಾಗಿತ್ತು. ಆನಂತರ ಅದನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಲಾಗಿತ್ತು. ಈಗ ಜೀವಾವಧಿ ಶಿಕ್ಷೆಯಿಂದಲೂ ಅವರನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಲಾಗಿದೆ.

1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ರಾಜೀವ್ ಅವರು ಚುನಾವಣಾ ಪ್ರಚಾರ ನಡೆಸುವಾಗ ಆತ್ಮಹತ್ಯಾ ಬಾಂಬ್‌ ದಾಳಿ ನಡೆದಿತ್ತು.

ಧನು ಎಂಬಾಕೆ ಬಾಂಬ್‌ ಸ್ಫೋಟಿಸಿಕೊಂಡು, ರಾಜೀವ್ ಅವರ ಹತ್ಯೆ ಮಾಡಿದ್ದಳು. ಈ ಹತ್ಯೆಗೆ ಎ.ಜಿ.ಪೇರರಿವಾಳನ್ ಮತ್ತು ಈ ಆರೂ ಮಂದಿಸಂಚು ರೂಪಿಸಿ, ಹತ್ಯೆ ನಡೆಸಲು ನೆರವಾಗಿದ್ದರು. 1998ರಲ್ಲಿ ತಮಿಳುನಾಡಿನ ವಿಚಾರಣಾ ನ್ಯಾಯಾಲಯವು ಎಲ್ಲಾ ಹಂತಕರಿಗೆ ಮರಣದಂಡನೆ ಘೋಷಿಸಿತ್ತು. ಮರಣದಂಡನೆಯನ್ನು ಸುಪ್ರೀಂ ಕೋರ್ಟ್‌ 1999ರಲ್ಲಿ ಎತ್ತಿಹಿಡಿದಿತ್ತು.

ಮುರುಗನ್, ಶಾಂತನ್‌ ಮತ್ತು ಎ.ಜಿ.ಪೇರರಿವಾಳನ್‌ ಅವರು ಕ್ಷಮಾಪಣಾ ಅರ್ಜಿ ಸಲ್ಲಿಸಿದ್ದರು. ಅರ್ಜಿಯು ಇತ್ಯರ್ಥವಾಗದೇ ದೀರ್ಘಾವಧಿ ಕಳೆದಿದೆ ಎಂಬ ಆಧಾರದಲ್ಲಿ 2014ರಲ್ಲಿ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಲಾಗಿತ್ತು. ಆನಂತರ ಎ.ಜಿ.ಪೇರರಿವಾಳನ್ ಅವಧಿಪೂರ್ವ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದರು.

ಪೇರರಿವಾಳನ್‌ ಸೇರಿ ಜೀವಾವಧಿ ಶಿಕ್ಷೆಯಲ್ಲಿರುವ ಏಳೂ ಮಂದಿಯನ್ನು ಅವಧಿಪೂರ್ವ ಬಿಡುಗಡೆ ಮಾಡಲು ತಮಿಳುನಾಡು ಸಚಿವ ಸಂಪುಟವು ಅನುಮೋದನೆ ನೀಡಿತ್ತು. ಆದರೆ, ಸಂಪುಟದ ಶಿಫಾರಸನ್ನು ರಾಜ್ಯಪಾಲರು ಕೇಂದ್ರ ಸರ್ಕಾರದ ಪರಾಮರ್ಶೆಗೆ ಕಳುಹಿಸಿದ್ದರು. ಇದರ ವಿರುದ್ಧ ಪೇರರಿವಾಳನ್ ಮತ್ತು ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.2022ರ ಮೇನಲ್ಲಿ ಈ ಅರ್ಜಿಯನ್ನು ಇತ್ಯರ್ಥಪಡಿಸಿದ್ದಸುಪ್ರೀಂ ಕೋರ್ಟ್‌, ಪೇರರಿವಾಳನ್ ಅವರ ಅವಧಿಪೂರ್ವ ಬಿಡುಗಡೆಗೆ ಆದೇಶಿಸಿತ್ತು. ‘ಇಂತಹ ಪ್ರಕರಣಗಳಲ್ಲಿ ರಾಜ್ಯಪಾಲರು ಸಚಿವ ಸಂಪುಟದ ನಿರ್ಧಾರಕ್ಕೆ ಬದ್ಧವಾಗಿರಬೇಕು’ ಎಂದು ತೀರ್ಪು ನೀಡಿತ್ತು.

ಉಳಿದವರು ಸಲ್ಲಿಸಿದ್ದ ಅರ್ಜಿಯಲ್ಲೂ ಇದೇ ತೀರ್ಪನ್ನು ಸುಪ್ರೀಂ ಕೋರ್ಟ್‌ ಪುನರಾವರ್ತಿಸಿದೆ.

ಕುಟುಂಬದ ಜತೆಗೆ ಸ್ವತಂತ್ರವಾಗಿರುವ ಆಸೆ:ನಳಿನಿ ಅವರು ಇನ್ನು ಮುಂದೆ ತಮ್ಮ ಕುಟುಂಬದವರೊಂದಿಗೆ ಸ್ವತಂತ್ರವಾಗಿ ಇರಲಿದ್ದಾರೆ. ಅದೇ ಅವರಿಗೆ ಮುಖ್ಯ ಎಂದು ಅವರ ಸೋದರ ಭಾಗ್ಯನಾಥನ್ ಹೇಳಿದ್ದಾರೆ.

ರಾಜೀವ್ ಹಂತಕರಲ್ಲಿ ಒಬ್ಬರಾದ ಮುರುಗನ್, ನಳಿನಿ ಅವರ ಪತಿ. ಬಂಧನದ ಸಂದರ್ಭದಲ್ಲಿ ನಳಿನಿ ಗರ್ಭಿಣಿಯಾಗಿದ್ದರು. ಜೈಲಿನಲ್ಲೇ ಅವರಿಗೆ ಹೆರಿಗೆಯಾಗಿತ್ತು. ಐದು ವರ್ಷದವರೆಗೆ ಅವರ ಮಗಳನ್ನು ಜೈಲಿನಲ್ಲೇ ಬೆಳೆಸಲಾಗಿತ್ತು. ಆನಂತರ ಕುಟುಂಬದ ಸದಸ್ಯರ ಸುಪರ್ದಿಗೆ ನೀಡಲಾಗಿತ್ತು.

ನಳಿನಿ ಅವರ ಮಗಳು ಈಗ ಬ್ರಿಟನ್‌ನಲ್ಲಿದ್ದು, ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಸೋನಿಯಾ ಮನವಿ ಮೇರೆಗೆ ಮಾರ್ಪಾಡು
ನಳಿನಿ ಅವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಬೇಕು ಎಂದು ಸೋನಿಯಾ ಗಾಂಧಿ ಅವರು ತಮಿಳುನಾಡಿನ ಅಂದಿನ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಆ ಮನವಿಯನ್ನು ಪುರಸ್ಕರಿಸಿದ್ದ ರಾಜ್ಯಪಾಲರು,2001ರಲ್ಲಿ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಿದ್ದರು.

ಸೋನಿಯಾ ಅವರು ನಳಿನಿ ಅವರನ್ನು ಒಮ್ಮೆ ಭೇಟಿಯಾಗಿ ಮಾತನಾಡಿದ್ದರು. ತಮ್ಮ ತಂದೆಯ ಹಂತಕರನ್ನು ಕ್ಷಮಿಸಿದ್ದೇವೆ ಎಂದು ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಹಲವು ಬಾರಿ ಹೇಳಿದ್ದಾರೆ.

ಕಾಂಗ್ರೆಸ್‌ ಅಸಮಾಧಾನ...
‘ರಾಜೀವ್ ಹಂತಕರನ್ನು ಬಿಡುಗಡೆ ಮಾಡುವ ನಿರ್ಧಾರವು ತಪ್ಪು ಮತ್ತು ಅದು ಒಪ್ಪತಕ್ಕದ್ದಲ್ಲ. ಇದನ್ನು ಕಾಂಗ್ರೆಸ್‌ ಖಂಡಿಸುತ್ತದೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಹೇಳಿದ್ದಾರೆ.

‘ಈ ಆದೇಶದ ವಿರುದ್ಧ ಎಲ್ಲಾ ಸ್ವರೂಪದ ಕಾನೂನು ಹೋರಾಟದ ಸಾಧ್ಯತೆಗಳನ್ನು ಪರಿಶೀಲಿಸುತ್ತೇವೆ’ ಎಂದು ಪಕ್ಷದ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.

‘ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಹಂತಕರನ್ನು ಕ್ಷಮಿಸಿದ್ದಾರೆ ಎಂದು ಕಾಂಗ್ರೆಸ್‌ನ ಈ ನಿಲುವನ್ನು ಈಗ ಪ್ರಶ್ನಿಸಲಾಗುತ್ತದೆ. ಈ ವಿಚಾರದಲ್ಲಿ ಸೋನಿಯಾ ಅವರ ಕುಟುಂಬದ ನಿಲುವು ಮತ್ತು ಪಕ್ಷದ ನಿಲುವು ಸಂಪೂರ್ಣ ಭಿನ್ನವಾಗಿವೆ. ಅವರ ನಿಲುವನ್ನು ಪಕ್ಷವು ಹಿಂದೆಯೂ ಒಪ್ಪಿರಲಿಲ್ಲ, ಈಗಲೂ ಒಪ್ಪುವುದಿಲ್ಲ’ ಎಂದು ಅವರು ಹೇಳಿದ್ದಾರೆ.

‘ಇದು ದೇಶದ ಪ್ರಧಾನಿಯ ಹತ್ಯೆಯ ವಿಚಾರ ಆಗಿರುವ ಕಾರಣ, ಇದು ದೇಶದ ಸಾರ್ವಭೌಮತೆ ಮತ್ತು ಏಕತೆಗೆ ಸಂಬಂಧಿಸಿದ ವಿಚಾರವೂ ಆಗಿದೆ. ಈ ಕಾರಣದಿಂದಲೇ ಹಿಂದಿನ ಸರ್ಕಾರಗಳೂ ಹಂತಕರ ಅವಧಿಪೂರ್ವ ಬಿಡುಗಡೆಯನ್ನು ವಿರೋಧಿಸಿದ್ದವು. ಈಗಿನ ಸರ್ಕಾರವೂ ಅದನ್ನೇ ಮಾಡಿದೆ’ ಎಂದು ಅವರು ಹೇಳಿದ್ದಾರೆ.

*
ಇವರೆಲ್ಲಾ 33 ವರ್ಷ ಜೈಲಿನಲ್ಲಿದ್ದರು. ಈ ಬಿಡುಗಡೆಯನ್ನು ವಿರೋಧಿಸುತ್ತಿರುವವರು ದೇಶದ ಕಾನೂನನ್ನು ಗೌರವಿಸಬೇಕು ಎಂದು ಕೇಳಿಕೊಳ್ಳುತ್ತೇನೆ.
-ಭಾಗ್ಯನಾಥನ್, ನಳಿನಿ ಶ್ರೀಹರನ್ ಸೋದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT