ಒಂದಿಂಚು ನೆಲವನ್ನು ಅತಿಕ್ರಮಿಸಲು ಮುಂದಾದರೂ ತಕ್ಕ ಉತ್ತರ ನೀಡಲಿದ್ದೇವೆ: ರಾಜನಾಥ್

ಪಿತೋರ್‌ಗಢ: ಭಾರತವು ಸದಾ ನೆರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬಯಸುತ್ತದೆ. ಆದರೆ, ಯಾವುದೇ ದೇಶವು ನಮ್ಮ ಒಂದಿಂಚು ನೆಲವನ್ನು ಅತಿಕ್ರಮಿಸಲು ಮುಂದಾದರೂ ತಕ್ಕ ತಿರುಗೇಟು ನೀಡಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವ ಉತ್ತರಾಖಂಡಕ್ಕೆ ಭೇಟಿ ನೀಡಿದ ಅವರು, ಪಿತೋರ್‌ಗಢದ ಮೂನಾಕೋಟ್‌ನಲ್ಲಿ ಬಿಜೆಪಿಯ ‘ಶಾಹೀದ್ ಸಮ್ಮಾನ್ ಯಾತ್ರಾ’ದ ಎರಡನೇ ಹಂತಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ನಾವು ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಬಯಸುತ್ತೇವೆ. ಈವರೆಗೆ ಬೇರೆ ದೇಶಗಳ ಜಾಗವನ್ನು ಅತಿಕ್ರಮಿಸಿಲ್ಲ. ನೆರೆ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದುವುದು ಭಾರತದ ಸಂಸ್ಕೃತಿ. ಆದರೆ ಕೆಲವರಿಗೆ ಅದು ಅರ್ಥವಾಗುವುದಿಲ್ಲ. ಅದು ಅವರ ಅಭ್ಯಾಸವೋ ಅಥವಾ ಸ್ವಭಾವವೋ ನನಗೆ ತಿಳಿದಿಲ್ಲ’ ಎಂದು ಹೇಳಿದ್ದಾರೆ.
ಓದಿ: ಸಂಪುಟ ಸಭೆ ಅನುಮೋದನೆ ಪಡೆಯದೇ ಕಾನೂನು ರದ್ದುಗೊಳಿಸುವ ನಿರ್ಧಾರ ಪ್ರಕಟ: ಚಿದಂಬರಂ
ಭಯೋತ್ಪಾದನಾ ಚಟುವಟಿಕೆಗಳ ಮೂಲಕ ಸದಾ ಭಾರತವನ್ನು ಅಸ್ಥಿರಗೊಳಿಸಲು ಪಾಕಿಸ್ತಾನವು ಯತ್ನಿಸುತ್ತಿದೆ. ಆ ದೇಶಕ್ಕೆ ಈಗಾಗಲೇ ಕಠಿಣ ಸಂದೇಶ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪಶ್ಚಿಮದ ಗಡಿಯಲ್ಲಿ ಮಿತಿ ಮೀರಿ ವರ್ತಿಸಿದ ನೆರೆ ರಾಷ್ಟ್ರಕ್ಕೆ ನಾವು ಸ್ಪಷ್ಟ ಸಂದೇಶ ನೀಡಿದ್ದೇವೆ. ತಿರುಗೇಟು ನೀಡುವುದು ಮಾತ್ರವಲ್ಲ, ಅಗತ್ಯವಾದಲ್ಲಿ ಸರ್ಜಿಕಲ್ ಮತ್ತು ವೈಮಾನಿಕ ದಾಳಿ ನಡೆಸಲೂ ಸಿದ್ಧರಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಈ ವಿಷಯಗಳನ್ನು ಅರ್ಥ ಮಾಡಿಕೊಳ್ಳದ ಮತ್ತೊಂದು ನೆರೆ ರಾಷ್ಟ್ರವೂ ಇದೆ ಎಂದು ಚೀನಾದ ಹೆಸರು ಉಲ್ಲೇಖಿಸದೇ ರಾಜನಾಥ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.